ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚಿದ ಕಾರ್ಯಭಾರ: 9,881 ಅತಿಥಿ ಉಪನ್ಯಾಸಕರ ಉದ್ಯೋಗಕ್ಕೆ ಕುತ್ತು

ಹೆಚ್ಚಿದ ಕಾರ್ಯಭಾರ: ಸರ್ಕಾರದ ಅವೈಜ್ಞಾನಿಕ ಕ್ರಮಗಳಿಗೆ ಅತಿಥಿ ಉಪನ್ಯಾಸಕರ ಆಕ್ಷೇಪ
Last Updated 2 ಫೆಬ್ರುವರಿ 2022, 20:41 IST
ಅಕ್ಷರ ಗಾತ್ರ

ಬೆಂಗಳೂರು: ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಕಾರ್ಯಭಾರ ಹೆಚ್ಚಿಸಿದ್ದರಿಂದ 9,881 ಮಂದಿ ಉದ್ಯೋಗ ಕಳೆದುಕೊಳ್ಳುವ ಆತಂಕ ಎದುರಿಸುತ್ತಿದ್ದಾರೆ.

2021-22ನೇ ಶೈಕ್ಷಣಿಕ ವರ್ಷಕ್ಕೆ ಅನ್ವಯವಾಗುವಂತೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 47 ವಿಷಯಗಳಿಗೆ ವಾರಕ್ಕೆ 15 ಗಂಟೆಗಳ ಬೋಧನೆಯ ಪೂರ್ಣ ಕಾರ್ಯಭಾರವಿರುವ 7,225 ಮತ್ತು ಭಾಗಶಃ ಕಾರ್ಯಭಾರವಿರುವ 3,411 ಸೇರಿ ಒಟ್ಟು 10,636 ಅತಿಥಿ ಉಪನ್ಯಾಸಕರ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತಿದೆ.

ಅತಿಥಿ ಉಪನ್ಯಾಸಕರ ಬೇಡಿಕೆಗಳ ಈಡೇರಿಕೆಗಾಗಿ ಕಾಲೇಜು ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ನೇತೃತ್ವದಲ್ಲಿ ತ್ರಿಸದಸ್ಯ ಸಮಿತಿಯೊಂದನ್ನು ರಚಿಸಿತ್ತು. ಸಮಿತಿಯ ಶಿಫಾರಸಿನಂತೆ ಕಲಾ ವಿಭಾಗದ ಬೋಧನೆಯನ್ನು ಒಂದು ವಾರಕ್ಕೆ ಗರಿಷ್ಠ 15 ಗಂಟೆ ಮತ್ತು ವಿಜ್ಞಾನ ವಿಭಾಗದ ಬೋಧನಾ ಅವಧಿಯನ್ನು ಗರಿಷ್ಠ 19 ಗಂಟೆಗೆ ಹೆಚ್ಚಿಸಲಾಗಿದೆ. ಸರ್ಕಾರ ಕೈಗೊಂಡ ಈ ಕ್ರಮದಿಂದಾಗಿ ಹಾಲಿ ಕೆಲಸ ಮಾಡುತ್ತಿದ್ದ ಅತಿಥಿ ಉಪನ್ಯಾಸಕರ ಪೈಕಿ 9,881 ಮಂದಿ ಉದ್ಯೋಗ ಕಳೆದುಕೊಳ್ಳಲಿದ್ದಾರೆ.

ಈ ಮೊದಲು ಕಲಾ ವಿಭಾಗದ ಉಪನ್ಯಾಸಕರು 8 ಗಂಟೆ ಮತ್ತು ವಿಜ್ಞಾನ ವಿಭಾಗದ ಉಪನ್ಯಾಸಕರು 10 ಗಂಟೆ ಕಾರ್ಯಭಾರ ಹೊಂದಿದ್ದರು. ಕಾರ್ಯಭಾರದ ಅವಧಿಯನ್ನು ಹೆಚ್ಚಿಸಿರುವ ಸರ್ಕಾರದ ಕ್ರಮ ಅವೈಜ್ಞಾನಿಕ ಎನ್ನುವುದು ಅತಿಥಿ ಉಪನ್ಯಾಸಕರ ದೂರು.

ಕಾರ್ಯಭಾರ ಹೆಚ್ಚಿಸಿದ್ದರಿಂದ ಇಬ್ಬರ ಕೆಲಸ ಒಬ್ಬ ಉಪನ್ಯಾಸಕರಿಗೆ ದೊರೆಯುತ್ತದೆ. ಈ ಮೊದಲು ತಾವು ಕೆಲಸ ನಿರ್ವಹಿಸುವ ಕಾಲೇಜಿನಲ್ಲಿ ಹೆಚ್ಚಿನ ಕಾರ್ಯಭಾರ ಇರದ ಕಾರಣ ಇತರೆ ಕಾಲೇಜಿಗೆ ಬೋಧನೆ ಮಾಡುತ್ತಿದ್ದರು. ಸರ್ಕಾರದ ಈ ನಿರ್ಧಾರದಿಂದ ಇದು ಅಸಾಧ್ಯವಾಗಿದೆ. ಇದರಿಂದ ವಿದ್ಯಾರ್ಥಿಗಳಿಗೂ ತೊಂದರೆಯಾಗಲಿದೆ ಎಂಬುದು ಅತಿಥಿ ಉಪನ್ಯಾಸಕರ ಅಳಲು.

ರಾಜ್ಯದಲ್ಲಿ 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿದ್ದು, 1.80 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಮೊದಲು ಎಲ್ಲ ವಿಷಯಗಳಅತಿಥಿ ಉಪನ್ಯಾಸಕರ ಆಯ್ಕೆಗಾಗಿ ಆಯಾ ಕಾಲೇಜು ಹಂತದಲ್ಲಿ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ವಿದ್ಯಾರ್ಹತೆ ಆಧಾರದಲ್ಲಿ ಆಯ್ಕೆ ಮಾಡಿಕೊಳ್ಳಲಾಗುತ್ತಿತ್ತು.

ಹೀಗೆ ಆಯ್ಕೆ ಮಾಡಲಾಗಿದ್ದ 14,106 ಅತಿಥಿ ಉಪನ್ಯಾಸಕರು ಆನ್‌ಲೈನ್‌ ‘ಅಪ್ಲಿಕೇಷನ್‌ ಐಡಿ’ ಹೊಂದಿದ್ದಾರೆ.ಕಾರ್ಯಭಾರ ಹೆಚ್ಚಾಗಿರುವ ಕಾಲೇಜುಗಳಲ್ಲಿ ಹೊಸಬರನ್ನು ಆಯ್ಕೆ ಮಾಡಿಕೊಳ್ಳುವಂತೆ ಕಾಲೇಜು ಶಿಕ್ಷಣ ಇಲಾಖೆ ನೀಡಿದ ಸೂಚನೆ ಅನ್ವಯ ಅಂದಾಜು 3,000 ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಅಂದರೆ, ರಾಜ್ಯದಲ್ಲಿ ಒಟ್ಟು 17,106 ಅತಿಥಿ ಉಪನ್ಯಾಸಕರಿದ್ದರು.

‘ಅತಿಥಿ ಉಪನ್ಯಾಸಕರ ಬೋಧನಾ ಅವಧಿ ಹೆಚ್ಚಿಸಿದ್ದರಿಂದ 6,470 ಜನರಿಗೆ ಕೆಲಸ ಇಲ್ಲದಂತಾಗುತ್ತದೆ. ಜತೆಗೆ, 3,411 ಜನರಿಗೆ ಭಾಗಶಃ ಬೋಧನಾ ಕಾರ್ಯಭಾರ ವಹಿಸಲಾಗಿದೆ. ಅಂದರೆ ಒಟ್ಟು 9,881 ಜನರು ಈಗ ಕೆಲಸ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ’ ಎಂದು ಸಿಐಟಿಯು ರಾಜ್ಯ ಅಧ್ಯಕ್ಷೆ ಮತ್ತು ಅತಿಥಿ ಉಪನ್ಯಾಸಕರ ಪರ ಹೋರಾಟದ ನೇತೃತ್ವ ವಹಿಸಿರುವ ಎಸ್‌. ವರಲಕ್ಷ್ಮಿ ವಿವರಿಸುತ್ತಾರೆ.

‘ಹೆಚ್ಚಿನ ಕಾರ್ಯಭಾರಕ್ಕೆ ಹೆಚ್ಚು ಗೌರವಧನ’

‘ಶೈಕ್ಷಣಿಕ ಅರ್ಹತೆ, ಅನುಭವಗಳನ್ನು ಆಧರಿಸಿ ನಿಯಮಗಳ ಪ್ರಕಾರ ವ್ಯವಸ್ಥಿತವಾಗಿ ಮತ್ತು ಪಾರದರ್ಶಕವಾಗಿ ಆಯ್ಕೆ ಪ್ರಕ್ರಿಯೆ ನಡೆಸಲಾಗಿದೆ. ಅನರ್ಹರಿಗೆ ಅವಕಾಶ ದೊರೆತಿಲ್ಲ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.

‘ಅತಿಥಿ ಉಪನ್ಯಾಸಕರ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಿದೆ. ಅವರ ಗೌರವಯುತ ಬದುಕಿಗೆ ಅನುಕೂಲ ಕಲ್ಪಿಸಿ ವೇತನ ಹೆಚ್ಚಿಸಲಾಗಿದೆ. ಹಲವು ವರ್ಷಗಳಿಂದ ವೇತನ ಹೆಚ್ಚಿಸಿರಲಿಲ್ಲ. ನಮ್ಮ ಸರ್ಕಾರ ಗಮನಹರಿಸಿ ಗೌರವಧನ ಹೆಚ್ಚಿಸಿದೆ. ಹೆಚ್ಚು ಕಾರ್ಯಭಾರ ವಹಿಸಿದ್ದರಿಂದ ಹೆಚ್ಚು ಗೌರವಧನ ನೀಡಲಾಗುತ್ತಿದೆ’ ಎಂದು ಪ್ರತಿಪಾದಿಸಿದ್ದಾರೆ.

‘ಕಿರಿಯರಿಗೆ ವಿಪುಲ ಅವಕಾಶಗಳಿವೆ. ಹೀಗಾಗಿ, ಹಿರಿತನಕ್ಕೆ ಆದ್ಯತೆ ನೀಡಲಾಗಿದೆ’ ಎಂದು ತಿಳಿಸಿದ್ದಾರೆ.

‘ಅರ್ಹತೆ, ಹಿರಿತನಕ್ಕೆ ಅವಕಾಶ’

‘ಶೈಕ್ಷಣಿಕ ಅರ್ಹತೆ, ಅನುಭವಗಳನ್ನು ಆಧರಿಸಿ ನಿಯಮಗಳ ಪ್ರಕಾರ ವ್ಯವಸ್ಥಿತವಾಗಿ ಮತ್ತು ಪಾರದರ್ಶಕವಾಗಿ ಆಯ್ಕೆ ಪ್ರಕ್ರಿಯೆ ನಡೆಸಲಾಗಿದೆ. ಅನರ್ಹರಿಗೆ ಅವಕಾಶ ದೊರೆತಿಲ್ಲ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.

‘ಅತಿಥಿ ಉಪನ್ಯಾಸಕರ ಗೌರವಯುತ ಬದುಕಿಗೆ ಅನುಕೂಲ ಕಲ್ಪಿಸಿ ವೇತನ ಹೆಚ್ಚಿಸಲಾಗಿದೆ. ಹಲವು ವರ್ಷಗಳಿಂದ ಗೌರವಧನ ಹೆಚ್ಚಿಸಿರಲಿಲ್ಲ. ನಮ್ಮ ಸರ್ಕಾರ ಗೌರವಧನ ಹೆಚ್ಚಿಸಿದೆ. ಹೆಚ್ಚು ಕಾರ್ಯಭಾರ ವಹಿಸಿದ್ದರಿಂದ ಹೆಚ್ಚು ಗೌರವಧನ ನೀಡಲಾಗುತ್ತಿದೆ’ ಎಂದು ಪ್ರತಿಪಾದಿಸಿದ್ದಾರೆ.

ಗೌರವಧನ ಹೆಚ್ಚಿಸಿದ್ದು ಅಲ್ಪ ಮಾತ್ರ!

‘ಗೌರವಧನ ದುಪ್ಪಟ್ಟು ಮಾಡಿರುವುದಾಗಿ ಸರ್ಕಾರ ಹೇಳುತ್ತಿರುವುದು ಮೇಲ್ನೋಟಕ್ಕೆ ಸತ್ಯ ಅನಿಸುತ್ತದೆ. ಆದರೆ, ಇದು ಮೂಗಿಗೆ ತುಪ್ಪ ಸವರುವ ಪ್ರಯತ್ನವಾಗಿದೆ. ಗಂಟೆವಾರು ವಿಭಜಿಸಿದರೆ ಸರ್ಕಾರ ಹೇಳುತ್ತಿರುವುದು ಸುಳ್ಳೆಂಬುದು ಗೊತ್ತಾಗುತ್ತದೆ’ ಎಂದು ಅತಿಥಿ ಉಪನ್ಯಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉದಾಹರಣೆಗೆ, ಈಗ 5 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಅವಧಿಗೆ ಕಾರ್ಯನಿರ್ವಹಿಸಿರುವವರು ಮತ್ತು ಯುಜಿಸಿ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿರುವವರಿಗೆ ₹32 ಸಾವಿರ ನಿಗದಿಪಡಿಸಲಾಗಿದೆ.
ಪ್ರತಿ ವಾರ ಗರಿಷ್ಠ 15 ಗಂಟೆ ಬೋಧನೆ ಮಾಡಿದರೆ, ತಿಂಗಳಿಗೆ 60 ಗಂಟೆಯಾಗುತ್ತದೆ. ₹32 ಸಾವಿರ ಮೊತ್ತವನ್ನು 60 ಗಂಟೆಗಳಿಗೆ ವಿಭಜಿಸಿ ಲೆಕ್ಕಾಚಾರ ಹಾಕಿದರೆ ಪ್ರತಿ ಗಂಟೆ ಬೋಧನೆಗೆ ಕೇವಲ ₹533.33 ದೊರೆಯುತ್ತದೆ. ಹಳೆಯ ಗೌರವಧನದಂತೆ ಇದೇ ಅವಧಿಗೆ ₹406.25 ದೊರೆಯುತ್ತಿತ್ತು. ಅಂದರೆ ಸರ್ಕಾರ ಕೇವಲ ₹127.08ರಷ್ಟು ಮಾತ್ರ ಹೆಚ್ಚಿಸಿದೆ ಎಂದು ದೂರಿದ್ದಾರೆ.

ಇದೇ ರೀತಿ, ವಿಜ್ಞಾನ ವಿಭಾಗದಲ್ಲಿ ಪ್ರತಿ ವಾರಕ್ಕೆ ಗರಿಷ್ಠ 19 ಗಂಟೆ ಬೋಧನೆ ಮಾಡಿದರೆ ತಿಂಗಳಿಗೆ 76 ಗಂಟೆಗಳಾಗುತ್ತವೆ. ಅಂದರೆ ಪ್ರತಿ ಗಂಟೆಗೆ ₹421.05 ದೊರೆಯುತ್ತದೆ.ಹಳೆಯ ಗೌರವಧನದಂತೆ ಪ್ರತಿ ಗಂಟೆಗೆ ₹325 ದೊರೆಯುತ್ತಿತ್ತು. ಅಂದರೆ, ಹೆಚ್ಚುವರಿಯಾಗಿ ಕೇವಲ ₹96.05 ಮಾತ್ರ ಲಭ್ಯವಾಗುತ್ತದೆ ಎಂದು ವಿವರಿಸಿದ್ದಾರೆ.

ಇದೇ ಸೂತ್ರವು ಯುಜಿಸಿ ಅರ್ಹತೆ ಇಲ್ಲದ ಉಪನ್ಯಾಸಕರಿಗೂ ಮತ್ತು 5 ವರ್ಷಕ್ಕಿಂತ ಕಡಿಮೆ ಅವಧಿಗೆ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದವರಿಗೂ ಅನ್ವಯಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT