ಬೆಂಗಳೂರು: ರಾಜ್ಯಪಾಲರ ಹುದ್ದೆ, ಸಾಂವಿಧಾನಿಕ ಸಂಸ್ಥೆಗಳು, ತನಿಖಾ ಏಜೆನ್ಸಿಗಳು ಬಿಜೆಪಿಯ ದಾಳ ಆಗುತ್ತಿವೆ. ಇದರ ವಿರುದ್ಧ ರಾಷ್ಟ್ರೀಯ ಅಭಿಯಾನ ರೂಪಿಸಲು ಪ್ರಗತಿಪರ ಚಿಂತಕರು ಯೋಜನೆ ರೂಪಿಸಿದ್ದು, ಈ ಅಭಿಯಾನಕ್ಕೆ ಸೆ. 8ರಂದು ಬೆಂಗಳೂರಿನಲ್ಲಿ ಚಾಲನೆ ನೀಡಲಾಗುವುದು ಎಂದು ತಿಳಿಸಿದ್ದಾರೆ.
ನಿವೃತ್ತ ನ್ಯಾಯಮೂರ್ತಿ ಗೋಪಾಲ ಗೌಡ, ಸಾಹಿತಿಗಳಾದ ದೇವನೂರ ಮಹಾದೇವ, ಜಿ. ರಾಮಕೃಷ್ಣ, ಸಬಿಹಾ ಭೂಮಿಗೌಡ, ಬಿ.ಟಿ. ಲಲಿತಾ ನಾಯಕ್, ಜಾಣಗೆರೆ ವೆಂಕಟರಾಮಯ್ಯ, ಶಂಕರ ಹಲಗತ್ತಿ, ಮೀನಾಕ್ಷಿ ಬಾಳಿ, ರಾಘವೇಂದ್ರ ಕುಷ್ಟಗಿ, ಆರ್.ಕೆ. ಹುಡಗಿ, ಎಸ್.ಜಿ. ಸಿದ್ದರಾಮಯ್ಯ, ವಿಜಯಮ್ಮ, ಬಡಗಲಪುರ ನಾಗೇಂದ್ರ, ಜೆ.ಎಂ ವೀರಸಂಗಯ್ಯ ಮುಂತಾದವರು ಈ ಅಭಿಯಾನಕ್ಕೆ ಕರೆ ನೀಡಿದ್ದಾರೆ.
‘ಈ ಅಭಿಯಾನದ ಸಂಬಂಧ ಸೆಪ್ಟೆಂಬರ್ 3ನೇ ವಾರದಲ್ಲಿ ದೆಹಲಿಯಲ್ಲಿ ಅಖಿಲ ಭಾರತ ಮಟ್ಟದ ಸಮಾಲೋಚನಾ ಸಭೆ ನಡೆಯಲಿದೆ. ಕರ್ನಾಟಕದ ಎಲ್ಲ ಭಾಗಗಳಲ್ಲೂ ಒಕ್ಕೂಟ ವ್ಯವಸ್ಥೆಯ ಪರವಾಗಿ, ರಾಜ್ಯಪಾಲರ ಕಚೇರಿಯ ದುರ್ಬಳಕೆಯ ವಿರುದ್ಧ ನಾಗರಿಕರ ಪ್ರತಿರೋಧ ರೂಪುಗೊಳ್ಳಬೇಕಿದೆ. ಕರ್ನಾಟಕದ ಹಾಗೂ ಭಾರತದ ಸಮಸ್ತ ಪ್ರಜಾತಂತ್ರವಾದಿ ಜನತೆ ಈ ಅಭಿಯಾನದ ಭಾಗ ಆಗಬೇಕೆಂದು ಮನವಿ ಮಾಡುತ್ತೇವೆ’ ಎಂದು ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ರಾಜ್ಯಗಳು ಮತ್ತು ಒಕ್ಕೂಟ ಸರ್ಕಾರದ ಮಧ್ಯೆ ಕೆಲವು ತಿಕ್ಕಾಟಗಳು ಇದ್ದೇ ಇವೆ. ಹಲವು ಸಾರಿ ಈ ತಿಕ್ಕಾಟ ಮತ್ತು ಕೇಂದ್ರ ಸರ್ಕಾರದ ನಡೆಗಳು ಅಪ್ರಜಾತಾಂತ್ರಿಕ ಮತ್ತು ಅನಾರೋಗ್ಯಕರವಾಗಿ ನಡೆದಿತ್ತಾದರೂ ಈ ಹೊತ್ತಿನ ವಿದ್ಯಮಾನ ಅತ್ಯಂತ ಅಪಾಯಕಾರಿ. ಎಲ್ಲ ತನಿಖಾ ಸಂಸ್ಥೆಗಳು ರಾಜಕೀಯ ವಿರೋಧಿಗಳ ಮೇಲೆ ಹೂಡಲಾದ ಬಾಣಗಳಂತೆ ಕೆಲಸ ಮಾಡುತ್ತಿವೆ. ರಾಜ್ಯಪಾಲರ ಕಚೇರಿಯನ್ನು ಅಂತಹ ಕುತಂತ್ರದ ದಾಳಿಯ ಸ್ಥಳೀಯ ಕಚೇರಿಯಂತೆ ಬಳಸಲಾಗುತ್ತಿದೆ. ಎಲ್ಲ ರಾಜಕೀಯ ನಾಯಕರು ಮತ್ತು ಸಾಮಾಜಿಕ ಕಾರ್ಯಕರ್ತರು ಒಂದೋ ಕೇಂದ್ರಕ್ಕೆ ಅಡಿಯಾಳಾಗಬೇಕು ಇಲ್ಲವೇ ಜೈಲಿಗೆ ಹೋಗಬೇಕು ಎಂಬ ಪರಿಸ್ಥಿತಿ ನಿರ್ಮಾಣ ಆಗುತ್ತಿದೆ. ಇದು ಸಾಂವಿಧಾನಿಕ ಗಣತಂತ್ರದ ಆಶಯಗಳಿಗೆ ವಿರುದ್ಧವಾದುದು. ದೇಶವನ್ನು ಸರ್ವಾಧಿಕಾರಕ್ಕೆ ತಳ್ಳುವ ಇಂತಹ ಪ್ರಯತ್ನಗಳ ವಿರುದ್ಧ ಜನರು ಒಂದಾಗಬೇಕಿದೆ. ಇದಕ್ಕಾಗಿ ಕರ್ನಾಟಕದಿಂದಲೇ ರಾಷ್ಟ್ರೀಯ ಅಭಿಯಾನ ಹಮ್ಮಿಕೊಳ್ಳಲಾಗಿದೆ’ ಎಂದೂ ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.