ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಹಾರದ ಆಸೆ: ರೈಲು ದುರಂತದಲ್ಲಿ 'ಪತಿ ನಿಧನ' ಎಂದು ಸುಳ್ಳು ಹೇಳಿ ಸಿಕ್ಕಿಬಿದ್ದ ಮಹಿಳೆ

Published 7 ಜೂನ್ 2023, 11:53 IST
Last Updated 7 ಜೂನ್ 2023, 11:53 IST
ಅಕ್ಷರ ಗಾತ್ರ

ಬಾಲೇಶ್ವರ: ಒಡಿಶಾದ ಬಾಲೇಶ್ವರ ರೈಲು ದುರಂತದಲ್ಲಿ ಮೃತಪಟ್ಟವರಿಗೆ ರಾಜ್ಯ, ಕೇಂದ್ರ ಸರ್ಕಾರ ಹಾಗೂ ರೈಲ್ವೆ ಇಲಾಖೆ ಪರಿಹಾರ ಘೋಷಿಸಿವೆ. ಇದರ ಬೆನ್ನಲ್ಲೇ ಪರಿಹಾರದ ಆಸೆಗಾಗಿ ಮಹಿಳೆಯೊಬ್ಬರು ತಮ್ಮ ಪತಿಯೂ ಅಪಘಾತದಲ್ಲಿ ನಿಧನರಾಗಿದ್ದಾರೆ ಎಂದು ಸುಳ್ಳು ಹೇಳಿ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಒಡಿಶಾದ ಕಟಕ್‌ ಜಿಲ್ಲೆಯ ಮನಿಯಾಬಂದ ಗ್ರಾಮದ ಗೀತಾಂಜಲಿ ದತ್ತ ಎಂಬ ಮಹಿಳೆ, ಜೂನ್‌ 2ರಂದು ಸಂಭವಿಸಿದ ಅಪಘಾತದಲ್ಲಿ ತಮ್ಮ ಪತಿ ವಿಜಯ್‌ ದತ್ತ ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಮಾತ್ರವಲ್ಲದೇ, ಶವವೊಂದನ್ನು ತಮ್ಮ ಪತಿಯದ್ದು ಎಂದು ಗುರುತಿಸಿದ್ದಾರೆ. ಆದರೆ, ದಾಖಲೆಗಳ ಪರಿಶೀಲನೆ ಬಳಿಕ ಮಹಿಳೆ ಸುಳ್ಳು ಹೇಳಿರುವುದು ಗೊತ್ತಾಗಿದೆ. ಇಷ್ಟಾದರೂ, ಪೊಲೀಸರು ಯಾವುದೇ ಕಠಿಣ ಕ್ರಮ ಕೈಗೊಳ್ಳದೆ, ಮತ್ತೊಮ್ಮೆ ಹೀಗೆ ಮಾಡದಂತೆ ಎಚ್ಚರಿಕೆ ನೀಡಿ ಮನೆಗೆ ಕಳುಹಿಸಿದ್ದಾರೆ.

ಇಷ್ಟಕ್ಕೇ ಎಲ್ಲವೂ ಮುಗಿಯಲಿಲ್ಲ. ಈ ವಿಚಾರ ತಿಳಿದ ಮಹಿಳೆಯ ಪತಿ ಪೊಲೀಸರಿಗೆ, ಆಕೆಯ ವಿರುದ್ಧ ದೂರು ನೀಡಿದ್ದಾರೆ. 'ಸಾರ್ವಜನಿಕ ಹಣ ದೋಚಲು ಪ್ರಯತ್ನಿಸಿದ್ದಕ್ಕೆ ಮತ್ತು ನಾನು ಮೃತಪಟ್ಟಿರುವುದಾಗಿ ಸುಳ್ಳು ಹೇಳಿದ ಕಾರಣ ಗೀತಾಂಜಲಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು' ಎಂದು ಒತ್ತಾಯಿಸಿದ್ದಾರೆ.

ಇದೀಗ ಮಹಿಳೆ ಬಂಧನದ ಭೀತಿಯಿಂದ ತಲೆ ತಪ್ಪಿಸಿಕೊಂಡಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, ದಂಪತಿ ಕಳೆದ 13 ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ.

ಪ್ರಕರಣವು ಬಾಲೇಶ್ವರ ಜಿಲ್ಲೆಯಲ್ಲಿ ಆಗಿರುವುದರಿಂದ ಅಲ್ಲಿನ ಬಹನಾಗ ಠಾಣೆಯಲ್ಲೇ ದೂರು ದಾಖಲಿಸಿ ಎಂದು ಗೀತಾಂಜಲಿ ಅವರ ಪತಿಗೆ ಪೊಲೀಸರು ತಿಳಿಸಿದ್ದಾರೆ ಎಂದು ಮನಿಯಾಬಂದ ಠಾಣಾಧಿಕಾರಿ ಬಸಂತ್‌ ಕುಮಾರ್‌ ಸತ್‌ಪತಿ ಹೇಳಿದ್ದಾರೆ.

ಏತನ್ಮಧ್ಯೆ, ಒಡಿಶಾ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ಕೆ.ಜೆನಾ ಅವರು, ಮೃತದೇಹಗಳ ವಿಚಾರವಾಗಿ ಸುಳ್ಳು ಹೇಳಿಕೆಗಳನ್ನು ನೀಡುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ರೈಲ್ವೆ ಹಾಗೂ ಪೊಲೀಸ್‌ ಇಲಾಖೆಗೆ ಸೂಚನೆ ನೀಡಿದ್ದಾರೆ.

ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಅವರು ಮೃತರ ಸಂಬಂಧಿಕರಿಗೆ ₹ 5 ಲಕ್ಷ ಹಾಗೂ ಪ್ರಧಾನಿ ನರೇಂದ್ರ ಮೋದಿ ₹ 2 ಲಕ್ಷ ಪರಿಹಾರ ಘೋಷಿಸಿದ್ದಾರೆ. ರೈಲ್ವೆ ಇಲಾಖೆಯೂ ಮೃತರ ಕುಟುಂಬಗಳಿಗೆ ₹ 10 ಲಕ್ಷ ಪರಿಹಾರ ಪ್ರಕಟಿಸಿದೆ.

ಕೋರಮಂಡಲ್‌ ಎಕ್ಸ್‌ಪ್ರೆಸ್‌ ರೈಲು ಜೂನ್‌ 2ರ ಸಂಜೆ ವೇಳೆ ಗೂಡ್ಸ್‌ ರೈಲಿಗೆ ಡಿಕ್ಕಿ ಹೊಡೆದಿತ್ತು. ಕೋರಮಂಡಲ್‌ ಎಕ್ಸ್‌ಪ್ರೆಸ್‌ ರೈಲಿನ ಹಲವು ಬೋಗಿಗಳು ಪಕ್ಕದ ಹಳಿಯ ಮೇಲೆ ಬಿದ್ದಿದ್ದವು. ಬೆಂಗಳೂರು–ಹೌರಾ ಎಕ್ಸ್‌ಪ್ರೆಸ್‌ ರೈಲು ಈ ಬೋಗಿಗಳಿಗೆ ಅಪ್ಪಳಿಸಿತ್ತು. ಅಪಘಾತದಲ್ಲಿ 288 ಮಂದಿ ಮೃತಪಟ್ಟು, 1,200 ಜನರು ಗಾಯಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT