ಸೋನಭದ್ರ (ಉತ್ತರ ಪ್ರದೇಶ): ಇಲ್ಲಿನ ಬಛ್ರಾ ಗ್ರಾಮದಲ್ಲಿ ಮೇಕೆಗಳನ್ನು ಮಾರಾಟ ಮಾಡಿದ ವಿಚಾರವಾಗಿ ತಾಯಿ ಮತ್ತು ಮಗನ ನಡುವೆ ಶುಕ್ರವಾರ ರಾತ್ರಿ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. 50 ವರ್ಷದ ಮಹಿಳೆ ಕಮಲೇಶ್ ದೇವಿ ಎಂಬವರನ್ನು ಆಕೆಯ ಮಗ ಕುಶುನ್ ಬಿಹಾರಿ ಯಾದವ್ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ವಾಗ್ವಾದದ ವೇಳೆ ತಾಯಿಯ ತಲೆಗೆ ಗಟ್ಟಿಯಾದ ವಸ್ತುವಿನಿಂದ ಬಲವಾಗಿ ಹೊಡೆದಿರುವ ಆರೋಪಿ, ದೇಹವನ್ನು ಬಟ್ಟೆಗಳಿಂದ ಮುಚ್ಚಿದ್ದಾನೆ. ನಂತರ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತ್ರಿಭುವನ್ ನಾಥ್ ತ್ರಿಪಾಠಿ ಹೇಳಿದ್ದಾರೆ.
ಬೆಂಕಿ ಆವರಿಸುತ್ತಿದ್ದಂತೆ ನೆರೆ–ಹೊರೆಯವರು ಜಮಾಯಿಸಿದ್ದಾರೆ. ತಕ್ಷಣವೇ ಬೆಂಕಿ ನಂದಿಸಿದರಾದರೂ, ಅಷ್ಟೊತ್ತಿಗೆ ಮಹಿಳೆ ಮೃತಪಟ್ಟಿದ್ದರು ಎಂದೂ ತಿಳಿಸಿದ್ದಾರೆ.
ಆರೋಪಿಯನ್ನು ಬಂಧಿಸಲಾಗಿದೆ.
ಕಮಲೇಶ್ ದೇವಿ, ಯಾದವ್ ಮತ್ತು ಆತನ ಹೆಂಡತಿ ಒಂದೇ ಮನೆಯಲ್ಲಿ ವಾಸವಾಗಿದ್ದರು.