ಬೆಂಗಳೂರು: ಮದ್ಯ ದರ ಏರಿಕೆಯಾದರೂ ಮದ್ಯ ಮಾರಾಟದಿಂದ ಅಬಕಾರಿ ವರಮಾನದಲ್ಲಿ ಶೇ 14ರಷ್ಟು ಏರಿಕೆ ಆಗಿದೆ.
ಪ್ರಸಕ್ತ ಸಾಲಿನ (2023–24) ವರೆಗಿನ ಮದ್ಯ ಮಾರಾಟವನ್ನು ವಿಶ್ಲೀಷಿಸಿದರೆ, ಮದ್ಯ ಮಾರಾಟದಲ್ಲಿ ಶೇ 4.24 ರಷ್ಟು ಹೆಚ್ಚಳವಾಗಿದ್ದು, ₹ 1,628 ಕೋಟಿ ರಾಜಸ್ವ ಸಂಗ್ರಹ ಆಗಿದೆ. ಹೀಗಾಗಿ, ಅಬಕಾರಿ ಸುಂಕ ಶೇ 20ರಷ್ಟು ಹೆಚ್ಚಿಸಿದ ಪರಿಣಾಮ ಮದ್ಯ ಮಾರಾಟ ಕುಂಠಿತವಾಗಿದೆ ಎನ್ನುವುದು ಸರಿಯಲ್ಲ ಎಂದು ಅಬಕಾರಿ ಇಲಾಖೆ ಮೂಲಗಳು ಹೇಳಿವೆ.
ಪ್ರಸಕ್ತ ಸಾಲಿನಲ್ಲಿ ಈವರೆಗೆ (ಏಪ್ರಿಲ್ 1ರಿಂದ ಆಗಸ್ಟ್ 25 ರವರೆಗೆ) ₹ 13,515 ಕೋಟಿ ರಾಜಸ್ವ ಸಂಗ್ರಹವಾಗಿದೆ. ಬಜೆಟ್‌ನಲ್ಲಿ ನಿಗದಿಪಡಿಸಿ ಗುರಿಗೆ (₹ 36,000 ಕೋಟಿ) ಶೇ 37.5ರಷ್ಟು ಸಾಧನೆಯಾಗಿದೆ. ಕಳೆದ ವರ್ಷ ಈ ಅವಧಿಗೆ ₹ 11,887 ಕೋಟಿ ಸಂಗ್ರಹ ಆಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ₹ 1,628 ಕೋಟಿ ಹೆಚ್ಚು ಸಂಗ್ರಹವಾಗಿದ್ದು, ಶೇ 13.7ರಷ್ಟು ಬೆಳವಣಿಗೆ ಆಗಿದೆ ಎಂದೂ ಮೂಲಗಳು ಹೇಳಿವೆ.
ಸಾಮಾನ್ಯವಾಗಿ ಮದ್ಯದ ದರವನ್ನು ಬಜೆಟ್‌ನಲ್ಲಿ ಹೆಚ್ಚಿಸಿ ಘೋಷಿಸಲಾಗುತ್ತದೆ. ಪ್ರಸಕ್ತ ವರ್ಷ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜುಲೈ 7ರಂದು ಬಜೆಟ್ ಮಂಡಿಸಿದ್ದು, ಹೆಚ್ಚಿಸಿದ ದರ ಜುಲೈ 20ರಂದು ಜಾರಿಗೆ ಬಂದಿದೆ. ಮದ್ಯ ಮಾರಾಟಗಾರರು ಈ ಅವಧಿಯ ನಡುವೆ ಹೆಚ್ಚು ಮದ್ಯ ಖರೀದಿಸಿ ಮುಂಗಡ ದಾಸ್ತಾನು ಇಟ್ಟುಕೊಂಡು ಹೊಸ ದರದಲ್ಲಿ ಮಾರಾಟ ಮಾಡುತ್ತಾರೆ ಎಂದೂ ಇಲಾಖೆಯ ಮೂಲಗಳು ಹೇಳಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.