ಬೆಂಗಳೂರು:ಆದಿತ್ಯ ಎಲ್ 1 ನೌಕೆಯ ಮೂರನೇ ಕಕ್ಷೆ ಬದಲಾವಣೆ ಭಾನುವಾರ ಯಶಸ್ವಿಯಾಗಿ ನಡೆಯಿತು ಎಂದು ಇಸ್ರೊ ತಿಳಿಸಿದೆ.
ಆದಿತ್ಯ ಈಗ 296 ಕಿ.ಮೀ x 71767 ಕಿ.ಮೀ ಎತ್ತರದ ಭೂಕಕ್ಷೆಯಲ್ಲಿ ಪರಿಭ್ರಮಣ ನಡೆಸುತ್ತಿದ್ದು, ಮುಂದಿನ ಕಕ್ಷೆ ಬದಲಾವಣೆ ಸೆ.15 ರಂದು ನಡೆಯಲಿದೆ. ಇಸ್ರೊದ ಟೆಲಿಮೆಟ್ರಿ, ಟ್ರ್ಯಾಕಿಂಗ್ ಆ್ಯಂಡ್ ಕಮಾಂಡ್ ನೆಟ್‌ವರ್ಕ್ (ಐಎಸ್‌ಟಿಆರ್‌ಸಿ) ಕಕ್ಷೆ ಬದಲಾವಣೆ ಕಾರ್ಯ ನಿರ್ವಹಿಸಿದೆ.
ಮಾರಿಷಿಯಸ್‌ನಲ್ಲಿರುವ ಇಸ್ರೊ ಭೂನಿಲ್ದಾಣ, ಬೆಂಗಳೂರಿನ ಎಸ್‌ಡಿಎಸ್‌ಸಿ–ಎಸ್‌ಎಚ್‌ಎಆರ್ ಪೋರ್ಟ್‌ಬ್ಲೇರ್‌ನಲ್ಲಿರುವ ಕೇಂದ್ರವು ಕಕ್ಷೆಯ ಬದಲಾವಣೆ ವೇಳೆ ಆದಿತ್ಯ ಎಲ್1 ಚಲನೆಯ ಮೇಲೆ ನಿಗಾ ಇಟ್ಟಿತ್ತು ಎಂದು ಇಸ್ರೊ ‘ಎಕ್ಸ್’ನಲ್ಲಿ ಹೇಳಿದೆ.
ಮೊದಲ ಮತ್ತು ಎರಡನೇ ಹಂತದ ಕಕ್ಷೆ ಬದಲಾವಣೆ ಸೆ.3 ಮತ್ತು 5 ರಂದು ನಡೆದಿತ್ತು. ಇನ್ನೊಂದು ಹಂತದ ಭೂಕಕ್ಷೆಯ ಬದಲಾವಣೆ ಬಳಿಕ ಬಾಹ್ಯಾಕಾಶ ನೌಕೆಯು ಲಗ್ರಾಂಜಿಯನ್ ಬಿಂದು ಎಲ್1 ನತ್ತ ಪ್ರಯಾಣ ಬೆಳೆಸಲಿದೆ.