ಬೆಂಗಳೂರು: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಜಾಮೀನು ನೀಡಿ, ಜೈಲಿನಿಂದ ಬಿಡುಗಡೆಗೊಳಿಸಿದ ಸುಪ್ರೀಂ ಕೋರ್ಟ್ ಆದೇಶ ಸಾಂವಿಧಾನಿಕ ಸಂಸ್ಥೆಗಳನ್ನು ತಮ್ಮ ರಾಜಕೀಯ ದ್ವೇಷ ಸಾಧನೆಗಾಗಿ ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಕೊಟ್ಟ ತಪರಾಕಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತು ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿರುವ ಅವರು, ‘ಈ ಆದೇಶ ದೇಶದ ನ್ಯಾಯಾಂಗದ ಮೇಲಿನ ನಂಬಿಕೆಯನ್ನು ಮತ್ತಷ್ಟು ದೃಢೀಕರಿಸಿದೆ. ಸತ್ಯ ಮತ್ತು ನ್ಯಾಯದ ಪರವಾಗಿ ಹೋರಾಡುತ್ತಿರುವ ಎಲ್ಲರಲ್ಲೂ ಭರವಸೆ ಹುಟ್ಟಿಸಿದೆ’ ಎಂದಿದ್ದಾರೆ.
‘ದ್ವೇಷದ ರಾಜಕಾರಣಕ್ಕೆ ಇಳಿದಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ನ್ಯಾಯಾಲಯದ ಈ ಆದೇಶದಿಂದಾದರೂ ಪಾಠ ಕಲಿತು, ಎಚ್ಚೆತ್ತುಕೊಳ್ಳಲಿ. ಅಂತಿಮವಾಗಿ ಸತ್ಯವೇ ಗೆಲ್ಲುವುದು, ನ್ಯಾಯವೇ ಬಾಳುವುದು. ಸತ್ಯಮೇವ ಜಯತೆ’ ಎಂದಿದ್ದಾರೆ.