ಶನಿವಾರ, 2 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡನಗೌಡರು ಪ್ರತಿಭೆಯ ತ್ರಿವೇಣಿ ಸಂಗಮ

Last Updated 10 ಫೆಬ್ರವರಿ 2011, 20:25 IST
ಅಕ್ಷರ ಗಾತ್ರ

ಬೆಂಗಳೂರು: ‘ರಂಗಕರ್ಮಿ ಜೋಳದರಾಶಿ ದೊಡ್ಡನಗೌಡರು ಪ್ರತಿಭೆಯ ತ್ರಿವೇಣಿ ಸಂಗಮವಿದ್ದಂತೆ. ರಂಗಭೂಮಿ, ಸಾಹಿತ್ಯ ಮತ್ತು ಗಮಕ ಕಾವ್ಯ-ವಾಚನ ಮೂರು ಕ್ಷೇತ್ರಗಳಲ್ಲೂ ಪಾಂಡಿತ್ಯ ಗಳಿಸಿ ಸಾಧನೆ ಮಾಡಿದವರು’ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎಚ್. ಕೃಷ್ಣಯ್ಯ ಗುರುವಾರ ಇಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು.

ಕರ್ನಾಟಕ ನಾಟಕ ಅಕಾಡೆಮಿ, ಸಾಹಿತ್ಯ ಅಕಾಡೆಮಿ ಹಾಗೂ ಸಂಗೀತ- ನೃತ್ಯ ಅಕಾಡೆಮಿ ಸಂಯುಕ್ತ ಆಶ್ರಯದಲ್ಲಿ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಡಾ.ಕೆ. ಜೋಳದರಾಶಿ ದೊಡ್ಡನಗೌಡರ ಜನ್ಮಶತಮಾನೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ದೊಡ್ಡನಗೌಡರು ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಪಾಂಡಿತ್ಯ ಗಳಿಸಿ ದ್ದರು. ಉಭಯ ಭಾಷಾ ಕವಿ, ನಟ, ಗಮಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಅಭಿನಯಿಸುವಾಗ ಸಂದರ್ಭಕ್ಕೆ ತಕ್ಕಂತೆ ಮುಖಭಾವ ಬದಲಾವಣೆ, ಭಾಷಾ ಪ್ರಯೋಗ ಎಲ್ಲವನ್ನು ಸಹಜವಾಗಿ ಅಚ್ಚುಕಟ್ಟಾಗಿ ನಿರ್ವಹಿಸುತ್ತಿ ದ್ದರು’ಎಂದು ಅವರು ಸ್ಮರಿಸಿಕೊಂಡರು.

 ‘ವಿವಿಧ ಕ್ಷೇತ್ರಗಳಲ್ಲಿ ಅದ್ಭುತ ಸಾಧನೆ ಮಾಡಿದವರನ್ನು ಎರಡು- ಮೂರು ತಲೆಮಾರುಗಳ ಬಳಿಕ ಸ್ಮರಿಸುವವರೇ ಇಲ್ಲದಂತಾಗುತ್ತಿದೆ. ಇದು ಸರಿಯಲ್ಲ. ಸಾಂದರ್ಭಿಕವಾಗಿಯಾದರೂ ಸಾಧಕರನ್ನು ಸ್ಮರಿಸುವ, ಅವರ ಕೊಡುಗೆಯ ಬಗ್ಗೆ ಪ್ರಚಾರ ಮಾಡುವ ಕೆಲಸ ಆಗಬೇಕು’ ಎಂದರು.

‘ಬಹುಮುಖ ಪ್ರತಿಭೆಯ ದೊಡ್ಡನಗೌಡರ ಜನ್ಮ ಶತಮಾನೋತ್ಸವ ಸಮಾರಂಭ ಆಚರಿಸುತ್ತಿರುವುದು ಉತ್ತಮವಾಗಿದೆ. ಈ ಸಂದರ್ಭದಲ್ಲಿ ನಡೆಯುವ ಚರ್ಚೆ ಹಾಗೂ ವಿಚಾರಗೋಷ್ಠಿಗಳ ವಿವರಗಳನ್ನು ಪುಸ್ತಕ ರೂಪದಲ್ಲಿ ತಂದರೆ ಉತ್ತಮ. ಸಾಹಿತ್ಯಕ್ಕೆ ಅವರ ಕೊಡುಗೆ ಮಾತ್ರವಲ್ಲದೇ ಅವರ ಸಂಪೂರ್ಣ ವ್ಯಕ್ತಿತ್ವ, ಆಸಕ್ತಿಯನ್ನು ಬಿಂಬಿಸುವ ಕಾರ್ಯ ಆಗಬೇಕು’ ಎಂದು ಹೇಳಿದರು.

ಗಮಕಿ ಜಯಾ ರಾಜಶೇಖರ್, ‘ದೊಡ್ಡನಗೌಡರು ಹಾಸ್ಯ ಪ್ರೇಮಿಯಾಗಿದ್ದರೂ ಯಾರನ್ನೂ ನೋಯಿಸುವ ರೀತಿಯಲ್ಲಿ ಅಪಹಾಸ್ಯ ಮಾಡುತ್ತಿರಲಿಲ್ಲ. ತಮ್ಮ ಆತ್ಮಗೌರವಕ್ಕೆ ಕುಂದುಂಟಾದರೆ ಸಹಿಸುತ್ತಿರಲಿಲ್ಲ. ತಕ್ಷಣವೇ ಖಾರವಾದ ಪ್ರತಿಕ್ರಿಯೆ ನೀಡುತ್ತಿದ್ದರು. ರಂಗಭೂಮಿ, ಗಮಕ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆ ಅಪಾರ’ ಎಂದರು.

ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊ.ರು. ಚನ್ನಬಸಪ್ಪ ಮಾತನಾಡಿ, ‘ಹಾಸ್ಯ ಪ್ರವೃತ್ತಿಯವರಾಗಿದ್ದ ದೊಡ್ಡನಗೌಡರು ಭಾಷಾ ಪ್ರಯೋಗಕ್ಕೆ ಹೆಚ್ಚು ಮಹತ್ವ ನೀಡುತ್ತಿದ್ದರು. ಎಲ್ಲರಿಗೂ ಉತ್ತಮವಾಗಿ ಸ್ಪಂದಿಸುವ ಮನೋಭಾವದ ಅವರು ರಂಗಭೂಮಿಗೆ ಅಸಾಧಾರಣ ಕೊಡುಗೆ ನೀಡಿದ್ದಾರೆ. ಇಂತಹ ಶ್ರೇಷ್ಠ ವ್ಯಕ್ತಿಯ ಜನ್ಮ ಶತಮಾನೋತ್ಸವ ಸಮಾರಂಭದಲ್ಲಿ ದೊಡ್ಡಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳದಿರುವುದು ಬೇಸರದ ಸಂಗತಿ’ ಎಂದು ವಿಷಾದಿಸಿದರು.

ಕರ್ನಾಟಕ ಸಂಗೀತ-ನೃತ್ಯ ಅಕಾಡೆಮಿ ಅಧ್ಯಕ್ಷ ನರಸಿಂಹಲು ವಡವಾಟಿ, ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ. ರಾಜಾರಾಂ, ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT