ಕೋಲ್ಕತ್ತ: ಅತ್ಯಾಚಾರಿಗಳಿಗೆ ಮರಣ ದಂಡನೆ ವಿಧಿಸಲು ಅವಕಾಶ ನೀಡುವ ಮಸೂದೆಯನ್ನು ಪಶ್ಚಿಮ ಬಂಗಾಳ ವಿಧಾನಸಭೆಯು ಸರ್ವಾನುಮತದಿಂದ ಮಂಗಳವಾರ ಅಂಗೀಕರಿಸಿದೆ.
ಇಲ್ಲಿನ ಆರ್.ಜಿ.ಕರ್ ವೈದ್ಯಕೀಯ ಕಾಲೇಜು, ಆಸ್ಪತ್ರೆಯ ವೈದ್ಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಮತ್ತು ಆಕೆಯ ಕೊಲೆ ಪ್ರಕರಣ ಕುರಿತು ದೇಶದಾದ್ಯಂತ ಭಾರಿ ಆಕ್ರೋಶ ವ್ಯಕ್ತವಾಗುತ್ತಿರುವುದರ ನಡುವೆಯೇ ಈ ಮಸೂದೆಗೆ ಒಪ್ಪಿಗೆ ದೊರೆತಿದೆ.
ಅತ್ಯಾಚಾರಕ್ಕೆ ಒಳಗಾದ ಮಹಿಳೆ ಸಾವಿಗೀಡಾದಲ್ಲಿ ಅಥವಾ ಪ್ರಜ್ಞಾಹೀನ ಸ್ಥಿತಿ ತಲುಪಿದಲ್ಲಿ, ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸುವ ಅವಕಾಶವನ್ನು ಮಸೂದೆ ಒಳಗೊಂಡಿದೆ. ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿ ಎಂದು ಸಾಬೀತಾದ ವ್ಯಕ್ತಿಗೆ ಪೆರೋಲ್ ರಹಿತ ಜೀವಾವಧಿ ಶಿಕ್ಷೆ ನೀಡುವ ಅವಕಾಶವನ್ನೂ ಈ ಮಸೂದೆ ಹೊಂದಿದೆ.
ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ, ‘ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಡಿಸಿದ ಮಸೂದೆಯು, ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಮತ್ತು ಆಕೆಯ ಕೊಲೆ ಬಗ್ಗೆ ವ್ಯಕ್ತವಾಗುತ್ತಿರುವ ಸಾರ್ವಜನಿಕ ಆಕ್ರೋಶ ಮತ್ತು ಪ್ರತಿಭಟನೆಯಿಂದ ದೇಶದ ಗಮನವನ್ನು ಬೇರೆಡೆ ಸೆಳೆಯುವ ತಂತ್ರದ ಭಾಗವಾಗಿದೆ’ ಎಂದು ಆರೋಪಿಸಿದ್ದಾರೆ.
ಆದಾಗ್ಯೂ, ಬಿಜೆಪಿ ಸೇರಿದಂತೆ ವಿರೋಧ ಪಕ್ಷಗಳ ಎಲ್ಲ ಸದಸ್ಯರು ಈ ಮಸೂದೆಗೆ ಬೆಂಬಲ ಸೂಚಿಸಿದ್ದಾರೆ.
‘ಅಪರಾಜಿತ ಮಹಿಳೆ ಮತ್ತು ಮಕ್ಕಳ (ಪಶ್ಚಿಮ ಬಂಗಾಳ ಕ್ರಿಮಿನಲ್ ಕಾಯ್ದೆಗಳು ಮತ್ತು ತಿದ್ದುಪಡಿ) ಮಸೂದೆ–2024’ ಮಂಡನೆ ಹಾಗೂ ಅಂಗೀಕರಿಸುವುದಕ್ಕಾಗಿ ಎರಡು ದಿನಗಳ ವಿಶೇಷ ಅಧಿವೇಶವನ್ನು ಕರೆಯಲಾಗಿತ್ತು. ಕಾನೂನು ಸಚಿವ ಮಲಯ್ ಘಟಕ್ ಮಸೂದೆ ಮಂಡಿಸಿದರು.
‘ಮಹಿಳೆ ಮತ್ತು ಮಕ್ಕಳ ವಿರುದ್ಧ ನಡೆಯುವ ಹಿಂಸಾಕೃತ್ಯಗಳ ತನಿಖೆ ಮತ್ತು ವಿಚಾರಣೆಯನ್ನು ತ್ವರಿತವಾಗಿ ನಡೆಸುವುದಕ್ಕೆ ಅನುವಾಗುವಂತೆ ಚೌಕಟ್ಟನ್ನು ರೂಪಿಸಲು ಹೊಸದಾಗಿ ಜಾರಿಗೆ ಬಂದಿರುವ ಭಾರತೀಯ ನ್ಯಾಯ ಸಂಹಿತೆ–2023, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ–2023 ಹಾಗೂ ಪೋಕ್ಸೊ ಕಾಯ್ದೆ–2012ಕ್ಕೆ ಸೂಕ್ತ ತಿದ್ದುಪಡಿಯನ್ನು ಪ್ರಸ್ತಾವಿಸಲಾಗಿದೆ’ ಎಂದು ಮಸೂದೆಯಲ್ಲಿ ಹೇಳಲಾಗಿದೆ.
ಮಂಡನೆ–ಗದ್ದಲ: ತಿದ್ದುಪಡಿ ಮಸೂದೆಯು ಮಂಡನೆಯಾಗುತ್ತಿದ್ದಂತೆಯೇ ಬಿಜೆಪಿ ಶಾಸಕರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ, ಗದ್ದಲ ಎಬ್ಬಿಸಿದರು.
ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಆಕೆಯ ಕೊಲೆಗೆ ನೈತಿಕ ಹೊಣೆಹೊತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಮಮತಾ ಬ್ಯಾನರ್ಜಿ, ‘ಮಸೂದೆ ಅಂಗೀಕಾರವಾಗುವುದನ್ನು ತಡೆಯಲು ಕಲಾಪಕ್ಕೆ ಅಡ್ಡಿಪಡಿಸಿದ್ದಕ್ಕಾಗಿ ಸುವೇಂದು ಅಧಿಕಾರಿ ರಾಜೀನಾಮೆ ನೀಡಬೇಕು’ ಎಂದು ಗುಡುಗಿದರು.
‘ಅಪರಾಧಿಗಳಿಗೆ ಕಠಿಣ ಶಿಕ್ಷೆ ಮತ್ತು ಸಂತ್ರಸ್ತರಿಗೆ ತ್ವರಿತವಾಗಿ ನ್ಯಾಯ ಸಿಗುವಂತಾಗಲು ಸದ್ಯ ಜಾರಿಯಲ್ಲಿರುವ ಕಾಯ್ದೆಗಳಿಗೆ ತಿದ್ದುಪಡಿ ತರುವಂತೆ ಕೇಂದ್ರಕ್ಕೆ ಒತ್ತಾಯಿಸಿದ್ದೆವು. ಕೇಂದ್ರದಿಂದ ಸ್ಪಂದನೆ ದೊರೆಯದ ಕಾರಣ ನಾವೇ ಮೊದಲು ಈ ದಿಸೆಯಲ್ಲಿ ಹೆಜ್ಜೆ ಇಟ್ಟೆದ್ದೇವೆ’ ಎಂದು ಮಮತಾ ಬ್ಯಾನರ್ಜಿ ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಾವು ಈ ಸಂಬಂಧ ಬರೆದಿದ್ದ ಎರಡು ಪತ್ರಗಳನ್ನು ಸದನದಲ್ಲಿ ಪ್ರದರ್ಶಿಸಿದರು.
‘ಮಹಿಳೆಯರ ರಕ್ಷಣೆಗೆ ಸಂಬಂಧಿಸಿ ಕಠಿಣ ಕಾನೂನುಗಳನ್ನು ಜಾರಿಗೊಳಿಸುವಲ್ಲಿ ವಿಫಲರಾಗಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ಆಡಳಿತವಿರುವ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕು’ ಎಂದೂ ಆಗ್ರಹಿಸಿದರು.
‘ಟಿಎಂಸಿ ಸರ್ಕಾರ ತನ್ನ ಆಡಳಿತದ ಅವಧಿಯಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳದಂತಹ ಅಪರಾಧಗಳನ್ನು ತಡೆಗಟ್ಟುವಲ್ಲಿ ವಿಫಲವಾಗಿದೆ’ ಎಂದು ಟೀಕಿಸಿದ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ, ಆದರೆ, ಈ ಮಸೂದೆಗೆ ಬೆಂಬಲ ನೀಡುವುದಾಗಿ ಹೇಳಿದರು.
ಅತ್ಯಾಚಾರ ಪ್ರಕರಣಗಳ ಅಪರಾಧಿಗಳಿಗೆ ನೀಡುವ ಶಿಕ್ಷೆಗೆ ಸಂಬಂಧಿಸಿ ಭಾರತೀಯ ನ್ಯಾಯ ಸಂಹಿತೆಯಲ್ಲಿನ (ಬಿಎನ್‌ಎಸ್) ಕೆಲ ಸೆಕ್ಷನ್‌ಗಳಿಗೆ ತಿದ್ದುಪಡಿಗಳನ್ನು ಪಶ್ಚಿಮ ಬಂಗಾಳದ ನೂತನ ಮಸೂದೆ ಒಳಗೊಂಡಿದೆ
ಬಿಎನ್‌ಎಸ್ ಸೆಕ್ಷನ್ 64: ಅತ್ಯಾಚಾರ ಪ್ರಕರಣದ ಅಪರಾಧಿಗೆ 10 ವರ್ಷಗಳಿಗಿಂತಲೂ ಕಡಿಮೆ ಇಲ್ಲದ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಲು ಬಿಎನ್‌ಎಸ್ ಸೆಕ್ಷನ್ 64ರಡಿ ಅವಕಾಶ ಇದೆ. ಪಶ್ಚಿಮ ಬಂಗಾಳದ ‘ಅಪರಾಜಿತ ಮಸೂದೆ’ಯು ಈ ಸೆಕ್ಷನ್ ಅನ್ನು ತಿದ್ದುಪಡಿ ಮಾಡಿದ್ದು ‘ಅಪರಾಧಿಗೆ ಆತನ ಜೀವಿತಾವಧಿವರೆಗೆ ಜೈಲು ಶಿಕ್ಷೆ ಮತ್ತು ದಂಡ ಇಲ್ಲವೇ ಮರಣ ದಂಡನೆ’ ನೀಡುವ ಅವಕಾಶ ಸೇರಿಸಲಾಗಿದೆ
ಬಿಎನ್‌ಎಸ್ ಸೆಕ್ಷನ್ 66: ಅತ್ಯಾಚಾರದಿಂದಾಗಿ ಸಂತ್ರಸ್ತೆ ಮೃತಪಟ್ಟಲ್ಲಿ ಅಥವಾ ಆಕೆ ಪ್ರಜ್ಞಾಹೀನ ಸ್ಥಿತಿ ತಲುಪಿದಲ್ಲಿ ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ/ಜೀವಾವಧಿ ಶಿಕ್ಷೆ ಮತ್ತು ಮರಣ ದಂಡನೆ ವಿಧಿಸಲು ಈ ಸೆಕ್ಷನ್ ಅವಕಾಶ ನೀಡುತ್ತದೆ ‘ಅಪರಾಜಿತ ಮಸೂದೆ’ಯು ಇಂತಹ ಪ್ರಕರಣಗಳಲ್ಲಿ ಅಪರಾಧಿಗೆ ಮರಣ ದಂಡನೆ ವಿಧಿಸುವ ಅವಕಾಶ ನೀಡುತ್ತದೆ
ಬಿಎನ್‌ಎಸ್ ಸೆಕ್ಷನ್ 70: ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಿಸಿದ ಸೆಕ್ಷನ್ ಇದು. ಇಂತಹ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ 20 ವರ್ಷ ಜೈಲು ದಂಡ ವಿಧಿಸಲಾಗುತ್ತದೆ. ಪಶ್ಚಿಮ ಬಂಗಾಳದ ನೂತನ ಮಸೂದೆಯು 20 ವರ್ಷ ಜೈಲು ಶಿಕ್ಷೆಯನ್ನು ತೆಗೆದು ಹಾಕಿದೆ. ತಪ್ಪಿತಸ್ಥರಿಗೆ ಜೀವಾವಧಿ ಶಿಕ್ಷೆ ಮತ್ತು ಮರಣ ದಂಡನೆ ವಿಧಿಸಬಹುದಾದ ಅವಕಾಶವನ್ನು ಒಳಗೊಂಡಿದೆ
ಲೈಂಗಿಕ ಹಿಂಸೆಯ ಸಂತ್ರಸ್ತೆಯ ಗುರುತು ಬಹಿರಂಗಪಡಿಸಿದವರಿಗೆ ಬಿಎನ್‌ಎಸ್ ಅಡಿ ಗರಿಷ್ಠ 2 ವರ್ಷ ಜೈಲು ಶಿಕ್ಷೆ ವಿಧಿಸುವ ಅವಕಾಶ ಇದೆ. ಹೊಸ ಮಸೂದೆಯಲ್ಲಿ 3–5 ವರ್ಷ ಜೈಲು ಶಿಕ್ಷೆ ವಿಧಿಸುವ ಅವಕಾಶವನ್ನು ಸೇರಿಸಲಾಗಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.