
‘ಆದೇಶ ಹಿಂಪಡೆಯಲಿ’
ರಾಜ್ಯ ಕಾಂಗ್ರೆಸ್ ಸರ್ಕಾರವು ಅಲ್ಪಸಂಖ್ಯಾತರ ಓಲೈಕೆಯಲ್ಲಿ ನಿರತರಾಗಿರುವ ಕಾರಣಕ್ಕೇ ಹಿಜಾಬ್ ಮರು ಜಾರಿ ಮಾಡಿದೆ ಮತ್ತು ಈಗ ಆಳಂದದ ದರ್ಗಾ ಗಲಭೆ ಪ್ರಕರಣ ವಾಪಸ್ ಪಡೆದಿದೆ. ಪೊಲೀಸರ, ಜಿಲ್ಲಾಧಿಕಾರಿಯ, ಕೇಂದ್ರ ಸಚಿವರ ಕಾರುಗಳಿಗೆ ಕಲ್ಲು ತೂರಿದವರು ಮತ್ತು ದೊಣ್ಣೆ ಬೀಸಿದವರ ವಿರುದ್ಧದ ಪ್ರಕರಣಗಳನ್ನು ವಾಪಸ್ ಪಡೆಯುವ ಅಗತ್ಯವೇನಿತ್ತು? ಎಲ್ಲ ಸಮುದಾಯಗಳನ್ನೂ ಒಟ್ಟಿಗೇ ಕರೆದೊಯ್ಯುವುದು ಸರ್ಕಾರದ ಕರ್ತವ್ಯ. ಹಾಗೆಂದ ಮಾತ್ರಕ್ಕೆ ಕೋಮುಗಲಭೆ ಹಬ್ಬಿಸುವವರ ವಿರುದ್ಧದ ಪ್ರಕರಣ ರದ್ದುಪಡಿಸಿ ಎಂದಲ್ಲ. ದೇಶದ ಭದ್ರತೆಗೆ ಅಪಾಯ ತರುವಂತಹ ನಿರ್ಧಾರಗಳನ್ನು ಬಿಜೆಪಿ ವಿರೋಧಿಸಿದೆ. ಸರ್ಕಾರ ಕೂಡಲೇ ಆದೇಶ ವಾಪಸ್ ಪಡೆಯಬೇಕು.ಆರ್. ಅಶೋಕ ವಿಧಾನಸಭೆ ವಿರೋಧ ಪಕ್ಷದ ನಾಯಕ
‘ದೊಂಬಿ ಮಾಡುವವರಿಗೆ ಅನುಕೂಲ’
ರಾಜ್ಯದಲ್ಲಿ ವಿನಾಕಾರಣ ದೊಂಬಿ ಸೃಷ್ಟಿಸುವವರು, ಕುಕ್ಕರ್ ಬಾಂಬ್ ಇಡುವವರು, ಪೊಲೀಸ್ ಠಾಣೆಗೆ ಬೆಂಕಿ ಹಾಕುವವರು, ಶಿವಲಿಂಗ ಇರುವ ದೇವಸ್ಥಾನದಲ್ಲಿ ಭಕ್ತರಿಗೆ ಅಪಮಾನ ಮಾಡಿ ಭಕ್ತೆಯರಿಗೆ ಬೆದರಿಸುವ ಸಮಾಜದ್ರೋಹಿಗಳ ವಿರುದ್ಧದ ಪ್ರಕರಣಗಳನ್ನು ರಾಜ್ಯ ಸರ್ಕಾರ ವಾಪಸ್ ಪಡೆದಿದೆ. ಇದರಿಂದ ಕ್ರೌರ್ಯ ವೈಭವೀಕರಿಸುವವರು, ಷಡ್ಯಂತ್ರ ಮಾಡುವವರು, ಬೆದರಿಕೆ ಒಡ್ಡವವರು, ಹಿಂದೂ ವಿರೋಧಿಗಳಿಗೆ ಅನುಕೂಲ ಆಗಲಿದೆ. ಸರ್ಕಾರ ಈ ಆದೇಶ ವಾಪಸ್ ಪಡೆಯದಿದ್ದರೆ, ತೀವ್ರ ಹೋರಾಟ ನಡೆಸುತ್ತೇವೆ.ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ಸಂಸದ
‘ಬೀದಿಗಿಳಿದು ಹೋರಾಡುತ್ತೇವೆ’
ರಾಜ್ಯದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಲೇ ಇದೆ. ಹಿಂದೂಗಳಿಗೆ ರಕ್ಷಣೆ ನೀಡುವ ಬದಲಿಗೆ ಕಾಂಗ್ರೆಸ್ ಸರ್ಕಾರವು ಅಲ್ಪಸಂಖ್ಯಾತರನ್ನು ಓಲೈಸುತ್ತಿದೆ. ಆಳಂದ ಗಲಭೆಯಲ್ಲಿ ದೇಶದ್ರೋಹಿಗಳ ವಿರುದ್ಧ ದಾಖಲಾಗಿದ್ದ ಪ್ರಕರಣಗಳನ್ನು ವಾಪಸ್ ಪಡೆದು, ಕಾಂಗ್ರೆಸ್ ತನ್ನ ಮತಬ್ಯಾಂಕ್ ಅನ್ನು ಗಟ್ಟಿಗೊಳಿಸಿಕೊಳ್ಳುತ್ತಿದೆ. ಈ ಮೂಲಕ, ಹಿಂದೂಗಳಿಗೆ ಪದೇ– ಪದೇ ಅವಮಾನ ಮಾಡಲಾಗುತ್ತಿದೆ. ರಾಜ್ಯದ ಜನರು ಸರ್ಕಾರದ ನಡೆಯನ್ನು ಗಮನಿಸುತ್ತಿದ್ದು, ಚುನಾವಣೆಯಲ್ಲಿ ಪಾಠ ಕಲಿಸಲಿದ್ದಾರೆ. ಸರ್ಕಾರದ ಈ ನಡೆಯ ವಿರುದ್ಧ ವಿರೋಧ ಪಕ್ಷವಾಗಿ ನಾವು ಬೀದಿಗಿಳಿದು ಪ್ರತಿಭಟನೆ ನಡೆಸುತ್ತೇವೆ.ಬಿ.ವೈ. ವಿಜಯೇಂದ್ರ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.