ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೃಷಿಕರ ಬೇಡಿಕೆಗಳ ಇತ್ಯರ್ಥಕ್ಕೆ ಸಮಿತಿ ರಚನೆ: ಸುಪ್ರೀಂ ಕೋರ್ಟ್‌

Published 22 ಆಗಸ್ಟ್ 2024, 13:40 IST
Last Updated 22 ಆಗಸ್ಟ್ 2024, 16:56 IST
ಅಕ್ಷರ ಗಾತ್ರ

ನವದೆಹಲಿ: ಉಭಯ ರಾಜ್ಯಗಳ ಗಡಿ ಮಧ್ಯೆ ಇರುವ ಶಂಭು ಗಡಿಯಲ್ಲಿನ ಟ್ರ್ಯಾಕ್ಟರ್‌ಗಳು ಹಾಗೂ ಟ್ರಾಲಿಗಳನ್ನು ತೆರವುಗೊಳಿಸುವ ಸಂಬಂಧ ಪ್ರತಿಭಟನೆ ನಿರತ ರೈತರ ಮನವೊಲಿಸಿ ಎಂದು ಹರಿಯಾಣ ಮತ್ತು ಪಂಜಾಬ್‌ ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್‌ ಗುರುವಾರ ಸೂಚಿಸಿದೆ.

ಜೊತೆಗೆ, ‘ಕೃಷಿಕರ ‘ಎಲ್ಲ ಕಾಲದ’ ಬೇಡಿಕೆಗಳನ್ನು ಸೌಹಾರ್ದವಾಗಿ ಚರ್ಚಿಸಿ, ಪರಿಹಾರ ಕಲ್ಪಿಸಲು ಬಹುಸದಸ್ಯರ ಸಮಿತಿ ರಚಿಸಲಾಗುವುದು’ ಎಂದೂ ಸುಪ್ರೀಂ ಕೋರ್ಟ್‌ ಹೇಳಿದೆ.   

ಈ ವಿಚಾರಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಸೂರ್ಯಕಾಂತ್, ದೀಪಂಕರ್ ದತ್ತಾ, ಉಜ್ಜಲ್‌ ಭುಯಾನ್ ಅವರಿದ್ದ ಪೀಠವು ನಡೆಸಿತು. 

‘ಸುಪ್ರೀಂ ಕೋರ್ಟ್‌ ಹಾಗೂ ಎರಡೂ ರಾಜ್ಯಗಳ ಸರ್ಕಾರಗಳಿಗೆ ನಿಮ್ಮ ಬೇಡಿಕೆಗಳು/ಸಮಸ್ಯೆಗಳ ಕುರಿತು ಕಾಳಜಿ ಇದೆ ಎಂಬುದನ್ನು ಪ್ರತಿಭಟನೆ ರೈತರಿಗೆ ಮನವರಿಕೆ ಮಾಡಿಕೊಡಬೇಕು. ಅವರ ಸಮಸ್ಯೆಗಳ ಇತ್ಯರ್ಥಕ್ಕಾಗಿ ಸಮಿತಿಯೊಂದನ್ನು ರಚಿಸಲಾಗುತ್ತದೆ’ ಎಂಬುದನ್ನು ತಿಳಿಸುವಂತೆ ಹರಿಯಾಣ ಮತ್ತು ಪಂಜಾಬ್‌ ಸರ್ಕಾರಗಳಿಗೆ ಹೇಳಿದ ಪೀಠ, ವಿಚಾರಣೆಯನ್ನು ಸೆಪ್ಟೆಂಬರ್‌ 2ಕ್ಕೆ ಮುಂದೂಡಿತು.

‘ರೈತರಿಗೆ ಸಂಬಂಧಿಸಿದ ವಿಷಯಗಳನ್ನು ಒಳಗೊಂಡ ಪಟ್ಟಿಯನ್ನು ಸಲ್ಲಿಸುವಂತೆ ಕ್ರಮವಾಗಿ ಪಂಜಾಬ್‌ ಮತ್ತು ಹರಿಯಾಣ ರಾಜ್ಯಗಳ ಅಡ್ವೊಕೇಟ್‌ ಜನರಲ್‌ ಹಾಗೂ ಎಎಜಿ ಅವರಿಗೆ ಸಲಹೆ ನೀಡಿದ್ದೇವೆ. ಈ ವಿಷಯಗಳು ರಚನೆಗೊಳ್ಳಲಿರುವ ಸಮಿತಿಯು ಕೂಡ ಗಮನಿಸಲಿದೆ’ ಎಂದು ನ್ಯಾಯಮೂರ್ತಿಗಳು ತಿಳಿಸಿದ್ದಾರೆ.

‘ಪ್ರಸ್ತಾವಿತ ಸಮಿತಿಯು ಪರಿಶೀಲನೆ ನಡೆಸಲಿರುವ ವಿಷಯಗಳ ವ್ಯಾಪ್ತಿಯು ದೊಡ್ಡದಾಗಿರಲಿದೆ ಎಂದು ಪೀಠ ಈಗಾಗಲೇ ಸ್ಪಷ್ಟಪಡಿಸಿದೆ. ಬರುವ ದಿನಗಳಲ್ಲಿ, ಕಾನೂನು ಮತ್ತು ಸುವ್ಯವಸ್ಥೆಗೆ ಪದೇಪದೇ ಅಡ್ಡಿಯಾಗಬಹುದಾದ ಸಮಸ್ಯೆಗಳನ್ನು ಗುರುತಿಸಿ, ಸೌಹಾರ್ದ ಹಾಗೂ ನ್ಯಾಯಯುತವಾಗಿ ಅವುಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸಮಿತಿ ಶಿಫಾರಸುಗಳನ್ನು ಮಾಡಲಿದೆ. ಈ ಕುರಿತು ಮೂರು ದಿನಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಪೀಠ ತಿಳಿಸಿದೆ.

ಅರ್ಜಿದಾರರೊಬ್ಬರ ಪರ ಹಾಜರಿದ್ದ ವಕೀಲರು, ‘ಪಂಜಾಬ್‌ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಪ್ರತಾಪ್‌ ಸಿಂಗ್‌ ಬಜ್ವಾ ಅವರು ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿರುವ ಅರ್ಜಿಗೆ ಸಂಬಂಧಿಸಿ ಮೂಲ ದಾವೆದಾರರಾಗಿದ್ದಾರೆ. ಹೀಗಾಗಿ, ಉದ್ದೇಶಿತ ಸಮಿತಿಯಲ್ಲಿ ಅವರನ್ನು ಸೇರ್ಪಡೆ ಮಾಡಬೇಕು’ ಎಂದು ಪೀಠಕ್ಕೆ ಕೋರಿದರು.

ಹರಿಯಾಣ ಪರ ಹಾಜರಿದ್ದ, ಹಿರಿಯ ಹೆಚ್ಚುವರಿ ಅಡ್ವೊಕೇಟ್‌ ಜನರಲ್ ಲೋಕೇಶ್ ಸಿನ್ಹಾಲ್ ಇದಕ್ಕೆ ವಿರೋಧ ವ್ಯಕ್ತಪಡಿಸಿ, ‘ಉದ್ದೇಶಿತ ಸಮಿತಿಯಲ್ಲಿ ಯಾವ ರಾಜಕೀಯ ವ್ಯಕ್ತಿಯೂ ಇರಕೂಡದು’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ‘ಯಾವುದೇ ರಾಜಕೀಯ ವ್ಯಕ್ತಿಯನ್ನು ಈ ಸಮಿತಿ ಸದಸ್ಯರನ್ನಾಗಿ ಮಾಡಲು ಅವಕಾಶ ನೀಡುವುದಿಲ್ಲ’ ಎಂದು ಹೇಳಿತು.

ಶಂಭು ಗಡಿಯಲ್ಲಿ ಹಾಕಿರುವ ತಡೆಗೋಡೆಯನ್ನು ವಾರದಲ್ಲಿ ತೆರವುಗೊಳಿಸಬೇಕು ಎಂದು ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಹರಿಯಾಣ ಸರ್ಕಾರ ಸುಪ್ರೀಂ ಕೋರ್ಟ್ ಮೇಟ್ಟಿಲೇರಿದೆ.

‘ಸುಪ್ರೀಂ ಕೋರ್ಟ್‌ ಆ. 12ರಂದು ನೀಡಿದ್ದ ಆದೇಶದ ಅನುಸಾರ ಪ್ರತಿಭಟನೆ ನಿರತ ರೈತರ ಜೊತೆಗೆ ಚರ್ಚಿಸಿದ್ದು, ಹೆದ್ದಾರಿ ತಡೆಯನ್ನು ಭಾಗಶಃ ಕೈಬಿಡಲು ಒಪ್ಪಿದ್ದಾರೆ’ ಎಂದು ಪಂಜಾಬ್ ಸರ್ಕಾರವು ಪೀಠಕ್ಕೆ ತಿಳಿಸಿತು.

ಸಂಯುಕ್ತ ಕಿಸಾನ್‌ ಮೋರ್ಚಾ ಮತ್ತು ಕಿಸಾನ್‌ ಮಜ್ದೂರ್ ಮೋರ್ಚಾ ರೈತ ಸಂಘಟನೆಗಳು ರೈತರ ಧರಣಿ ಬೆಂಬಲಿಸಿ ದೆಹಲಿ ಚಲೋ ಅಭಿಯಾನಕ್ಕೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಹರಿಯಾಣ ಸರ್ಕಾರ ಅಂಬಾಲಾ –ನವದೆಹಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನೆ ಹತ್ತಿಕ್ಕಲು ತಡೆಗೋಡೆಯನ್ನು ರಚಿಸಿತ್ತು.

ನ್ಯಾಯಪೀಠದ ಸೂಚನೆಗಳು

  • ರೈತರೊಂದಿಗೆ ಮಾತುಕತೆ ನಡೆಸುವ ಕಾರ್ಯವನ್ನು ಪಂಜಾಬ್‌ ಮತ್ತು ಹರಿಯಾಣ ಸರ್ಕಾರಗಳು ಜಂಟಿಯಾಗಿ ನಿಭಾಯಿಸಬೇಕು

  • ಮುಂದಿನ ವಿಚಾರಣೆ ವೇಳೆ, ಮಾತುಕತೆಯಲ್ಲಿನ ಪ್ರಗತಿ ಕುರಿತು ನ್ಯಾಯಾಲಯಕ್ಕೆ ಮಾಹಿತಿ ನೀಡಬೇಕು

  • ರೈತರೊಂದಿಗೆ ಮಾತುಕತೆ ನಂತರ ಉಭಯ ರಾಜ್ಯ ಸರ್ಕಾರಗಳಿಗೆ ಶಿಫಾರಸುಗಳನ್ನು ಮಾಡುವ ಅಧಿಕಾರವನ್ನು ಸಮಿತಿ ಹೊಂದಿರಲಿದೆ. ಅಗತ್ಯವೆನಿಸಿದಲ್ಲಿ ಕೇಂದ್ರ ಸರ್ಕಾರಕ್ಕೂ ಶಿಫಾರಸುಗಳನ್ನು ಮಾಡಬಹುದು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT