ಬೆಂಗಳೂರು: ರಾಜ್ಯ ಸರ್ಕಾರ 10 ಮಹಾನಗರ ಪಾಲಿಕೆಗಳ ನೌಕರರ ಬೇಡಿಕೆ ಈಡೇರಿಸದಿದ್ದರೆ ಸೆಪ್ಟೆಂಬರ್ 5ರಿಂದ ಕೆಲಸ ಸ್ಥಗಿತಗೊಳಿಸಲು ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘ ತೀರ್ಮಾನಿಸಿದೆ.
ಮಂಗಳವಾರ ನಡೆದ ಸಂಘದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ನೌಕರರ ಬೇಡಿಕೆಗಳ ಈಡೇರಿಸಲು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮನವಿ ಮಾಡಲಾಗಿದೆ. ಐದು ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಸೆಪ್ಟೆಂಬರ್ 4ರವರೆಗೆ ಗಡುವು ನೀಡಲಾಗಿದೆ. ಅಲ್ಲಿಯವರೆಗೆ ಬೇಡಿಕೆ ಈಡೇರದಿದ್ದರೆ ಕೆಲಸ ಸ್ಥಗಿತ, ಪ್ರತಿಭಟನೆ ಮಾಡಲು ನಿರ್ಧರಿಸಲಾಯಿತು ಎಂದು ಸಂಘದ ಅಧ್ಯಕ್ಷ ಎ. ಅಮೃತ್‌ರಾಜ್ ತಿಳಿಸಿದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ರಮೇಶ್ ಸಂಗಾ, ಪಾಲಿಕೆ ನೌಕರರ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ವಿ.ವೆಂಕಟರಾಮ್, ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಸಿ.ಬಸವರಾಜಯ್ಯ, ಸಂಚಾಲಕ ಪ್ರಹ್ಲಾದ್ ಕುಲಕರ್ಣಿ ನೇತೃತ್ವದಲ್ಲಿ ಸಭೆ ನಡೆಯಿತು.
ಷಡಾಕ್ಷರಿ ಮಾತನಾಡಿ, ಪಾಲಿಕೆ ನೌಕರರ ಸಂಘದ ಹೋರಾಟಕ್ಕೆ ತನ್ನ ಸಂಘವು ಸಂಪೂರ್ಣ ಬೆಂಬಲ ನೀಡುತ್ತದೆ. ಸಚಿವರು, ಇಲಾಖೆಗೆ ಮನವಿ ಸಲ್ಲಿಸಿದರೂ ಸ್ಪಂದಿಸಲಿಲ್ಲ. ಸರ್ಕಾರ ನೌಕರರನ್ನು ಗೌರವಯುತ ನಡೆಸಿಕೊಳ್ಳಬೇಕು’ ಎಂದರು.
ಬೇಡಿಕೆಗಳೇನು?: ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ ಮತ್ತು ಪಾಲಿಕೆ ಅಧಿಕಾರಿ/ನೌಕರರಿಗೂ ಸಹ ಕೆ.ಜಿ.ಐ.ಡಿ. ಮತ್ತು ಜಿ.ಪಿ.ಎಫ್ ಸೌಲಭ್ಯವನ್ನು ಜಾರಿಗೆ ಮಾಡಬೇಕು. ಎರವಲು ಸೇವೆ ಅಧಿಕಾರಿ ಮತ್ತು ನೌಕರರನ್ನು ಮಾತೃ ಇಲಾಖೆಗೆ ಹಿಂತಿರುಗಿಸಿ ಮತ್ತು ಖಾಲಿ ಇರುವ ಎಲ್ಲಾ ವೃಂದದ ಮುಂಬಡ್ತಿಗಳನ್ನು ನೀಡಬೇಕು.