ನವದೆಹಲಿ: ನಾಲ್ಕನೇ ಹೆಣ್ಣುಮಗುವಿನ ಜನನದಿಂದ ಸಾಮಾಜಿಕ ನಿಂದನೆ ಅನುಭವಿಸುತ್ತಿದ್ದ 28 ವರ್ಷದ ಮಹಿಳೆಯೊಬ್ಬಳು ತನ್ನ ಆರು ದಿನದ ನವಜಾತ ಹೆಣ್ಣು ಶಿಶುವನ್ನು ಪಶ್ಚಿಮ ದೆಹಲಿಯ ಖಯಾಲಾದಲ್ಲಿ ಕೊಂದಿದ್ದಾಳೆ ಎಂದು ಪೊಲೀಸರು ಶನಿವಾರ ತಿಳಿಸಿದರು.
‘ಆರು ದಿನದ ನವಜಾತ ಶಿಶು ನಾಪತ್ತೆಯಾಗಿದೆ ಎಂದು ಶುಕ್ರವಾರ ಬೆಳಿಗ್ಗೆ 5.30ರ ಸುಮಾರಿಗೆ ಪೊಲೀಸರಿಗೆ ಕರೆ ಬಂದಿದ್ದು, ಸ್ಥಳೀಯ ಪೊಲೀಸರು ತಕ್ಷಣ ಸ್ಥಳಕ್ಕೆ ಹೋದರು’ ಎಂದು ಪೊಲೀಸ್ ಉಪ ಆಯುಕ್ತ (ಪಶ್ಚಿಮ) ವಿಚಿತ್ರ ವೀರ್ ಹೇಳಿದರು.
ಮಗುವಿನ ತಾಯಿ ಶಿವಾನಿ ಘಟನೆಯ ಹಿಂದಿನ ರಾತ್ರಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ, ತಾಯಿ ಮನೆಗೆ ತೆರಳಿದ್ದರು. ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಮಗುವಿಗೆ ಹಾಲುಣಿಸಿ ಮಲಗಿದ್ದು, ಸುಮಾರು 4.30ಕ್ಕೆ ಎಚ್ಚರವಾದಾಗ ಮಗು ನಾಪತ್ತೆಯಾಗಿದೆ ಎಂದು ಪೊಲೀಸರಿಗೆ ತಿಳಿಸಿದ್ದರು.
ನಂತರ, ಪೊಲೀಸ್ ತಂಡವು ತನಿಖೆ ಆರಂಭಿಸಿತು. ಈ ಸಮಯದಲ್ಲಿ ಶಿವಾನಿ ಅವರು ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗುವುದಾಗಿ ಹೇಳಿದರು. ಇದು ಪೊಲೀಸರಲ್ಲಿ ಅನುಮಾನ ಮೂಡಿಸಿತು. ಆದರೂ ಆಕೆಯ ಆರೋಗ್ಯ ಸ್ಥಿತಿಯ ಕಾರಣಕ್ಕೆ ಪೊಲೀಸರು ಹೋಗಲು ಅನುಮತಿಸಿದರು ಎಂದು ಡಿಸಿಪಿ ಹೇಳಿದರು.
ತನಿಖೆಯ ವೇಳೆ ಪೊಲೀಸರಿಗೆ ಪಕ್ಕದ ಮನೆಯ ಚಾವಣಿಯಲ್ಲಿ ಬ್ಯಾಗ್‌ವೊಂದು ಕಂಡುಬಂದಿದ್ದು, ಅದರಲ್ಲಿ ಮಗು ಪತ್ತೆಯಾಯಿತು. ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಮಗು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು ಎಂದು ವೀರ್ ಮಾಹಿತಿ ನೀಡಿದರು.
ನಂತರ ಶಿವಾನಿಯನ್ನು ವಿಚಾರಣೆಗೆ ಒಳಪಡಿಸಿದಾಗ ಅಪರಾಧವನ್ನು ಒಪ್ಪಿಕೊಂಡಳು. ಮೃತ ಶಿಶುವು ತನ್ನ ನಾಲ್ಕನೇ ಮಗಳು. ಇಬ್ಬರು ಹೆಣ್ಣುಮಕ್ಕಳು ಈಗಾಗಲೇ ಮೃತಪಟ್ಟಿದ್ದಾರೆ. ತನ್ನ ಕೃತ್ಯಕ್ಕೆ ಸಾಮಾಜಿಕ ನಿಂದನೆಯೇ ಕಾರಣವೆಂದು ಶಿವಾನಿ ತಿಳಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದರು.
ಶಿವಾನಿಯನ್ನು ಬಂಧಿಸಲಾಗಿದ್ದು, ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ವೀರ್ ಹೇಳಿದ್ದಾರೆ.