ಬೆಂಗಳೂರು: ಆಸ್ಪತ್ರೆಗಳಲ್ಲಿ ಔಷಧ ಕೊರತೆ, ವೈದ್ಯರ ಅಸಮರ್ಪಕ ವರ್ಗಾವಣೆ, ಹುದ್ದೆಗಳ ಭರ್ತಿ ಮಾಡದಿರುವುದು ಸೇರಿದಂತೆ ಇಲಾಖೆಯಲ್ಲಿನ ಅವ್ಯವಸ್ಥೆಗಳ ಕುರಿತ ಆರೋಪಗಳಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ನೀಡಿದ ಉತ್ತರ ಸಮರ್ಪಕವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ವಿಧಾನಸಭೆಯಲ್ಲಿ ವಿರೋಧ ಪಕ್ಷ ಬಿಜೆಪಿಯ ಸದಸ್ಯರು ಮಂಗಳವಾರ ಸಭಾತ್ಯಾಗ ಮಾಡಿದರು.

ಆರೋಗ್ಯ ಇಲಾಖೆಯಲ್ಲಿನ ಲೋಪಗಳ ಕುರಿತು ನಡೆದ ಚರ್ಚೆಯ ವೇಳೆ, ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ಸಚಿವಾಲಯ ನೌಕರರ ಆಂತರಿಕ ಕಿತ್ತಾಟ ಸೇರಿದಂತೆ ಆಡಳಿತ ವೈಖರಿ, ಔಷಧ ಪೂರೈಕೆಯಲ್ಲಿನ ವೈಫಲ್ಯವನ್ನು ಬೊಟ್ಟು ಮಾಡಿದ ಬಿಜೆಪಿ ಸದಸ್ಯರು ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ವಿಷಯ ಪ್ರಸ್ತಾಪಿಸಿ ಮಾತನಾಡಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ, ‘ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತ ಕಳೆದ ಎಂಟು ತಿಂಗಳಿಂದ ಕಚೇರಿಗೇ ಬಂದಿಲ್ಲ. ಸಚಿವಾಲಯದ ನೌಕರರ ಕಾರ್ಯಕ್ಷಮತೆ ಪ್ರಶ್ನಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಅವರು ಪತ್ರ ಬರೆದು, ಸಚಿವಾಲಯವನ್ನು ಪುನರ್ ರಚಿಸುವಂತೆ ಕೋರಿದ್ದಾರೆ. ಅದಕ್ಕೆ ಪ್ರತಿಯಾಗಿ ಹರ್ಷ ಗುಪ್ತ ತಮ್ಮ ವ್ಯಾಪ್ತಿ ಮೀರಿ ಉದ್ಧಟತನದಿಂದ ವರ್ತಿಸುತ್ತಿದ್ದಾರೆ ಎಂದು ಸಚಿವಾಲಯ ನೌಕರರ ಸಂಘ ಸಚಿವರಿಗೆ ಪತ್ರ ಬರೆದಿದೆ. ಈ ಕಿತ್ತಾಟ ಇಲಾಖೆಯಲ್ಲಿನ ಅವ್ಯವಸ್ಥೆಯನ್ನು ಎತ್ತಿ ತೋರಿಸುತ್ತದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಸಮುದಾಯ ಆರೋಗ್ಯ ಕೇಂದ್ರಗಳ ತಜ್ಞ ವೈದ್ಯರನ್ನು ವರ್ಗಾವಣೆ ಮಾಡುವುದಿಲ್ಲ ಎಂದು ಸರ್ಕಾರದ ಪರ ಸಚಿವ ಶಿವಾನಂದ ಪಾಟೀಲ ಅವರೇ ಉತ್ತರ ನೀಡಿದ್ದರೂ, ವರ್ಗಾವಣೆ ಮಾಡಲಾಗುತ್ತಿದೆ. ಮತ್ತೊಂದೆಡೆ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಗಳ ಪೂರೈಕೆಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ’ ಎಂದರು.

ಅದಕ್ಕೆ ದನಿಗೂಡಿಸಿದ ಬಿಜೆಪಿಯ ಸಿ.ಎನ್. ಅಶ್ವತ್ಥನಾರಾಯಣ, ‘ಆರೋಗ್ಯ ಇಲಾಖೆಯಲ್ಲಿ ಹುದ್ದೆಗಳು ಖಾಲಿ ಇವೆ. ಮುಂಬಡ್ತಿ ನೀಡುತ್ತಿಲ್ಲ. ಕನಿಷ್ಠ ಹೆರಿಗೆಗಳು ಆಗುತ್ತಿಲ್ಲವೆಂದು ಸಮುದಾಯ ಆರೋಗ್ಯ ಕೇಂದ್ರಗಳ ತಜ್ಞ ವೈದ್ಯರನ್ನು ಅವೈಜ್ಞಾನಿಕವಾಗಿ ವರ್ಗಾವಣೆ ಮಾಡಲಾಗುತ್ತಿದೆ’ ಎಂದೂ ಆರೋಪಿಸಿದರು. ಬಿಜೆಪಿಯ ಬಿ.ವೈ. ವಿಜಯೇಂದ್ರ, ಸುನಿಲ್ ಕುಮಾರ್, ಬೈರತಿ ಬಸವರಾಜ, ಶೈಲೇಂದ್ರ ಬೆಲ್ದಾಳೆ, ಜೆಡಿಎಸ್ನ ಶಾರದಾ ಪೂರ್ಯಾನಾಯ್ಕ್, ಜಿ.ಟಿ. ದೇವೇಗೌಡ ಮತ್ತಿತರು ತಮ್ಮ ಕ್ಷೇತ್ರಗಳಲ್ಲಿ ಆಸ್ಪತ್ರೆಗಳ ಸಮಸ್ಯೆಗಳನ್ನು ತೆರೆದಿಟ್ಟರು.

ಚರ್ಚೆಗೆ ಉತ್ತರ ನೀಡಿದ ದಿನೇಶ್ ಗುಂಡೂರಾವ್, ‘ಇಲಾಖೆಯಲ್ಲಿ ಸುಧಾರಣೆ ತರಲು ಹರ್ಷ ಗುಪ್ತ ಪತ್ರ ಬರೆದಿದ್ದಾರೆ. ಇದರಲ್ಲಿ ತಪ್ಪೇನು’ ಎಂದು ಸಮರ್ಥಿಸಿಕೊಂಡರು. ವೈದ್ಯರ ವರ್ಗಾವಣೆ, ಜಿಲ್ಲಾ, ತಾಲ್ಲೂಕು ಆಸ್ಪತ್ರೆಗಳಿಗೆ ತಜ್ಞರ ವೈದ್ಯರ ನೇಮಕ ಕುರಿತು ಮಾಹಿತಿ ನೀಡಿದ ಅವರು, ‘ಬಳ್ಳಾರಿ ಘಟನೆ ಬಳಿಕ ಬಾಣಂತಿಯರ ಸಾವನ್ನು ಆಡಿಟ್ ಮಾಡಿ, ಸಾವಿನ ಪ್ರಕರಣ ಶೂನ್ಯಕ್ಕೆ ಇಳಿಸಲು ಪ್ರಯತ್ನಿಸುತ್ತಿದ್ದೇವೆ’ ಎಂದರು. ‘ಪಾರದರ್ಶಕವಾಗಿ ಟೆಂಡರ್ ಪ್ರಕ್ರಿಯೆಯ ಮೂಲಕ ಔಷಧಗಳನ್ನು ಪೂರೈಸಲಾಗಿದ್ದು, ಎಲ್ಲಿಯೂ ಕೊರತೆ ಇಲ್ಲ’ ಎಂದರು.

ಬಿ.ಆರ್. ಪಾಟೀಲ ಅಸಮಾಧಾನ: ಇಲಾಖೆಯ ಕಾರ್ಯವೈಖರಿ ಬಗ್ಗೆ ಬೇಸರ ವ್ಯಕ್ತಪಡಿಸಿದ ಕಾಂಗ್ರೆಸ್ನ ಬಿ.ಆರ್. ಪಾಟೀಲ, ‘ಅಧಿಕಾರಿಗಳು ಸಚಿವರ ದಾರಿ ತಪ್ಪಿಸುತ್ತಿದ್ದಾರೆ. ವೈದ್ಯರ ವರ್ಗಾವಣೆ ಮಾಡಿಲ್ಲ ಎಂದು ಸಚಿವರು ಹೇಳುತ್ತಿದ್ದಾರೆ. ಆದರೆ, ನಾನು ವರ್ಗಾವಣೆ ಮಾಡಿರುವ ಆದೇಶ ಪ್ರತಿ ತೋರಿಸುತ್ತೇನೆ. ಆರೋಗ್ಯ ಸಚಿವರು ಬೆಂಗಳೂರನ್ನು ಪ್ರತಿನಿಧಿಸುವ ಶಾಸಕರು, ಅವರಿಗೆ ಹಳ್ಳಿಗಳ ಆಸ್ಪತ್ರೆಗಳ ಸ್ಥಿತಿ ಗೊತ್ತಿಲ್ಲ. ವೈದ್ಯರ ವರ್ಗಾವಣೆ ಬಗ್ಗೆ ಸಾರ್ವಜನಿಕ ಅಭಿಪ್ರಾಯ ಪಡೆದು ಬೇಕಿದ್ದರೆ ನಿರ್ಧರಿಸಲಿ’ ಎಂದು ಆಗ್ರಹಿಸಿದರು.

‘ಔಷಧ ಪೂರೈಕೆಗೆ ನೂತನ ವ್ಯವಸ್ಥೆ’

‘ಸರ್ಕಾರಿ ಆಸ್ಪತ್ರೆಗಳಿಗೆ ಔಷಧ ಪೂರೈಸಲು ನೂತನ ವ್ಯವಸ್ಥೆ ರೂಪಿಸಲಾಗಿದೆ. ಕೆಲವೇ ದಿನಗಳಲ್ಲಿ ಪೂರೈಕೆ ವ್ಯವಸ್ಥೆ ಸರಿಹೋಗಲಿದೆ’ ಎಂದು ವಿಧಾನ ಪರಿಷತ್ನಲ್ಲಿ ದಿನೇಶ್ ಗುಂಡೂರಾವ್ ತಿಳಿಸಿದರು. ಬಿಜೆಪಿಯ ಧನಂಜಯ ಸರ್ಜಿ ಮತ್ತು ಪ್ರತಾಪ ಸಿಂಹ ನಾಯಕ ವಿಷಯ ಪ್ರಸ್ತಾಪಿಸಿ ‘ಔಷಧಗಳ ಕೊರತೆ ಕಾರಣದಿಂದ ರೋಗಿಗಳು ಹೊರಗಡೆಯಿಂದ ಖರೀದಿಸಬೇಕಾದ ಸ್ಥಿತಿ ಎದುರಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು. ಇದಕ್ಕೆ ಸಚಿವ ದಿನೇಶ್ ‘ಈ ಮೊದಲು ಒಂದು ವರ್ಷಕ್ಕೆ ಅಗತ್ಯವಿದ್ದ ಔಷಧವನ್ನು ಒಮ್ಮೆಗೇ ಪೂರೈಕೆ ಮಾಡಲಾಗುತ್ತಿತ್ತು. ಈಗ ಮೂರು ತಿಂಗಳಿಗೆ ಅಗತ್ಯವಿರುವಷ್ಟು ಔಷಧವನ್ನು ಪ್ರತ್ಯೇಕ ಪ್ಯಾಕೇಜ್ಗಳಲ್ಲಿ ಪೂರೈಕೆ ಮಾಡಲಾಗುತ್ತಿದೆ. ನಿಗಮಕ್ಕೆ ಪೂರೈಕೆಯಾದ ಔಷಧಗಳನ್ನು ಪರೀಕ್ಷೆಗೆ ಒಳಪಡಿಸಿ ನಂತರ ಪೂರೈಸಲಾಗುತ್ತಿದೆ. ಇದರಿಂದಲೂ ಸ್ವಲ್ಪ ವಿಳಂಬವಾಗಿದೆ’ ಎಂದರು.

‘ಎಲ್ಲ ಸರ್ಕಾರಿ ಆಸ್ಪತ್ರೆಗಳು ಆರೋಗ್ಯ ಕೇಂದ್ರಗಳು ಮತ್ತು ಎಲ್ಲ ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮವೇ ಔಷಧಗಳನ್ನು ಪೂರೈಸಲಿದೆ. ಈಗ 534 ಔಷಧಗಳನ್ನು ಟೆಂಡರ್ ಮೂಲಕ ಪೂರೈಸಲಾಗುತ್ತಿದ್ದು 300 ಔಷಧಗಳನ್ನು ಸ್ಥಳೀಯವಾಗಿ ಖರೀದಿಸಲಾಗುತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.