ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆಸ್ತಿಗಳ ಮಾಲೀಕತ್ವ: ಸಭೆಯಲ್ಲಿ ಜಟಾಪಟಿ

ಪ್ರಸ್ತಾವಿತ ವಕ್ಫ್‌ (ತಿದ್ದುಪಡಿ) ಮಸೂದೆಗೆ ಸಂಬಂಧಿಸಿದ ಸಂಸತ್‌ನ ಜಂಟಿ ಸಮಿತಿ ಸಭೆ
Published : 8 ಸೆಪ್ಟೆಂಬರ್ 2024, 15:56 IST
Last Updated : 8 ಸೆಪ್ಟೆಂಬರ್ 2024, 15:56 IST
ಫಾಲೋ ಮಾಡಿ
Comments

ನವದೆಹಲಿ (ಪಿಟಿಐ): ವಕ್ಫ್‌ (ತಿದ್ದುಪಡಿ) ಮಸೂದೆಗೆ ಸಂಬಂಧಿಸಿದ ಸಂಸತ್‌ನ ಜಂಟಿ ಸಮಿತಿಯ ಸಭೆಗಳು ಆಸ್ತಿಗಳ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಸರ್ಕಾರದ ವಿವಿಧ ಸಚಿವಾಲಯ, ಸಂಸ್ಥೆಗಳು ಹಾಗೂ ವಿರೋಧ ಪಕ್ಷಗಳ ಸದಸ್ಯರ ನಡುವೆ ಜಟಾಪಟಿ ನಡೆಯುತ್ತಿದೆ. 

ತಮಗೆ ಸೇರಿದ ಆಸ್ತಿಯನ್ನು ವಕ್ಪ್‌ ಮಂಡಳಿಗಳು ತಮ್ಮದೆಂದು ಘೋಷಿಸಿಕೊಂಡಿವೆ ಎಂದು ಸಚಿವಾಲಯಗಳು ಮತ್ತು ಸರ್ಕಾರಿ ಸಂಸ್ಥೆಗಳು ಹೇಳಿಕೊಂಡಿವೆ. ಇದಕ್ಕೆ ಪ್ರತಿಯಾಗಿ ವಿರೋಧ ಪಕ್ಷಗಳ ಸದಸ್ಯರು, ‘ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಸೇರಿದಂತೆ ವಿವಿಧ ಸರ್ಕಾರಿ ಸಂಸ್ಥೆಗಳು ವಕ್ಫ್‌ ಮಂಡಳಿಗಳಿಗೆ ಸೇರಿದ ಆಸ್ತಿಗಳನ್ನು ಅನಧಿಕೃತವಾಗಿ ನಿಯಂತ್ರಣದಲ್ಲಿ ಇಟ್ಟುಕೊಂಡಿವೆ’ ಎಂದು ಹೇಳಿಕೊಂಡಿದ್ದಾರೆ. 

ಸಭೆಯಲ್ಲಿ ಪ್ರಮುಖವಾಗಿ ಧ್ವನಿ ಎ‌ತ್ತುತ್ತಿರುವ ಎಐಎಂಐಎಂನ ಅಸಾದುದ್ದೀನ್‌ ಒವೈಸಿ ಅವರು ದೆಹಲಿ ಒಂದರಲ್ಲೇ ವಕ್ಫ್‌ಗೆ ಸೇರಿದ 172 ಆಸ್ತಿಗಳನ್ನು ಎಎಸ್‌ಐ ಅನಧಿಕೃತವಾಗಿ ತನ್ನ ಬಳಿ ಇಟ್ಟುಕೊಂಡಿದೆ ಎಂದು ಹೇಳಿದ್ದಾರೆ.  

‘120 ಸಂರಕ್ಷಿತ ಸ್ಮಾರಕಗಳನ್ನು ತಮ್ಮದೆಂದು ವಿವಿಧ ವಕ್ಫ್‌ ಮಂಡಳಿಗಳು ಹೇಳಿಕೊಳ್ಳುತ್ತಿವೆ. ಅಲ್ಲಿ ಅನಧಿಕೃತವಾಗಿ ಕಟ್ಟಡಗಳನ್ನೂ ನಿರ್ಮಿಸುತ್ತಿವೆ’ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ಸಮಿತಿಗೆ ತಿಳಿಸಿತ್ತು. ಇದಕ್ಕೆ ಪ್ರತಿಯಾಗಿ ಒವೈಸಿ ಅವರು 172 ಆಸ್ತಿಗಳ ಪಟ್ಟಿಯನ್ನು ಬಿಜೆಪಿ ಸದಸ್ಯೆ ಜಗದಾಂಬಿಕ ಪಾಲ್‌ ನೇತೃತ್ವದ ಸಮಿತಿಗೆ ಸಲ್ಲಿಸಿದ್ದಾರೆ.

ಎಎಸ್‌ಐ ಮಾದರಿಯಲ್ಲಿ ರೈಲ್ವೆ ಮಂಡಳಿ, ನಗರ ವ್ಯವಹಾರಗಳ ಸಚಿವಾಲಯ, ಸಾರಿಗೆ ಸಚಿವಾಲಯ ಕೂಡ ವಕ್ಪ್‌ ಮಂಡಳಿಗಳ ವಿರುದ್ಧ ಆರೋಪ ಮಾಡಿವೆ. ಈ ನಾಲ್ಕೂ ಇಲಾಖೆಗಳು ಪ್ರಸ್ತಾವಿತ ತಿದ್ದುಪಡಿ ಮಸೂದೆಯನ್ನು ಬೆಂಬಲಿಸಿವೆ. 

‘ಶುಕ್ರವಾರ ನಡೆದಿದ್ದ ಸಮಿತಿಯ ಸಭೆಯಲ್ಲಿ 53 ಸಂರಕ್ಷಿತ ಸ್ಮಾರಕಗಳ ಆಸ್ತಿಗಳ ಪಟ್ಟಿಯನ್ನು ಪುರಾತತ್ವ ಸರ್ವೇಕ್ಷಣಾ ಇಲಾಖೆಯು ಹಂಚಿಕೊಂಡಿತ್ತಲ್ಲದೆ, ಸ್ಮಾರಕಗಳಿರುವ ಜಮೀನುಗಳನ್ನು ತನ್ನ ಸುಪರ್ದಿಗೆ ತೆಗೆದುಕೊಂಡ ದಶಕಗಳ ನಂತರ ಈ ಆಸ್ತಿಗಳ ಮಾಲೀಕತ್ವ ತಮ್ಮದೆಂದು ವಿವಿಧ ವಕ್ಫ್‌ ಮಂಡಳಿಗಳು ಘೋಷಿಸಿಕೊಂಡಿವೆ ಎಂದು ಹೇಳಿತ್ತು’ ಎಂದು ಮೂಲಗಳು ತಿಳಿಸಿವೆ. 

ಸಂಸತ್ತಿನ ಚಳಿಗಾಲದ ಅಧಿವೇಶನದ ಮೊದಲ ವಾರದಲ್ಲಿ ಸಮಿತಿಯು ತನ್ನ ಶಿಫಾರಸುಗಳನ್ನು ಸರ್ಕಾರಕ್ಕೆ ನೀಡಬೇಕಾಗಿರುವುದರಿಂದ ತಿದ್ದುಪಡಿ ಮಸೂದೆಗೆ ಸಂಬಂಧಿಸಿದಂತೆ ಎಲ್ಲ ಪಾಲುದಾರರಿಂದ ಅಭಿಪ್ರಾಯ ಸಂಗ್ರಹಿಸುವುದಕ್ಕಾಗಿ ಜಂಟಿ ಸಮಿತಿಯು ಪ್ರತಿದಿನ ಸಭೆಗಳನ್ನು ನಡೆಸುತ್ತಿದೆ.  

ಧಾರ್ಮಿಕ ಚಟುವಟಿಕೆಗಳಿಗಾಗಿ ಆಸ್ತಿಯನ್ನು ಬಳಸುತ್ತಿದ್ದುದನ್ನು ಆಧಾರವಾಗಿಟ್ಟುಕೊಂಡು ಆ ಆಸ್ತಿ ತನ್ನದೆಂದು ಘೋಷಿಸಿಕೊಳ್ಳುವ ವಕ್ಫ್‌ ಮಂಡಳಿಗಳ ಅಧಿಕಾರವನ್ನು ತಿದ್ದುಪಡಿ ಮಸೂದೆಯಲ್ಲಿ ತೆಗೆದು ಹಾಕಲಾಗಿದೆ. ಆಸ್ತಿಯ ಮಾಲೀಕತ್ವಕ್ಕೆ ಸಂಬಂಧಿಸಿದ ವಿವಾದವನ್ನು ಇತ್ಯರ್ಥ ಪಡಿಸುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ. ಮಂಡಳಿಗಳಿಗೆ ಮುಸ್ಲಿಮೇತರರನ್ನು ನಾಮನಿರ್ದೇಶನ ಮಾಡುವುದಕ್ಕೂ ಮಸೂದೆ ಅವಕಾಶ ನೀಡುತ್ತದೆ. ಮಸೂದೆಯನ್ನು ವಿರೋಧಿಸುತ್ತಿರುವ ಸಮಿತಿಯ ಸದಸ್ಯರು ಈ ಅಂಶಗಳಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT