ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಬು ಜಗಜೀವನ್‌ ರಾಂ ಜನ್ಮದಿನಾಚರಣೆ | ಪರಿಶಿಷ್ಟರಿಗೆ ನೆರವಿನ ಹಸ್ತ – ಬೊಮ್ಮಾಯಿ

ಬಾಬು ಜಗಜೀವನ್‌ ರಾಂ ಜನ್ಮದಿನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಘೋಷಣೆ
Last Updated 5 ಏಪ್ರಿಲ್ 2022, 19:19 IST
ಅಕ್ಷರ ಗಾತ್ರ

ಬೆಂಗಳೂರು: ಬಾಬು ಜಗಜೀವನ್‌ ರಾಂ ಅವರ 115ನೇ ಜನ್ಮದಿನಾಚರಣೆಯ ದಿನವೇ ರಾಜ್ಯದ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಕಲ್ಯಾಣಕ್ಕಾಗಿಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಾಲ್ಕು ಪ್ರಮುಖ ಕಾರ್ಯಕ್ರಮಗಳನ್ನು ಘೋಷಿಸಿದ್ದಾರೆ.

ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹತ್ವದ ಘೋಷಣೆಗಳನ್ನು ಮಾಡಿದ ಅವರು, ಅಲಕ್ಷಿತರಾಗಿಯೇ ಉಳಿದಿರುವ ಪರಿಶಿಷ್ಟ ಜಾತಿ ಮತ್ತು ವರ್ಗಕ್ಕೆ ಸೇರಿದವರಸಾಮಾಜಿಕ ಮತ್ತು ಆರ್ಥಿಕ ಚೇತರಿಕೆಗೆ ಈ ಯೋಜನೆಗಳು ನೆರವಾಗಲಿವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರಕಟಿಸಿದ ತೀರ್ಮಾನಗಳನ್ನು ಆದಷ್ಟು ಬೇಗ ಜಾರಿಗೊಳಿಸುವುದಾಗಿಯೂ ಅವರು ಭರವಸೆ ನೀಡಿದರು.

ಪರಿಶಿಷ್ಟ ಜಾತಿ ಮತ್ತು ವರ್ಗದ ವಿದ್ಯಾರ್ಥಿಗಳಿಗೆ ವಸತಿ ಶಾಲೆಗಳಲ್ಲಿ ಮುಖ್ಯಮಂತ್ರಿ ಮಾರ್ಗದರ್ಶಿನಿ ವೇದಿಕೆಯ ಮೂಲಕ 8 ರಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ನೀಡುವ ಕಾರ್ಯಕ್ರಮವನ್ನು ಈ ವರ್ಷವೇ ರೂಪಿಸಲಾಗುವುದು ಎಂದರು.

ನವೋದ್ಯಮ ಯೋಜನೆಯಡಿ ಈ ಸಮುದಾಯದವರಿಗೆ ₹ 50 ಲಕ್ಷ ಸಹಾಯಧನ ನೀಡುವ ಯೋಜನೆಯನ್ನು ಈಗಾಗಲೇ ಆಯವ್ಯಯದಲ್ಲಿ ಪ್ರಕಟಿಸಲಾಗಿದೆ ಎಂದೂ ಹೇಳಿದರು.

ದೇಶದ ಸಂವಿಧಾನ ಅನುಷ್ಠಾನದಲ್ಲಿ ಬಾಬು ಜಗಜೀವನ್‌ ರಾಂ ಅವರ ಪಾತ್ರ ಮಹತ್ವದ್ದು. ಪ್ರಾಮಾಣಿಕತೆ, ನಿಷ್ಠೆ, ಬದ್ಧತೆಯ ಮೂರ್ತರೂಪವಾಗಿದ್ದರು. ಆಹಾರದಲ್ಲಿ ಸ್ವಾವಲಂಬನೆ ಸಾಧಿಸಿದಾಗ ಮಾತ್ರ ದೇಶ ಸ್ವಾವಲಂಬನೆ ಆಗಲು ಸಾಧ್ಯ ಎಂದು ಅವರು ನಂಬಿದ್ದರು. ಕೃಷಿ ಸಚಿವರಾಗಿ ಹಸಿರು ಕ್ರಾಂತಿ ಮಾಡುವ ಮೂಲಕ ಕೆಲವೇ ವರ್ಷಗಳಲ್ಲಿ ದೇಶದಲ್ಲಿ ಆಹಾರ ಉತ್ಪಾದನೆ
ಯಲ್ಲಿ ಸ್ವಾವಲಂಬನೆಯನ್ನು ತಂದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.

ಪ್ರಶಸ್ತಿ ಪ್ರದಾನ: ಪರಿಶಿಷ್ಟ ಜಾತಿ ಮತ್ತು ವರ್ಗದವರ ಏಳಿಗೆಗಾಗಿ ವಿವಿಧ ಕ್ಷೇತ್ರಗಳಲ್ಲಿ ಶ್ರಮಿಸಿದ ವೀರಪ್ಪ ಬಿ.ಸವಣೂರು, ಎನ್‌.ಡಿ.ವೆಂಕಮ್ಮ, ಆರ್‌.ಎಂ.ಕಾಂತರಾಜು, ದಾನಪ್ಪ ಸಿ.ನಿಲೋಗಲ್‌ ಮತ್ತು ಮುನಿಸ್ವಾಮಿ ಅವರಿಗೆ ಜಗಜೀವನ್‌ ರಾಂ ಪ್ರಶಸ್ತಿ, ತಲಾ ₹5 ಲಕ್ಷ ನಗದು, 20 ಗ್ರಾಂನ ಚಿನ್ನದ ಪದಕ ನೀಡಿ ಗೌರವಿಸಲಾಯಿತು.

ಶಿಕ್ಷಣ, ಉದ್ಯೋಗ, ಸಾಮಾಜಿಕ ಗೌರವ, ಅವಕಾಶಗಳು ದೊರೆತಾಗ ಮಾತ್ರ ಈ ಸಮುದಾಯ ಮುಖ್ಯವಾಹಿನಿಗೆ ಬರಲು ಸಾಧ್ಯ. ಇದರಿಂದ ಭಾರತದ ಸಮಗ್ರ ಅಭಿವೃದ್ಧಿ ಸಾಧ್ಯ. ಗ್ರಾಮೀಣ ಪ್ರದೇಶದಲ್ಲಿ ಭೂ ಒಡೆತನ ಹೊಂದಿದವರಿಗೆ ಸಾಮಾಜಿಕ ಗೌರವ ದೊರೆಯುತ್ತದೆ. ಸಮುದಾಯದವರ ಭೂ ಒಡೆತನಕ್ಕೆ ಸಂಬಂಧಿಸಿದಂತೆ ಭೂ ಸುಧಾರಣಾ ಕಾಯ್ದೆ ಜಾರಿ ಮಾಡಲಾಗಿದೆ. ಯೋಜನೆಯ ಅನುಷ್ಠಾನದಲ್ಲಿರುವ ತೊಡಕುಗಳನ್ನು ನಿವಾರಿಸಲಾಗುವುದು ಎಂದು ಬೊಮ್ಮಾಯಿ ಭರವಸೆ ನೀಡಿದರು.

ಘೋಷಣೆಗಳೇನು?

* ಪರಿಶಿಷ್ಟ ಜಾತಿ/ ವರ್ಗದ ಸಮುದಾಯವರು ಭೂಮಿ ಖರೀದಿಸಲು ನೆರವು ನೀಡುವ ಮೂಲಕ ಅವರನ್ನು ರೈತರನ್ನಾಗಿಸುವ ಭೂಒಡೆತನ ಯೋಜನೆ
ಯಡಿ ನೀಡುತ್ತಿರುವ ಸಹಾಯಧನದ ಮೊತ್ತವನ್ನು ₹ 15 ಲಕ್ಷದಿಂದ ₹ 20 ಲಕ್ಷಕ್ಕೆ ಹೆಚ್ಚಳ.

* ಈ ಸಮುದಾಯದವರಿಗೆ ಮನೆಗಳ ನಿರ್ಮಾಣಕ್ಕಾಗಿ ನೀಡಲಾಗುತ್ತಿದ್ದ ₹1.75 ಲಕ್ಷ ಸಹಾಯ ಧನವನ್ನು ₹2 ಲಕ್ಷಕ್ಕೆ ಹೆಚ್ಚಿಸಲು ತೀರ್ಮಾನ.

* ಗ್ರಾಮೀಣ ಪ್ರದೇಶದಲ್ಲಿ ಕುಟೀರ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ವರ್ಗದವರಿಗೆ 75 ಯೂನಿಟ್‌ ವರೆಗೆ ಉಚಿತ ವಿದ್ಯುತ್‌ ನೀಡಲು ತೀರ್ಮಾನ. ಒಂದು ವಾರದಲ್ಲಿ ಈ ಸಂಬಂಧ ಆದೇಶ.

* ಪ್ರತಿ ತಾಲ್ಲೂಕಿನಲ್ಲಿ ಬಾಬು ಜಗಜೀವನ್‌ ರಾಂ ಸ್ವಯಂ ಸೇವಾ ಉದ್ಯೋಗ ಯೋಜನೆಯನ್ನು ಜಾರಿಗೆ ತರಲು ಉದ್ದೇಶಿಸಿದ್ದು, ಒಂದು ತಿಂಗಳಲ್ಲಿ ಈ ಯೋಜನೆಯ ರೂಪುರೇಷೆ ಸಿದ್ಧಪಡಿಸಿ ಜಾರಿ ಮಾಡಲು ತೀರ್ಮಾನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT