ಬೆಂಗಳೂರು: ನೇಮಕಾತಿ ಪ್ರಕ್ರಿಯೆ ಮುಗಿಯುವವರೆಗೆ ಚಾಲಕರ ಕೊರತೆ ಆಗದಂತೆ ನೋಡಿಕೊಳ್ಳಲು ಗುತ್ತಿಗೆ ಆಧಾರದಲ್ಲಿ 500 ಚಾಲಕರನ್ನು ನೇಮಿಸಿಕೊಳ್ಳಲು ಕೆಎಸ್‌ಆರ್‌ಟಿಸಿ ನಿರ್ಧರಿಸಿದೆ.
2016ರಲ್ಲಿ ನೇಮಕಾತಿ ನಡೆದಿತ್ತು. ಅಲ್ಲಿಂದ ಈಚೆಗಿನ ಏಳು ವರ್ಷಗಳಲ್ಲಿ 16 ಸಾವಿರ ಚಾಲಕರು, ನಿರ್ವಾಹಕರು, ತಾಂತ್ರಿಕ ಸಿಬ್ಬಂದಿ ನಿವೃತ್ತರಾಗಿದ್ದಾರೆ. ಇದರಿಂದ ಸಿಬ್ಬಂದಿಯ ಕೊರತೆ ಉಂಟಾಗಿದೆ. ಇದನ್ನು ನೀಗಿಸಲು ಸಾರಿಗೆ ಇಲಾಖೆ ಮುಂದಾಗಿದೆ. ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಕೆಕೆಆರ್‌ಟಿಸಿ ಮತ್ತು ಎನ್‌ಡಬ್ಲ್ಯುಕೆಆರ್‌ಟಿಸಿಯ 13,415 ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ಆರಂಭಿಸಿದೆ.
ಸಿಬ್ಬಂದಿ ಕೊರತೆಯಿಂದಾಗಿ ಹಲವು ಕಡೆಗಳಲ್ಲಿ ಬಸ್ ಇದ್ದರೂ ಓಡಿಸುವುದು ದುಸ್ತರ ಆಗಿದೆ. ನೇಮಕಾತಿ ಪ್ರಕ್ರಿಯೆಗೆ ಸಮಯ ಹಿಡಿಯುವುದರಿಂದ ಅಲ್ಲಿವರೆಗೆ ಕೊರತೆ ನೀಗಿಸಲು ತಾತ್ಕಾಲಿಕ ವ್ಯವಸ್ಥೆಗೆ ಮುಂದಾಗಿದೆ.
‘ಕೆಎಸ್‌ಆರ್‌ಟಿಸಿಯ 16 ವಿಭಾಗಗಳ ವ್ಯಾಪ್ತಿಯಲ್ಲಿ ತೀರ ಅಗತ್ಯ ಇರುವಲ್ಲಿ ಚಾಲಕರನ್ನು ನೇಮಕಾತಿ ಮಾಡಿಕೊಳ್ಳಲು ಸೂಚನೆ ನೀಡಿದ್ದೇನೆ. ಶಿವಮೊಗ್ಗ ಸಹಿತ ಕೆಲವು ಕಡೆಗಳಲ್ಲಿ ಈಗಾಗಲೇ ನೇಮಕಾತಿ ಮಾಡಿಕೊಂಡಿದ್ದಾರೆ. ಉಳಿದ ಕಡೆಗಳಲ್ಲಿ ಶೀಘ್ರ ಈ ಪ್ರಕ್ರಿಯೆ ನಡೆಯಲಿದೆ’ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬುಕುಮಾರ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ಒಟ್ಟು 500 ಸಿಬ್ಬಂದಿಯನ್ನು ತೆಗೆದುಕೊಳ್ಳಲಾಗುವುದು. ಈ ತಾತ್ಕಾಲಿಕ ಗುತ್ತಿಗೆಯ ಅವಧಿ 11 ತಿಂಗಳು ಆಗಿರುತ್ತದೆ. ಅಷ್ಟು ಹೊತ್ತಿಗೆ ನೇಮಕಾತಿ ಪ್ರಕ್ರಿಯೆ ಮುಗಿದಿರುತ್ತದೆ ಎಂದು ವಿವರಿಸಿದರು.
ಗುತ್ತಿಗೆ ಪದ್ಧತಿಯಲ್ಲಿ ಈಗಾಗಲೇ ಕೆಲಸಕ್ಕೆ ಹಾಜರು ಆಗಿರುವವರಿಗೆ ಆಯಾ ಡಿಪೊದಲ್ಲಿ ತರಬೇತಿ ನೀಡಲಾಗುತ್ತಿದೆ.
‘ನಾನು ನೇಮಕಾತಿಗೆ ಅರ್ಜಿ ಸಲ್ಲಿಸಿದ್ದೇನೆ. ಅದರ ಜೊತೆಗೆ ಈಗ ತಾತ್ಕಾಲಿಕವಾಗಿ ಗುತ್ತಿಗೆ ಆಧಾರದಲ್ಲಿ ಒಂದು ವಾರದಿಂದ ಕೆಲಸ ಮಾಡುತ್ತಿದ್ದೇನೆ. ನಮ್ಮ ಡಿಪೊ ವ್ಯಾಪ್ತಿಯಲ್ಲಿ 30 ಮಂದಿಯನ್ನು ತೆಗೆದುಕೊಂಡಿದ್ದಾರೆ’ ಎಂದು ಕೆಎಸ್‌ಆರ್‌ಟಿಸಿಯ ಶಿವಮೊಗ್ಗ ವಿಭಾಗದ ತಾತ್ಕಾಲಿಕ ಚಾಲಕರೊಬ್ಬರು ತಿಳಿಸಿದರು.
ನೇಮಕ ಪ್ರಕ್ರಿಯೆ: ಕೆಎಸ್‌ಆರ್‌ಟಿಸಿಯಲ್ಲಿ 3,745 ಚಾಲನಾ ಸಿಬ್ಬಂದಿ, 726 ತಾಂತ್ರಿಕ ಸಿಬ್ಬಂದಿಯ ನೇಮಕಾತಿಗೆ ಈಗಾಗಲೇ ಕರೆಯಲಾಗಿರುವ ಜಾಹೀರಾತು ಪ್ರಕ್ರಿಯೆಯನ್ನು ಮುಂದುವರಿಸಲಾಗಿದೆ. ಹೊಸದಾಗಿ ಕೆಎಸ್‌ಆರ್‌ಟಿಸಿಗೆ 1,433 ಚಾಲನಾ ಸಿಬ್ಬಂದಿ, 2,738 ತಾಂತ್ರಿಕ ಸಿಬ್ಬಂದಿ, ಬಿಎಂಟಿಸಿಗೆ 2,000 ನಿರ್ವಾಹಕರು, 1,000 ಚಾಲಕ ಕಂ ನಿರ್ವಾಹಕರು, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ 1,773 ನಿರ್ವಾಹಕರ ನೇಮಕಾತಿ ನಡೆಯಲಿದೆ.
11 ತಿಂಗಳ ಅವಧಿಗೆ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಲಿರುವವರಿಗೆ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ಇರುತ್ತದೆ
-ರಾಮಲಿಂಗಾರೆಡ್ಡಿ ಸಾರಿಗೆ ಸಚಿವ
ಸಿಬ್ಬಂದಿ ಇಲ್ಲದೇ ಬಸ್ ಓಡಾಟ ನಿಲ್ಲಬಾರದು ಎಂಬ ಕಾರಣಕ್ಕೆ ಕೆಎಸ್‌ಆರ್‌ಟಿಸಿಯಲ್ಲಿ ಈ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ.
-ವಿ. ಅನ್ಬು ಕುಮಾರ್ ವ್ಯವಸ್ಥಾಪಕ ನಿರ್ದೇಶಕ ಕೆಎಸ್‌ಆರ್‌ಟಿಸಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.