ಹೈದರಾಬಾದ್: ತೆಲಂಗಾಣದಲ್ಲಿನ ಬಿಆರ್‌ಎಸ್ ನೇತೃತ್ವದ ಸರ್ಕಾರ ಬಡವರಿಗಾಗಿ ನಿರ್ಮಿಸುತ್ತಿರುವ ಮನೆಗಳ ಪರಿಶೀಲನೆಗಾಗಿ ಪಕ್ಷದ ಸ್ಥಳೀಯ ನಾಯಕರೊಂದಿಗೆ ಗುರುವಾರ ಸ್ಥಳಕ್ಕೆ ತೆರಳುತ್ತಿದ್ದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಹಾಗೂ ಕೇಂದ್ರ ಸಚಿವ ಜಿ.ಕಿಶನ್ ರೆಡ್ಡಿ ಅವರನ್ನು ಪೊಲೀಸರು ದಾರಿ ಮಧ್ಯೆಯೇ ತಡೆದು ವಶಕ್ಕೆ ಪಡೆದರು.
ಪಕ್ಷದ ನಾಯಕರು ಮತ್ತು ತಮ್ಮನ್ನು ಗೃಹ ಬಂಧನದಲ್ಲಿರಿಸಿದ ಪೊಲೀಸರ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ರೆಡ್ಡಿ, ‘ಬಿಆರ್‌ಎಸ್ ನೇತೃತ್ವದ ಸರ್ಕಾರದ ವಿರುದ್ಧ ಹೋರಾಟದ ಯುದ್ಧ ಆರಂಭವಾಗಿದೆ’ ಎಂದು ಗುಡುಗಿದರು.
‘ನಾನೇನು ಅಪರಾಧಿಯಾ?, ಭಯೋತ್ಪಾದಕನಾ? ಭಾರತದ ಎಲ್ಲಿಗೆ ಬೇಕಾದರೂ ಹೋಗಬಹುದಾದ ಹಕ್ಕು ನನಗಿದೆ’ ಎಂದು ಕಿಡಿಕಾರಿದ ಕೇಂದ್ರ ಸಚಿವರು; ಪಕ್ಷದ ಮುಖಂಡರೊಂದಿಗೆ ತಮ್ಮನ್ನು ತಡೆದ ಸ್ಥಳದಲ್ಲೇ ಕುಳಿತು ಆಕ್ರೋಶ ವ್ಯಕ್ತಪಡಿಸಿದರು. 9 ವರ್ಷದಿಂದ ಬಡವರಿಗೆ ಮನೆ ವಿತರಿಸಿಲ್ಲ ಎಂದು ಮುಖ್ಯಮಂತ್ರಿ ಕೆ.ಚಂದ್ರಶೇಖರರಾವ್ ವಿರುದ್ಧ ಹರಿಹಾಯ್ದರು.
ಪೊಲೀಸರು ಮನವೊಲಿಸಲು ಯತ್ನಿಸಿದರೂ ಸ್ಥಳದಿಂದ ಕದಲಲಿಲ್ಲ. ರಸ್ತೆಯಲ್ಲೇ ಕುಳಿತಿದ್ದ ಎಲ್ಲರನ್ನೂ ಪೊಲೀಸರು ವಶಕ್ಕೆ ಪಡೆದು, ಬಿಜೆಪಿಯ ಕೇಂದ್ರ ಕಚೇರಿಗೆ ಕರೆದೊಯ್ದು ಗೃಹಬಂಧನದಲ್ಲಿರಿಸಿದರು.
‘ಬಡವರಿಗೆ ಮನೆ ಕಟ್ಟಿಸಿಕೊಡುತ್ತಿರುವ ದೇಶದ ಏಕೈಕ ರಾಜ್ಯ ತೆಲಂಗಾಣ. ರಸ್ತೆಯಲ್ಲಿ ಕುಳಿತು ರಾಜಕೀಯ ನಾಟಕವಾಡುವ ಬದಲು, ಕೇಂದ್ರದಿಂದ ಅನುದಾನ ಕೊಡಿಸಲಿ. ಮೂರು ವರ್ಷಗಳಿಂದ ₹ 600 ಕೋಟಿ ಅನುದಾನ ನೀಡುವುದನ್ನು ಕೇಂದ್ರ ಸರ್ಕಾರ ಬಾಕಿ ಉಳಿಸಿಕೊಂಡಿದೆ’ ಎಂದು ತೆಲಂಗಾಣದ ಪಶುಸಂಗೋಪನಾ ಸಚಿವ ಟಿ.ಶ್ರೀನಿವಾಸ ಯಾದವ್ ತಿರುಗೇಟು ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.