ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮೋದಿ ಅವರ ವಿರುದ್ಧ ದ್ವೇಷದ ರಾಜಕಾರಣ ಮಾಡುವುದು ಸೂಕ್ತವಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
ಈ ಕುರಿತು ಸೋಮವಾರ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಕಾಂಗ್ರೆಸ್ ಪಕ್ಷದ ದ್ವೇಷದ ರಾಜಕಾರಣ ಯಾವ ಮಟ್ಟಕ್ಕಿದೆ ಅಂದರೆ ನಿನ್ನೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಭಾಷಣವೇ ಸಾಕ್ಷಿ. ಮೋದಿಯವರನ್ನ ಪ್ರಧಾನಮಂತ್ರಿ ಸ್ಥಾನದಿಂದ ಇಳಿಸುವವರೆಗೂ ನಾನು ಸಾಯುವುದಿಲ್ಲ ಎಂಬ ಮಾತು ನಿಜಕ್ಕೂ ಆಶ್ಚರ್ಯ ತರುತ್ತದೆ. ಒಂದು ಪಕ್ಷದ ವರಿಷ್ಠರಾಗಿ, ಹಿರಿಯರಾಗಿ ತಮ್ಮ ಪಕ್ಷವನ್ನು ಸನ್ಮಾರ್ಗದಲ್ಲಿ ನಡೆಸುವ ಹೊಣೆ ಹೊತ್ತಿರುವ ಖರ್ಗೆ ಅವರು ಈ ರೀತಿ ದ್ವೇಷದ ರಾಜಕಾರಣ ಮಾಡುವುದು ಸೂಕ್ತವಲ್ಲ ಎಂದಿದ್ದಾರೆ.
ಇಷ್ಟಾದರೂ ಪ್ರಧಾನಿ ನರೇಂದ್ರ ಮೋದಿ ಅವರು, ಖರ್ಗೆ ಅವರು ಅಸ್ವಸ್ಥರಾಗಿದ್ದನ್ನು ಕಂಡು ಅವರ ಆರೋಗ್ಯದ ಬಗ್ಗೆ ವಿಚಾರಿಸಿದ್ದು ನಮ್ಮ ಪಕ್ಷದ ಬದ್ಧತೆ ಮತ್ತು ಶಿಸ್ತನ್ನು ಪ್ರತಿಬಿಂಬಿಸುತ್ತದೆ. ವಿರೋಧಿಯಾಗಿರಲಿ ವಿರೋಧ ಪಕ್ಷದವರೇ ಆಗಿರಲಿ ಅವರನ್ನು ಗೌರವಿಸುವುದು ನಮ್ಮ ಸಂಸ್ಕೃತಿ. ಭಗವಂತ ಅವರಿಗೆ ಇನ್ನಷ್ಟು ಆಯುರಾರೋಗ್ಯ ನೀಡಲಿ ಹಾಗೂ ಅವರು 2047ರ ವಿಕಸಿತ ಭಾರತದ ನಿರ್ಮಾಣಕ್ಕೆ ಸಾಕ್ಷಿಯಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.