ನವದೆಹಲಿ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಅಮೆರಿಕದಲ್ಲಿ ದೇಶ ವಿರೋಧಿ ಹೇಳಿಕೆ ನೀಡಿದ್ದಾರೆ ಎಂದು ಬಿಜೆಪಿ ಆರೋಪಿಸಿದ ಬೆನ್ನಲ್ಲೇ ಅದರ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, ರಾಹುಲ್ ಅವರು ಸಂವಿಧಾನವನ್ನು ಎತ್ತಿಹಿಡಿಯುವ ಬಗ್ಗೆ ಮಾತನಾಡಿದರೆ ಆಡಳಿತ ಪಕ್ಷಕ್ಕೆ ಏನು ಸಮಸ್ಯೆ ಎಂದು ಪ್ರಶ್ನೆ ಮಾಡಿದೆ.
ಭಾರತ ವಿರೋಧಿ ಧೋರಣೆ ಹೊಂದಿರುವ ಡೆಮಾಕ್ರಟಿಕ್ ಸಂಸದೆ ಇಲ್ಹಾನ್ ಒಮರ್ ಅವರನ್ನು ರಾಹುಲ್ ಅವರು ಭೇಟಿ ಮಾಡಿದ ಕುರಿತು ವ್ಯಕ್ತವಾದ ಟೀಕೆಗಳನ್ನು ಕಾಂಗ್ರೆಸ್ ತಳ್ಳಿ ಹಾಕಿದೆ. ಒಂದು ವೇಳೆ ಹಾಗೇನಾದರೂ ಭಾವಿಸಿದ್ದರೆ, ಅಧಿಕಾರದಲ್ಲಿರುವ ಬಿಜೆಪಿ ಅಮೆರಿಕದ ರಾಯಭಾರಿಯನ್ನು ಕರೆಸಿ, ಕ್ರಮ ತೆಗೆದುಕೊಳ್ಳಲಿ ಎಂದು ಹೇಳಿದೆ.
ಮೀಸಲಾತಿ ಕುರಿತು ರಾಹುಲ್ ಅವರ ಹೇಳಿಕೆಯನ್ನು ತೀವ್ರವಾಗಿ ಟೀಕಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ‘ಇದು ಕಾಂಗ್ರೆಸ್‌ನ ಮೀಸಲಾತಿ ವಿರೋಧಿ ಮುಖವನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ’ ಎಂದು ಹೇಳಿದ್ದಾರೆ.
ಈ ಕುರಿತು ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿರುವ ಅವರು, ದೇಶ ವಿಭಜಿಸಲು ಸಂಚು ರೂಪಿಸುವ ಶಕ್ತಿಗಳ ಜತೆ ನಿಲ್ಲುವುದು ಮತ್ತು ದೇಶ ವಿರೋಧಿ ಹೇಳಿಕೆ ನೀಡುವುದು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಅಭ್ಯಾಸವಾಗಿ ಹೋಗಿದೆ’ ಎಂದಿದ್ದಾರೆ.
ಅಮಿತ್ ಶಾ ಅವರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ನ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ, ‘ಅವರಿಗೆ ಕ್ರಮ ತೆಗೆದುಕೊಳ್ಳಲು ಹೇಳಿ. ನಂತರ ನಾವು ಪ್ರಧಾನಿ ಮತ್ತು ಗೃಹ ಸಚಿವರಿಬ್ಬರನ್ನೂ ಬಹಿರಂಗಪಡಿಸುತ್ತೇವೆ. ಪ್ರಧಾನಿ ವಿದೇಶಕ್ಕೆ ಹೋದಾಗ ಭಾರತ ಮತ್ತು ಭಾರತೀಯರ ಬಗ್ಗೆ ಭಯಾನಕ ಹೇಳಿಕೆಗಳನ್ನು ನೀಡಿದ್ದಾರಲ್ಲ, ಅದು ದೇಶ ವಿರೋಧಿಯಲ್ಲವೇ?’ ಎಂದು ಪ್ರಶ್ನಿಸಿದ್ದಾರೆ.
‘ನಾವು ಭಾರತದ ಸಂವಿಧಾನವನ್ನು ಎತ್ತಿಹಿಡಿಯುವ ಕುರಿತು ಮಾತನಾಡುತ್ತಿದ್ದೇವೆ. ಅದು ದೇಶ ವಿರೋಧಿಯೇ? ಈ ಕುರಿತು ನಾವು ಮಾತನಾಡಿದಾಗೆಲ್ಲ ಬಿಜೆಪಿಯವರಿಗೆ ಏನು ಸಮಸ್ಯೆ? ಬಿಜೆಪಿಯವರು ಸಂವಿಧಾನವನ್ನು ಏಕೆ ಅಷ್ಟೋಂದು ವಿರೋಧಿಸುತ್ತಾರೆ’ ಎಂದು ಅವರು ಕೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.