ಸೋಮವಾರ, 2 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ನತ್ತ ಆಯನೂರು: ಕಾಂಗ್ರೆಸ್ ಸೇರ್ಪಡೆ ಇಂದು– ಆಪರೇಷನ್‌ ಹಸ್ತ ಶುರು?

Published 21 ಆಗಸ್ಟ್ 2023, 0:11 IST
Last Updated 21 ಆಗಸ್ಟ್ 2023, 0:11 IST
ಅಕ್ಷರ ಗಾತ್ರ

ಬೆಂಗಳೂರು: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಶಿವಮೊಗ್ಗ ನಗರ ಕ್ಷೇತ್ರದಿಂದ ಬಿಜೆಪಿಯಿಂದ ಟಿಕೆಟ್‌ ಸಿಗದ ಕಾರಣಕ್ಕೆ ಮುನಿಸಿಕೊಂಡು ಜೆಡಿಎಸ್ ಸೇರಿ ಕಣಕ್ಕಿಳಿದಿದ್ದ ಆಯನೂರು ಮಂಜುನಾಥ್ ಅವರು ‘ಕೈ’ ಹಿಡಿಯಲು ನಿರ್ಧರಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮ ಸೋಮವಾರ ನಡೆಯಲಿದೆ. ಶಿಕಾರಿಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಟಿಕೆಟ್‌ ಸಿಗದೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಬಿಜೆಪಿಯ ಬಿ.ವೈ. ವಿಜಯೇಂದ್ರಗೆ ತೀವ್ರ ಸ್ಪರ್ಧೆ ಒಡ್ಡಿದ್ದ ನಾಗರಾಜ್‌ ಗೌಡ ಮತ್ತು ಯಶವಂತಪುರ ಬಿಜೆಪಿ ಶಾಸಕ ಎಸ್‌.ಟಿ. ಸೋಮಶೇಖರ್‌ ಅವರ ಬೆಂಬಲಿಗರೂ ಕಾಂಗ್ರೆಸ್‌ ಸೇರಲಿದ್ದಾರೆ.

ಆ ಮೂಲಕ, ವಿಧಾನಸಭೆ ಚುನಾವಣೆಯ ನಂತರ ಲೋಕಸಭೆ ಚುನಾವಣೆ ಮೇಲೆ ಕಣ್ಣಿಟ್ಟು ಮೊದಲ ಹಂತದ ‘ಆಪರೇಷನ್‌ ಹಸ್ತ’ಕ್ಕೆ ಕಾಂಗ್ರೆಸ್‌ ಚಾಲನೆ ನೀಡಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರನ್ನು ಸದಾಶಿವನಗರದಲ್ಲಿರುವ ಅವರ ನಿವಾಸದಲ್ಲಿ ಭಾನುವಾರ ಭೇಟಿ ಮಾಡಿ ಆಯನೂರು ಮಾತುಕತೆ ನಡೆಸಿದ್ದಾರೆ. ನೈರುತ್ಯ ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ಆಯನೂರು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

ಶಿವಕುಮಾರ್‌ ಅವರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಆಯನೂರು, ‘ಬಿಜೆಪಿ ತೊರೆದಾಗಲೇ ಕಾಂಗ್ರೆಸ್‌ ಸೇರಲು ತೀರ್ಮಾನಿಸಿದ್ದೆ. ಆದರೆ, ಆಗ ಸೇರ್ಪಡೆಗೆ ಅವಕಾಶ ಇರಲಿಲ್ಲ. ಆ ಸಂದರ್ಭದಲ್ಲಿ ಎಚ್‌.ಡಿ. ಕುಮಾರಸ್ವಾಮಿ ಅವಕಾಶ ನೀಡಿದ್ದರಿಂದ ಜೆಡಿಎಸ್ ಸೇರಿದ್ದೆ’ ಎಂದರು.

‘ಪಕ್ಷ ಸೇರ್ಪಡೆ ಬಗ್ಗೆ ಅಧ್ಯಕ್ಷರ ಜೊತೆ ಒಂದು ಹಂತದ ಮಾತುಕತೆಯಾಗಿದೆ. ನಾನು ವಿಧಾನ ಪರಿಷತ್ ಟಿಕೆಟ್‌ ಆಕಾಂಕ್ಷಿ. ಆದರೆ, ಪಕ್ಷ ಸೇರ್ಪಡೆ ಆಗುವಾಗ ಷರತ್ತು ಹಾಕುವುದಿಲ್ಲ’ ಎಂದರು.

ಆಯನೂರು ಮಂಜುನಾಥ ಅವರ ಭೇಟಿ ಕುರಿತು ಪ್ರತಿಕ್ರಿಯಿಸಿದ ಶಿವಕುಮಾರ್‌, ‘ಅನೇಕ ಜನ ನನ್ನನ್ನು ಭೇಟಿ ಮಾಡುತ್ತಿರುತ್ತಾರೆ. ಯಾರು ಯಾವ ಕಾರಣಕ್ಕೆ ಭೇಟಿ ಆಗುತ್ತಿದ್ದಾರೆ ಎಂದು ಹೇಳಲು ಸಾಧ್ಯವೇ?’ ಎಂದರು.

ಕುತೂಹಲ ಮೂಡಿಸಿದ ಸಿಎಂ– ಸೋಮಶೇಖರ್‌ ಭೇಟಿ
ಯಶವಂತಪುರ ಕ್ಷೇತ್ರದ ಬಿಜೆಪಿ ಶಾಸಕ ಎಸ್‌.ಟಿ. ಸೋಮಶೇಖರ್‌ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭಾನುವಾರ ಸಂಜೆ ಭೇಟಿ ಮಾಡಿ ಕೆಲಹೊತ್ತು ಚರ್ಚೆ ನಡೆಸಿದರು. ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿ ಜೆಡಿಎಸ್‌– ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ಪತನಕ್ಕೆ ಕಾರಣರಾಗಿದ್ದ ಶಾಸಕರ ಪೈಕಿ ಒಬ್ಬರಾದ ಸೋಮಶೇಖರ್‌ ಅವರು ಮಾತೃಪಕ್ಷ ಸೇರಲು ಮುಂದಾಗಿದ್ದಾರೆಂಬ ಚರ್ಚೆಯ ಮಧ್ಯೆ ನಡೆದ ಬೆಳವಣಿಗೆ ಕುತೂಹಲ ಮೂಡಿಸಿದೆ. ತಮ್ಮ ಕ್ಷೇತ್ರದ ಅಭಿವೃದ್ಧಿ ವಿಷಯದ ಬಗ್ಗೆ ಚರ್ಚಿಸಲು ಸಿದ್ದರಾಮಯ್ಯ ಅವರನ್ನು ಸೋಮಶೇಖರ್‌ ಮಾಡಿ ಭೇಟಿ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ ಮೂಲಗಳು ತಿಳಿಸಿ. ಸುದ್ದಿಗಾರರ ಜೊತೆ ಮಾತನಾಡಿದ ಸೋಮಶೇಖರ್ ‘ಕ್ಷೇತ್ರದ ಸಮಸ್ಯೆಗಳ ಬಗ್ಗೆ ಮಾತನಾಡಲು ವಾರದ ಹಿಂದೆಯೇ ಮುಖ್ಯಮಂತ್ರಿಯ ಸಮಯ ಕೇಳಿದ್ದೆ. ಇಂದು ಬರಲು ಹೇಳಿದ್ದರು. ಕ್ಷೇತ್ರದ ಸಮಸ್ಯೆಗಳ ಕುರಿತಂತೆ ಅಧಿಕಾರಿಗಳ ಜೊತೆ ಸೋಮವಾರ ಚರ್ಚೆ ನಡೆಸುವುದಾಗಿ ತಿಳಿಸಿದರು’ ಎಂದರು. ‘ನನ್ನ ಬೆಂಬಲಿಗರು ಯಾರೂ ಕಾಂಗ್ರೆಸ್​​ಗೆ ಹೋಗುತ್ತಿಲ್ಲ. ಜೆಡಿಎಸ್‌ನ ಕೆಲವು ಮಾಜಿ ಪಾಲಿಕೆ ಸದಸ್ಯರು ಹೋಗುತ್ತಿದ್ದಾರೆ. ಕಾಂಗ್ರೆಸ್ ಸೇರಲು ಯಾರಿಗೆ ಆಸೆ ಇದೆಯೋ ಅವರು ಹೋಗುತ್ತಾರೆ. ನನಗೆ ಪಕ್ಷದ ಮೇಲೆ ಅಸಮಾಧಾನ ಇಲ್ಲ. ಆದರೆ ಕ್ಷೇತ್ರದ ವಿಚಾರವಾಗಿ ಅಸಮಾಧಾನವಿದೆ’ ಎಂದರು. ‘ಈಗಾಗಲೇ ಸಿ.ಟಿ. ರವಿ ಆರ್. ಅಶೋಕ್ ಮಾತನಾಡಿದ್ದಾರೆ. ನಾನು ಪಕ್ಷ ಬದ್ಧತೆಯಿಂದ ಕೆಲಸ ಮಾಡಿದ್ದೇನೆ. ಇನ್ನು ಮುಂದೆಯೂ ಅದೇ ವಾತಾವರಣ ಇರುವಂತೆ ನೋಡಿಕೊಳ್ಳಿ ಎಂದು ಹೇಳಿದ್ದೇನೆ. ಅದಕ್ಕೆ ಪಕ್ಷದ ಮುಖಂಡರು ಒಪ್ಪಿದ್ದಾರೆ. ನಾನು ಯಾರನ್ನೂ ಪಕ್ಷದಿಂದ ಅಮಾನತು ಮಾಡಿ ಎಂದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT