ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆಗಸ್ಟ್‌ 17ಕ್ಕೆ ಸರ್ಕಾರಿ ನೌಕರರ ಅಭಿನಂದನಾ ಸಮಾರಂಭ

Published : 14 ಆಗಸ್ಟ್ 2024, 14:06 IST
Last Updated : 14 ಆಗಸ್ಟ್ 2024, 14:06 IST
ಫಾಲೋ ಮಾಡಿ
Comments

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಅರಮನೆ ಮೈದಾನದ ತ್ರಿಪುರವಾಸಿನಿ ಸಭಾಂಗಣದಲ್ಲಿ ಆ.17ರಂದು ಬೆಳಿಗ್ಗೆ 11ಕ್ಕೆ ‘ನಮ್ಮಭಿಮಾನದ ಅಭಿನಂದನಾ ಸಮಾರಂಭ’ ಹಮ್ಮಿಕೊಳ್ಳಲಾಗಿದೆ.

ಏಳನೇ ವೇತನ ಆಯೋಗದ ಶಿಫಾರಸಿನಂತೆ ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರನ್ನು ಸಮಸ್ತ ಸರ್ಕಾರಿ ನೌಕರರ ಪರವಾಗಿ ಅಭಿನಂದಿಸಲಾಗುವುದು. ಸಹಕಾರ ಸಚಿವ ಕೆ.ಎನ್‌. ರಾಜಣ್ಣ, ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಉಪಸ್ಥಿತರಿರುವರು ಎಂದು ಸಂಘದ ಅಧ್ಯಕ್ಷ ಸಿ.ಎಸ್‌. ಷಡಾಕ್ಷರಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಸಮಾರಂಭದಲ್ಲಿ 50 ಸಾವಿರ ನೌಕರರು ಭಾಗವಹಿಸುತ್ತಿದ್ದಾರೆ. ಅವರಿಗೆಲ್ಲ ಸರ್ಕಾರ ಒಒಡಿ ಸೌಲಭ್ಯದಡಿ ವಿಶೇಷ ಸಾಂದರ್ಭಿಕ ರಜೆ ಮಂಜೂರು ಮಾಡಿದೆ. ಹೊಸ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ರದ್ದುಪಡಿಸಿ ಹಳೆ ಪಿಂಚಣಿ ಮರುಸ್ಥಾಪಿಸುವಲ್ಲಿ ರಾಷ್ಟ್ರಮಟ್ಟದ ಬೆಳವಣಿಗೆಗಳ ಕುರಿತು ರಾಷ್ಟ್ರೀಯ ಹಳೆ ಪಿಂಚಣಿ ಯೋಜನೆ ಮರುಸ್ಥಾಪನ ಸಂಯುಕ್ತ ಮೋರ್ಚಾ ಅಧ್ಯಕ್ಷ ಬಿ.ಪಿ. ರಾವತ್ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿನ ಸಮಸ್ಯೆಗಳ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ನಿವೃತ್ತ ಉಪ ಕಾರ್ಯದರ್ಶಿ ದೇವರಾಜ್‌ ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದರು.

ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಅನುಷ್ಠಾನ, ಪ್ರಾಥಮಿಕ ಶಾಲಾ ಶಿಕ್ಷಕರ ಬಡ್ತಿ, ಎನ್‌ಪಿಎಸ್‌ ರದ್ದು ಮಾಡುವಂತೆ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.

ಎನ್‌ಪಿಎಸ್‌ ರದ್ದು; ಮೂರು ಸಮಿತಿ ರಚನೆ

ಎನ್‌ಪಿಎಸ್‌ ರದ್ದು ಮಾಡಿ ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಲು ಸರ್ಕಾರ ಸ್ಪಂದಿಸಿದೆ. ಈಗಾಗಲೇ ಎನ್‌ಪಿಎಸ್ ರದ್ದುಗೊಳಿಸಿರುವ ಮೂರು ರಾಜ್ಯಗಳಿಗೆ ಭೇಟಿ ನೀಡಲು ಮೂವರು ಐಎಎಸ್‌ ಅಧಿಕಾರಿಗಳ ನೇತೃತ್ವದಲ್ಲಿ ಮೂರು ಪ್ರತ್ಯೇಕ ಸಮಿತಿ ರಚಿಸಲಾಗಿದೆ. ಒಂದೆರಡು ದಿನಗಳಲ್ಲಿ ಆದೇಶ ಹೊರಬೀಳಲಿದೆ. ಈ ಸಮಿತಿಗಳು ವರದಿ ನೀಡಿದ ನಂತರ ಹಳೇ ಪಿಂಚಣಿ ವ್ಯವಸ್ಥೆ ಜಾರಿಗೆ ಸರ್ಕಾರ ಕ್ರಮಕೈಗೊಳ್ಳಲಿದೆ. ಎಂದು ಷಡಾಕ್ಷರಿ ಹೇಳಿದರು.

17ರಿಂದ ಮೂರು ದಿನ ಕ್ರೀಡಾಕೂಟ

ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಆ.17ರಿಂದ 19ರವರೆಗೆ ಸರ್ಕಾರಿ ನೌಕರರ ರಾಜ್ಯಮಟ್ಟದ  ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. 17ರಂದು ಸಂಜೆ 5ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ರೀಡಾಕೂಟಕ್ಕೆ ಚಾಲನೆ ನೀಡುವರು. 11 ಸಾವಿರ ನೌಕರರು ಭಾಗವಹಿಸುವರು.  17 ಮತ್ತು 18ರಂದು ಸಂಜೆ 6ಕ್ಕೆ ಸಂಗೀತ ರಸಸಂಜೆ ಹಾಗೂ ಜನಪದೋತ್ಸವ ಆಯೋಜಿಸಲಾಗಿದೆ ಎಂದು ಷಡಾಕ್ಷರಿ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT