ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Independence Day | ‘ಹರ್‌ ಘರ್‌ ನೌಕ್ರಿ’ ಇಂದಿನ ತುರ್ತು: ಮಲ್ಲಿಕಾರ್ಜುನ ಖರ್ಗೆ

Published : 15 ಆಗಸ್ಟ್ 2024, 13:59 IST
Last Updated : 15 ಆಗಸ್ಟ್ 2024, 13:59 IST
ಫಾಲೋ ಮಾಡಿ
Comments

ನವದೆಹಲಿ: ‘ದೇಶದ ಜನರ ಬದುಕು ದುಸ್ತರವಾಗುತ್ತಿದೆ. ‘ಹರ್‌ ಘರ್ ನೌಕ್ರಿ, ಹರ್‌ ಘರ್‌ ನ್ಯಾಯ’ ಇಂದಿನ ತುರ್ತು ಆಗಿದೆಯೇ ಹೊರತು, ಜನರಲ್ಲಿ ದ್ವೇಷ ಬಿತ್ತುವ ಉದ್ದೇಶದಿಂದ ರೂಪಿಸಿರುವ ‘ದೇಶ ವಿಭಜನೆಯ ಕರಾಳತೆ ಸ್ಮರಿಸುವ ದಿನವಲ್ಲ’ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗುರುವಾರ ಹೇಳಿದ್ದಾರೆ.

ಪಕ್ಷದ ಕೇಂದ್ರ ಕಚೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಹಾಗೂ ಆರ್‌ಎಸ್‌ಎಸ್‌ ವಿರುದ್ಧ ವಾಗ್ದಾಳಿ ನಡೆಸಿದರು.

‘ಆಡಳಿತಾರೂಢ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ತಮ್ಮ ಹಿತಾಸಕ್ತಿ ಸಾಧನೆಗಾಗಿ, ಬ್ರಿಟಿಷರ ಒಡೆದು ಆಳುವ ನೀತಿಯನ್ನು ಮುಂದುವರಿಸಿಕೊಂಡು ಹೋಗುತ್ತಿವೆ’ ಎಂದು ಖರ್ಗೆ ಟೀಕಿಸಿದರು.

‘ಮೋದಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ಈ 11 ತಿಂಗಳ ಅವಧಿಯಲ್ಲಿ ಜನಸಾಮಾನ್ಯರ ಸಂಕಷ್ಟ ಹೆಚ್ಚಾಗಿದೆ. ಅವರ ಜೀವನ ಗುಣಮಟ್ಟ ಸುಧಾರಿಸುವ ಬದಲು ಮತ್ತಷ್ಟು ಹದಗೆಡುತ್ತಿದೆ. ನಿರುದ್ಯೋಗ, ಹಣದುಬ್ಬರ, ಅಸಮಾನತೆ ಹಾಗೂ ಭ್ರಷ್ಟಾಚಾರಗಳೇ ಇದಕ್ಕೆ ಕಾರಣ’ ಎಂದರು.

ದೇಶದ ಪ್ರಗತಿ ಹಾಗೂ ಜನರ ಶ್ರೇಯೋಭಿವೃದ್ಧಿಗೆ ಕಾಂಗ್ರೆಸ್‌ ಬದ್ಧವಾಗಿದೆ. ಬಡವರು, ಪರಿಶಿಷ್ಟರು, ಬುಡಕಟ್ಟು ಜನರು, ಮಹಿಳೆಯರು, ರೈತರು ಹಾಗೂ ದುರ್ಬಲ ವರ್ಗದ ಜನರು, ಯುವಕರು ಹಾಗೂ ಮಧ್ಯಮ ವರ್ಗದ ಏಳಿಗೆಗೆ ಪಕ್ಷ ಆದ್ಯತೆ ನೀಡಲಿದೆ ಎಂದೂ ಹೇಳಿದರು. 

ಪ್ರಧಾನಿ ಮೋದಿ ನೇತೃತ್ವದ ಸರ್ಕಾರಕ್ಕೆ ಅಹಂಕಾರವಿದ್ದು ಈ ಕಾರಣಕ್ಕಾಗಿಯೇ ಅದು ವಾಸ್ತವ ಸಂಗತಿಗಳನ್ನು ಅರ್ಥ ಮಾಡಿಕೊಳ್ಳಲು ಸಿದ್ಧವಿಲ್ಲ  
ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್‌ ಅಧ್ಯಕ್ಷ

ಬಿಜೆಪಿ, ಆರ್‌ಎಸ್‌ಎಸ್‌ ಬಗ್ಗೆ ಖರ್ಗೆ ಟೀಕೆ

  • ಆರ್‌ಎಸ್‌ಎಸ್‌ನವರು ಕಳೆದ 60 ವರ್ಷಗಳಿಂದ ತ್ರಿವರ್ಣ ಧ್ವಜ ಆರೋಹಣ ಮಾಡಲು ಸಿದ್ಧರಿದ್ದಿಲ್ಲ. ಈಗ ‘ಹರ್ ಘರ್‌ ತಿರಂಗಾ‘ ಆಂದೋಲನ ಹಮ್ಮಿಕೊಳ್ಳುತ್ತಿದ್ದಾರೆ.

  • ನಮಗೆ ಸಾಮಾಜಿಕ ನ್ಯಾಯ ಆರ್ಥಿಕ ಮತ್ತು ರಾಜಕೀಯ ನ್ಯಾಯ ಬೇಕು. ದೇಶವು ಆರ್ಥಿಕ ಅಸಮಾನತೆ ಹಾಗೂ ನಿರುದ್ಯೋಗದಿಂದ ಮುಕ್ತಿ ಬಯಸುತ್ತಿದೆ.

  • ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ಕೊಡುಗೆಗಳನ್ನು ಸ್ಮರಿಸುವುದನ್ನು ಬಿಟ್ಟು ಈಗ ಕೇಂದ್ರದಲ್ಲಿ ಆಡಳಿತ ನಡೆಸುವವರು ವಿಭಜಕ ಚಿಂತನೆಯನ್ನು ಉತ್ತೇಜಿಸುತ್ತಿದ್ದಾರೆ .

  • ಸಂಘ ಪರಿವಾರದವರ ದ್ವೇಷ ತುಂಬಿದ ರಾಜಕಾರಣ ದೇಶವನ್ನು ಇಬ್ಭಾಗ ಮಾಡಿರುವುದು ಐತಿಹಾಸಿಕ ಸತ್ಯ. ಅವರಿಂದಾಗಿಯೇ ದೇಶ ವಿಭಜನೆಗೊಂಡಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT