ನವದೆಹಲಿ: ಸಂಸತ್ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸುವ ಕಾನೂನು ಅನುಷ್ಠಾನಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳ ಕುರಿತು ವ್ಯಾಪಕ ಚರ್ಚೆ ಅಗತ್ಯ ಇದೆ. ಇದಕ್ಕಾಗಿ ಸರ್ವಪಕ್ಷಗಳ ಸಭೆ ಕರೆಯುವಂತೆ ಹಲವು ವಿರೋಧ ಪಕ್ಷಗಳು ಕೇಂದ್ರ ಸರ್ಕಾರವನ್ನು ಮಂಗಳವಾರ ಒತ್ತಾಯಿಸಿವೆ.

ಈ ಕುರಿತು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರಿಗೆ ವಿರೋಧ ಪಕ್ಷಗಳ ನಾಯಕರು ಪತ್ರ ಬರೆದಿದ್ದಾರೆ. ಐದು ರಾಜ್ಯಗಳ ವಿಧಾಸಭೆಗಳಿಗೆ ನಡೆಯಲಿರುವ ಚುನಾವಣೆಯು ಏಪ್ರಿಲ್ನಲ್ಲಿ ಪೂರ್ಣ ಗೊಳ್ಳಲಿದ್ದು, ಆ ನಂತರ ಸರ್ವಪಕ್ಷ ಸಭೆ ನಡೆಸಬೇಕು ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಲೆಟರ್ಹೆಡ್ನಲ್ಲಿ ಈ ಪತ್ರ ಬರೆಯಲಾಗಿದ್ದು, ಟಿಎಂಸಿ ಹೊರತುಪಡಿಸಿ ಇತರ ಹಲವು ವಿರೋಧ ಪಕ್ಷಗಳ ನಾಯಕರು ಸಹಿ ಹಾಕಿದ್ದಾರೆ. ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಅವರು ಈ ಪತ್ರವನ್ನು ಸಂಸತ್ ಭವನದಲ್ಲಿ ಸಚಿವ ರಿಜಿಜು ಅವರಿಗೆ ಸಲ್ಲಿಸಿದ್ದಾರೆ.

ಲೋಕಸಭಾ ಹಾಗೂ ವಿಧಾನಸಭಾ ಕ್ಷೇತ್ರಗಳ ಮರುವಿಂಗಡಣೆ ಪ್ರಕ್ರಿಯೆ ಪೂರ್ಣ ಗೊಳ್ಳುವುದಕ್ಕೂ ಮೊದಲೇ ಮಹಿಳಾ ಮೀಸಲಾತಿಗೆ ಸಂಬಂಧಿಸಿದ ಕಾಯ್ದೆಯನ್ನು ಜಾರಿಗೊಳಿಸಲು ಯೋಜಿಸಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಇದರ ಬೆನ್ನಲ್ಲೇ, ವಿರೋಧ ಪಕ್ಷಗಳು ಕೇಂದ್ರಕ್ಕೆ ಪತ್ರ ಬರೆದಿವೆ.

‘ನಾರಿ ವಂದನಾ ಅಧಿನಿಯಮ–2023 ಜಾರಿ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಸರ್ವಪಕ್ಷ ಸಭೆ ಕರೆಯುವಂತೆ ಕೋರಿ ಮಾರ್ಚ್ 16ರಂದು ನಿಮಗೆ ಪತ್ರ ಬರೆಯಲಾಗಿತ್ತು. 2023ರ ಸೆಪ್ಟೆಂಬರ್ನಲ್ಲಿ ನಾರಿ ಶಕ್ತಿ ವಂದನಾ ಮಸೂದೆಯನ್ನು ಅಂಗೀಕರಿಸಲಾಗಿತ್ತು. ಈಗ ಈ ಮಸೂದೆಗೆ ಇನ್ನಷ್ಟು ತಿದ್ದುಪಡಿ ತರುವುದಕ್ಕೆ ಸರ್ಕಾರ ಯೋಜಿಸಿದೆ. ಹೀಗಾಗಿ, ಈ ಎಲ್ಲ ವಿಚಾರಗಳ ಬಗ್ಗೆ ಚರ್ಚೆ ಅಗತ್ಯ’ ಎಂದು ಸಚಿವ ರಿಜಿಜು ಅವರಿಗೆ ಬರೆದ ಪತ್ರದಲ್ಲಿ ಹೇಳಲಾಗಿದೆ.

ಸಭೆಯಲ್ಲಿ ನಿರ್ಧಾರ: ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರ ಕಚೇರಿಯಲ್ಲಿ ಮಂಗಳವಾರ ಬೆಳಿಗ್ಗೆ ನಡೆದ ವಿಪಕ್ಷಗಳ ನಾಯಕರ ಸಭೆಯಲ್ಲಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವ ನಿರ್ಧಾರ ತೆಗೆದುಕೊಳ್ಳಲಾಯಿತು.

ಮಲ್ಲಿಕಾರ್ಜುನ ಖರ್ಗೆ, ಸಮಾಜವಾದಿ ಪಕ್ಷದ ರಾಮಗೋಪಾಲ್ ಯಾದವ್, ಎಎಪಿ ನಾಯಕ ಸಂಜಯ ಸಿಂಗ್, ಶಿವಸೇನಾದ(ಯುಬಿಟಿ) ಸಂಜಯ ರಾವುತ್, ಅರವಿಂದ ಸಾವಂತ್, ಸಿಪಿಎಂನ ಜಾನ್ ಬ್ರಿಟ್ಟಾಸ್, ಸಿಪಿಐನ ಪಿ.ಸಂತೋಷಕುಮಾರ್, ಎನ್ಸಿಪಿ(ಎಸ್ಪಿ)ಯ ಸುಪ್ರಿಯಾ ಸುಳೆ ಹಾಗೂ ಫೌಜಿಯಾ ಖಾನ್, ಜೆಎಂಎಂನ ಮಹುವಾ ಮಾಜಿ, ಜೋಬಾ ಮಾಜಿ, ಆರ್ಎಸ್ಪಿಯ ಎನ್.ಕೆ.ಪ್ರೇಮಚಂದ್ರನ್, ವಿಸಿಕೆ ನಾಯಕ ಟಿ.ತೊಲಕೊಪ್ಪಿಯನ್, ಐಯುಎಂಎಲ್ನ ಇ.ಟಿ.ಮೊಹಮ್ಮದ್ ಬಶೀರ್ ಪತ್ರಕ್ಕೆ ಸಹಿ ಹಾಕಿದ್ದಾರೆ.

ಕ್ಷೇತ್ರ ಮರುವಿಂಗಡಣೆಗೂ ಮೊದಲೇ ಜಾರಿಗೆ ಚಿಂತನೆ

ಲೋಕಸಭೆ ಹಾಗೂ ವಿಧಾನಸಭಾ ಕ್ಷೇತ್ರಗಳ ಮರುವಿಂಗಡಣೆ ಪ್ರಕ್ರಿಯೆ ಪೂರ್ಣಗೊಳ್ಳುವುದಕ್ಕೂ ಮೊದಲೇ ಮಹಿಳಾ ಮೀಸಲಾತಿಗೆ ಸಂಬಂಧಿಸಿದ ಕಾಯ್ದೆಯನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಮೂಲಗಳು ಹೇಳಿವೆ.

ಹೀಗಾಗಿ, ಈ ವಿಚಾರಕ್ಕೆ ಸಂಬಂಧಿಸಿದ ಎರಡು ಮಸೂದೆಗಳನ್ನು ಪ್ರಸಕ್ತ ಬಜೆಟ್ ಅಧಿವೇಶನದಲ್ಲಿ ಮಂಡಿಸಿ, ಅಂಗೀಕರಿಸಲು ಕೇಂದ್ರ ಸರ್ಕಾರ ಯೋಜಿಸಿದೆ. ನಾರಿ ಶಕ್ತಿ ವಂದನಾ ಅಧಿನಿಯಮ(ಮಹಿಳಾ ಮೀಸಲಾತಿ ಕಾಯ್ದೆ ಎಂದೂ ಕರೆಯಲಾಗುತ್ತದೆ) ತಿದ್ದುಪಡಿ ಮಸೂದೆ ಹಾಗೂ ಕ್ಷೇತ್ರ ಮರುವಿಂಗಡಣೆ ಕಾಯ್ದೆ ತಿದ್ದುಪಡಿಗೆ ಸಂಬಂಧಿಸಿದ ಮಸೂದೆಯನ್ನು ಮಂಡಿಸಲಾಗುತ್ತದೆ.

ಈ ವಿಚಾರವಾಗಿ ಒಮ್ಮತ ಮೂಡಿಸುವ ಪ್ರಯತ್ನದ ಭಾಗವಾಗಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಎನ್ಡಿಎ ಅಂಗಪಕ್ಷಗಳ ನಾಯಕರು ಹಾಗೂ ಕಾಂಗ್ರೆಸ್ ಹೊರತುಪಡಿಸಿ ಇತರ ವಿಪಕ್ಷಗಳ ಸಭಾ ನಾಯಕರೊಂದಿಗೆ ಪ್ರತ್ಯೇಕ ಸಭೆಗಳನ್ನು ನಡೆಸಿದ್ದಾರೆ.

ಪಿ.ವಿ.ಮಿಥುನ್ ರೆಡ್ಡಿ (ವೈಎಸ್ಆರ್ಸಿಪಿ), ಡಿಂಪಲ್ ಯಾದವ್(ಎಸ್ಪಿ), ಸುಪ್ರಿಯಾ ಸುಳೆ (ಎನ್ಸಿಪಿ–ಎಸ್ಪಿ), ಮನೋಜ್ ಝಾ(ಆರ್ಜೆಡಿ) ಹಾಗೂ ಅಸಾದುದ್ದೀನ್ ಒವೈಸಿ(ಎಐಎಂಐಎಂ) ಸೇರಿ ಹಲವು ವಿಪಕ್ಷ ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದರು. ಶಾ ಅವರು ಕಾಂಗ್ರೆಸ್ ನಾಯಕರೊಂದಿಗೆ ಬರುವ ದಿನಗಳಲ್ಲಿ ಸಮಾಲೋಚನೆ ನಡೆಸುವ ಸಾಧ್ಯತೆ ಇದೆ. ಆದರೆ, ಇದೇ ಅಧಿವೇಶನದಲ್ಲಿ ಈ ಮಸೂದೆಯನ್ನು ಮಂಡಿಸುವ ಸಾಧ್ಯತೆಗಳು ಕಡಿಮೆ ಎಂದು ಮೂಲಗಳು ತಿಳಿಸಿವೆ.

ಶೇ33ರಷ್ಟು ಮೀಸಲಾತಿ

ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ33ರಷ್ಟು ಮೀಸಲಾತಿ ಕಲ್ಪಿಸುವುದಕ್ಕೆ ಸಂಬಂಧಿಸಿ ಸಂವಿಧಾನಕ್ಕೆ ತಿದ್ದುಪಡಿ ತರಲಾಗಿದೆ. ಕ್ಷೇತ್ರಗಳ ಮರುವಿಂಗಡಣೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಈ ಕಾಯ್ದೆ ಜಾರಿಗೊಳ್ಳಲಿದೆ.

ಪ್ರಸ್ತುತ, ಲೋಕಸಭಾ ಸ್ಥಾನಗಳ ಸಂಖ್ಯೆ 543 ಇದ್ದು, ಇದನ್ನು 816ಕ್ಕೆ ಹೆಚ್ಚಿಸಲಾಗುತ್ತದೆ. ಈ ಪೈಕಿ 273 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗುತ್ತದೆ.

ಇದೇ ಸೂತ್ರದ ಆಧಾರದಲ್ಲಿ ರಾಜ್ಯ ವಿಧಾನಸಭೆಗಳಲ್ಲಿಯೂ ಮಹಿಳೆಯರಿಗೆ ಮೀಸಲಾತಿ ಕಲ್ಪಿಸಲಾಗುತ್ತದೆ.

ಸಂಸತ್ನ ಒಪ್ಪಿಗೆ ದೊರೆತ ಬಳಿಕ ಈ ಉದ್ದೇಶಿತ ಕಾಯ್ದೆಗಳು 2029ರ ಮಾರ್ಚ್ 31ರಿಂದ ಜಾರಿಗೆ ಬರಲಿವೆ

ಕೇಂದ್ರದ ನಡೆ ಸ್ವಾಗತಿಸಿದ ಸಂಸದೆಯರು

ಮಹಿಳೆಯರಿಗೆ ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮೀಸಲಾತಿ ಕಲ್ಪಿಸುವ ಮಸೂದೆಯನ್ನು ಅಧಿವೇಶನದಲ್ಲಿ ಮಂಡಿಸುವ ಕೇಂದ್ರ ಸರ್ಕಾರದ ಉದ್ದೇಶವನ್ನು ವಿವಿಧ ಪಕ್ಷಗಳ ಸಂಸದೆಯರು ಮಂಗಳವಾರ ಸ್ವಾಗತಿಸಿದ್ದಾರೆ.

‘ಆಡಳಿತದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಈ ಕ್ರಮವು ಮತ್ತಷ್ಟು ಬಲಪಡಿಸಲಿದ್ದು, ದೇಶದ ಅಭಿವೃದ್ಧಿಗೆ ವೇಗ ನೀಡಲಿದೆ’ ಎಂದು ಹೇಳಿರುವ ಜೆಡಿಯು ಸಂಸದೆ
ಲವ್ಲಿ ಆನಂದ, ಬಿಜೆಪಿ ಸಂಸದೆ ಕಮಲ್ಜೀತ್ ಸೆಹ್ರಾವತ್ ಹಾಗೂ ಸಮಾಜವಾದಿ ಪಕ್ಷದ ಇಕ್ರಾ ಹಸನ್ ಅವರು ಕೇಂದ್ರದ ನಡೆಯನ್ನು ಸ್ವಾಗತಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.