ಬೆಂಗಳೂರು: ‘ಭಾರತ್ ಮಾತಾ ಕಿ ಜೈ ಘೋಷಣೆ ಸಾಮರಸ್ಯವನ್ನು ಉತ್ತೇಜಿಸುತ್ತದೆಯೇ ಹೊರತು ವೈಷಮ್ಯ ಹರಡುವುದಿಲ್ಲ' ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಮಸೀದಿ ಮುಂದೆ ಪ್ರತಿಭಟನೆ ನಡೆಸಿ, ‘ಭಾರತ್ ಮಾತಾ ಕಿ ಜೈ’ ಎಂದು ಘೋಷಣೆ ಕೂಗಿದ ಆರೋಪಕ್ಕೆ ಸಂಬಂಧಿಸಿದಂತೆ ಮಂಗಳೂರಿನ ಐವರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ರದ್ದುಪಡಿಸಿದೆ.
ಪ್ರಕರಣ ರದ್ದುಕೋರಿ ಮಂಗಳೂರಿನ ಸುರೇಶ್, ಎಂ.ವಿನಯ್ ಕುಮಾರ್, ಸುಭಾಷ್, ರಂಜನ್ ಅಲಿಯಾಸ್ ರಂಜಿತ್ ಮತ್ತು ಧನಂಜಯ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಾನ್ಯ ಮಾಡಿದೆ.
‘ಅರ್ಜಿದಾರರು ಈ ಮೊದಲೇ ದಾಖಲಿಸಿದ್ದ ಪ್ರಕರಣವೊಂದಕ್ಕೆ ಪ್ರತಿಯಾಗಿ ಈ ಪ್ರಕರಣ ದಾಖಲಿಸಲಾಗಿದೆ. ಇದರಲ್ಲಿ ಐಪಿಸಿ ಕಲಂ 153ಎ ಅನ್ವಯವಾಗುವ ಒಂದೇ ಒಂದು ಅಂಶವೂ ಇಲ್ಲ. ಇದು ಕಾನೂನಿನ ದುರ್ಬಳಕೆಗೆ ಶ್ರೇಷ್ಠ ಉದಾಹರಣೆಯಾಗಿದೆ’ ಎಂದು ನ್ಯಾಯಪೀಠ ಹೇಳಿದೆ.
‘ಮಸೀದಿ ಮುಂದೆ ಬಂದು ಬೆದರಿಕೆ ಹಾಕಿದರು’ ಎಂದು ಆರೋಪಿಸಿ ಪಿ.ಕೆ.ಅಬ್ದುಲ್ಲಾ ಮಂಗಳೂರಿನ ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರನ್ನು ಆಧರಿಸಿ ಪೊಲೀಸರು ಅರ್ಜಿದಾರರ ವಿರುದ್ಧ ಎಫ್‌ಐಆರ್ ಮಾಡಿದ್ದರು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.