ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Interview : ವಿರೋಧಿ ಅಲೆ ಸಾಮಾನ್ಯ, ಗೆಲುವು ನಮ್ಮದೇ: ಧರ್ಮೇಂದ್ರ ಪ್ರಧಾನ್‌

ಧರ್ಮೇಂದ್ರ ಪ್ರಧಾನ್‌, ಬಿಜೆಪಿ ಚುನಾವಣಾ ಉಸ್ತುವಾರಿ ಮತ್ತು ಕೇಂದ್ರ ಪೆಟ್ರೋಲಿಯಂ, ನೈಸರ್ಗಿಕ ಅನಿಲಗಳ ಸಚಿವ
Published 4 ಮೇ 2023, 19:37 IST
Last Updated 4 ಮೇ 2023, 19:37 IST
ಅಕ್ಷರ ಗಾತ್ರ

ಎಸ್‌. ರವಿಪ್ರಕಾಶ್‌

‘ಆಡಳಿತ ವಿರೋಧಿ ಅಲೆ ಎಂಬುದು ಹಳೆಯ ಬಗೆಯ ಚಿಂತನೆ. ಯಾವುದೇ ಒಂದು ಸರ್ಕಾರ ಇದ್ದರೂ ವಿರೋಧಿ ಅಲೆ ಇದ್ದೇ ಇರುತ್ತದೆ. ಇದೇ ಕಾರಣಕ್ಕೇ ಆಡಳಿತ ಪಕ್ಷ ಸೋಲುತ್ತದೆ ಎಂಬುದು ಸರಳ ವ್ಯಾಖ್ಯಾನ. ಹೊಸ ಟ್ರೆಂಡ್‌ ಎಂದರೆ ಆಡಳಿತ ವಿರೋಧಿ ಅಲೆ ಇದ್ದರೂ ಉತ್ತಮ ನಿರ್ವಹಣೆಯ ರಾಜಕಾರಣದಿಂದ ಚುನಾವಣೆ ಗೆಲ್ಲಬಹುದು. ಇದಕ್ಕೆ ಹಲವು ರಾಜ್ಯಗಳ ಚುನಾವಣಾ ಫಲಿತಾಂಶವೇ ನಿದರ್ಶನ’ ಎಂದು ಬಿಜೆಪಿ ಚುನಾವಣಾ ಉಸ್ತುವಾರಿ, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಪ್ರತಿಪಾದಿಸಿದರು.

‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ ಅವರು ಆಡಿದ ಮಾತುಗಳು ಇಲ್ಲಿವೆ.

ಪ್ರ

ಚುನಾವಣೆ ಪ್ರಚಾರ ಕೊನೆಯ ಘಟ್ಟಕ್ಕೆ ತಲುಪಿದೆ. ಪ್ರಧಾನಿ ಮೋದಿ ಮತ್ತು ಅಮಿತ್‌ ಶಾ ಜೋಡಿ ಬೆವರು ಹರಿಸುತ್ತಿದ್ದಾರೆ. ಈ ಚುನಾವಣೆ ಗೆಲ್ಲುತ್ತೀರಿ ಎಂಬ ವಿಶ್ವಾಸವಿದೆಯೇ?

ಬರಿ ಗೆಲುವಲ್ಲ, ಸಂಪೂರ್ಣ ಬಹುಮತ ಸಿಗುತ್ತದೆ. ಇದಕ್ಕೆ ಕಾರಣ ಹೇಳುತ್ತೇನೆ, ಕರ್ನಾಟಕದಲ್ಲಿ ಹೊಸ ರಾಜಕೀಯ ಅಧ್ಯಾಯ ಆರಂಭವಾಗಿದೆ. ಈಗ ನಡೆದಿರುವ ಚುನಾವಣಾ ಸಮರ ಬಿಜೆಪಿ ಮತ್ತು ಕಾಂಗ್ರೆಸ್‌ ಎ– ಬಿ ಟೀಮ್‌ಗಳ ಮಧ್ಯೆ. ಎಲ್ಲೂ ತ್ರಿಕೋನ ಸ್ಪರ್ಧೆ ಇಲ್ಲ. ಒಂದೊ ಕಾಂಗ್ರೆಸ್‌ ಇಲ್ಲವೇ ಅದರ ಬಿ ಟೀಮ್ ಎನಿಸಿರುವ ಜೆಡಿಎಸ್ ಮಧ್ಯೆ ಹೋರಾಟ. ಪಕ್ಷದಲ್ಲೂ ಒಂದು ಬಗೆಯ ಪರಿವರ್ತನೆ ಆಗಿದೆ. ಹಿಂದೆ ಬಿಜೆಪಿ ಎಂದರೆ ರೈತ ಪರ ಪಕ್ಷ ಎಂಬುದಿತ್ತು. ಬಿಜೆಪಿ ಸರ್ಕಾರಗಳ ಹೊಸ ನೀತಿಗಳು ಕಾರ್ಯಕ್ರಮಗಳು ಹಾಗೂ ತಳಮಟ್ಟದ ಸಮುದಾಯಗಳನ್ನು ಮುಟ್ಟಿರುವ, ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡ ಕಾರಣ, ನಮ್ಮಲ್ಲಿ ವಿಭಿನ್ನ ಸಮುದಾಯಗಳ ಹೊಸ ನಾಯಕರು ಸೃಷ್ಟಿಯಾಗಿದ್ದಾರೆ. ಇವರು ನಮ್ಮ ಶಕ್ತಿ. ಇನ್ನೂ ಒಂದು ಅನುಕೂಲಕಾರಿ ಅಂಶವೆಂದರೆ ಮೀಸಲಾತಿ ಪ್ರಮಾಣ ಹೆಚ್ಚು ಮಾಡಿದ್ದು. ಹಿಂದೆ ಆಂಧ್ರದಲ್ಲಿ ಎನ್‌.ಟಿ.ರಾಮರಾವ್ ಅವರು ಪರಿಶಿಷ್ಟ ಜಾತಿಗೆ ಶೇ 1 ರಷ್ಟು ಮೀಸಲಾತಿ ಹೆಚ್ಚಿಸಿದ್ದು ಬಿಟ್ಟರೆ, ದೇಶದಲ್ಲಿ ಯಾರೂ ಮೀಸಲಾತಿ ಪ್ರಮಾಣ ಹೆಚ್ಚಿಸಿರಲಿಲ್ಲ. ಬೊಮ್ಮಾಯಿ ಅದನ್ನು ಮಾಡಿದ್ದಾರೆ. ಇದು ಫಲ ನೀಡುತ್ತದೆ.

ಪ್ರ

ಕೆಲವು ಹಳೆ ಮುಖಗಳನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ನೀಡಲಾಗಿದೆ. ಆದರೂ ಇನ್ನೂ ಸಾಕಷ್ಟು ಕ್ಷೇತ್ರಗಳಲ್ಲಿ ಆಡಳಿತ ವಿರೋಧಿ ಅಲೆ ಇದೆ. ಇದು ನಿಮಗೆ ಪೆಟ್ಟು ಕೊಡುವುದಿಲ್ಲವೇ?

ಶೇ 23 ರಷ್ಟು ಶಾಸಕರನ್ನು ಬದಲಿಸಿದ್ದೇವೆ. ಯಾವುದೇ ಸರ್ಕಾರ ಇದ್ದರೂ ಶೇ 30 ರಷ್ಟು ಶಾಸಕರ ವಿರುದ್ಧ ವಿರೋಧಿ ಅಲೆ ಇದ್ದೇ ಇರುತ್ತದೆ ಎಂಬುದು ವೈಜ್ಞಾನಿಕ ಸಮೀಕ್ಷೆಯೊಂದರ ಪ್ರಮುಖ ಅಂಶ. ಯಾವುದೇ ಪಕ್ಷದ ಸರ್ಕಾರ ಇದ್ದರೂ ವಿರೋಧಿ ಅಲೆ ಇದ್ದೇ ಇರುತ್ತದೆ. ಇದೇ ಕಾರಣಕ್ಕೇ ಆಡಳಿತ ಪಕ್ಷ ಸೋಲುತ್ತದೆ ಎಂಬುದು ಸರಳ ವ್ಯಾಖ್ಯಾನವಷ್ಟೆ. ಹೊಸ ಟ್ರೆಂಡ್‌ ಎಂದರೆ ಆಡಳಿತ ವಿರೋಧಿ ಅಲೆ ಇದ್ದರೂ ಉತ್ತಮ ನಿರ್ವಹಣೆಯ ರಾಜಕಾರಣದಿಂದ ಚುನಾವಣೆ ಗೆಲ್ಲಬಹುದು. ಇದಕ್ಕೆ ಉತ್ತರಪ್ರದೇಶ, ತ್ರಿಪುರ, ಗೋವಾ, ಉತ್ತರಾಖಂಡ್‌, ನಾಗಾಲ್ಯಾಂಡ್‌ ರಾಜ್ಯಗಳ ಫಲಿತಾಂಶವೇ ಸಾಕ್ಷಿ. ಕೇರಳದ ಇತಿಹಾಸದಲ್ಲಿ ಎಂದೂ ಒಮ್ಮೆ ಗೆದ್ದ ಪಕ್ಷ ಮತ್ತೊಮ್ಮೆ ಗೆಲ್ಲುತ್ತಿರಲಿಲ್ಲ. ಅಲ್ಲಿ ಎರಡನೇ ಬಾರಿಗೆ ಎಲ್‌ಡಿಎಫ್‌ ಗೆಲುವು ಸಾಧಿಸಿತು. ಕರ್ನಾಟಕದಲ್ಲೂ ಅದೇ ಪುನರಾವರ್ತನೆ ಆಗುತ್ತದೆ.

ಪ್ರ

ರಾಜ್ಯದ ಎಲ್ಲೆಡೆ ಬಿಜೆಪಿ ತನ್ನ ತಳಹದಿಯನ್ನು ವಿಸ್ತರಿಸಲು ಸಾಧ್ಯವಾಗಿದೆಯೇ?

ಪ್ರದೇಶವಾರು ಮತ್ತು ಸಾಮಾಜಿಕವಾಗಿ ಈ ಕೆಲಸ ಆಗಿದೆ. ಬಿಜೆಪಿ ಕಾಲಿಡಲು ಸಾಧ್ಯವಾಗದ ಕಡೆಗಳಲ್ಲೂ ವಿಶೇಷವಾಗಿ ಹಳೆ ಮೈಸೂರು ಪ್ರದೇಶಗಳಲ್ಲಿ ತನ್ನ ಬೇರನ್ನು ಬಿಟ್ಟಿದೆ. ಮತ್ತೊಂದು ಕಡೆ, ಸಮಾಜ ಎಲ್ಲ ವರ್ಗ ಅದರಲ್ಲೂ ತಳ ಸಮುದಾಯದ ಜನರಿಗೆ ಪಕ್ಷ, ಸರ್ಕಾರ ಮತ್ತು ಕಾರ್ಯಕ್ರಮಗಳಲ್ಲಿ ಆದ್ಯತೆ ನೀಡಿದ್ದೇವೆ. ಹೀಗಾಗಿ ಸಮಾಜದ ಎಲ್ಲ ವರ್ಗಗಳ ಜನ ಬಿಜೆಪಿ ಸೇರುತ್ತಿದ್ದಾರೆ. ಸರಿ ಸುಮಾರು 10 ವರ್ಷ ಬಿಜೆಪಿ ಆಡಳಿತವನ್ನು ಜನ ನೋಡಿದ್ದಾರೆ. ಸ್ಪಷ್ಟ ನೀತಿಗಳನ್ನು ಜಾರಿ ಮಾಡಿದ್ದೇವೆ. ಹೀಗಾಗಿ ಬಿಜೆಪಿ ಕರ್ನಾಟಕದಲ್ಲಿ ಹಿಂದೆಂದಿಗಿಂತಲೂ ಬಲಶಾಲಿಯಾಗಿದೆ.

ಪ್ರ

ಕರ್ನಾಟಕದ ಮತದಾರರಿಗೆ ನೀವು ಹೇಳುವುದೇನು?

ಕರ್ನಾಟಕದ ಜನ ಮೊದಲಿಂದಲೂ ಬಿಜೆಪಿಯನ್ನು ಆಶೀರ್ವದಿಸುತ್ತಾ ಬಂದಿದ್ದಾರೆ. ಈ ಬಾರಿ ರಾಜ್ಯದಲ್ಲಿ ಬಹುಮತ ನೀಡಿದರೆ, ಬಸವಣ್ಣ ಅವರ ತತ್ವ ಆದರ್ಶಗಳ ಸ್ಥಾಪನೆಗೆ ಕಟಿ ಬದ್ಧರಾಗಿದ್ದೇವೆ. ಜಗತ್ತು, ನಾಗರಿಕತೆಯನ್ನು ಮುನ್ನಡೆಸುವ ಸಾಮರ್ಥ್ಯ ಕರ್ನಾಟಕಕ್ಕಿದೆ. ಅದನ್ನು ಸಾಕಾರಗೊಳಿಸಲು ನಾವು ಬದ್ಧರಾಗಿದ್ದೇವೆ.

‘ಹನುಮನ ಬಾಲಕ್ಕೆ ಬೆಂಕಿ ಇಟ್ಟಿದ್ದಾರೆ’

ಪ್ರ

ಬಜರಂಗ ದಳ ಮತ್ತು ಬಜರಂಗಿ ವಿಷಯವನ್ನು ನಿಮ್ಮ ನಾಯಕರು ಪ್ರಸ್ತಾಪಿಸುತ್ತಿರುವುದೇಕೆ?

ಕಾಂಗ್ರೆಸ್‌ನವರು ಜೇನುಗೂಡಿಗೆ ಕೈಹಾಕಿದ್ದಾರೆ. ಕಚ್ಚಿಸಿಕೊಳ್ಳುವುದು ನಿಶ್ಚಿತ. ಅವರಾಗಿಯೇ ಹನುಮನ ಬಾಲಕ್ಕೆ ಬೆಂಕಿ ಇಟ್ಟಿದ್ದಾರೆ ಅನುಭವಿಸುತ್ತಾರೆ. ಕಾಂಗ್ರೆಸ್‌ನ ಒಬ್ಬ ನಾಯಕರಂತೂ ಭಾರತೀಯ ಸಂಸ್ಕೃತಿಯ ಗಂಧಗಾಳಿಯೂ ಇಲ್ಲದಂತೆ ಮಾತನಾಡಿದ್ದಾರೆ. ಬಜರಂಗಬಲಿಯ (ಹನುಮ) ತಂದೆ ಸೂರ್ಯ ಎಂದು ಹೇಳಿದ್ದಾರೆ.  ಕಾಂಗ್ರೆಸ್‌ನದು ಊಳಿಗಮಾನ್ಯ ಜಗತ್ತು. ಅಲ್ಲಿ ಒಂದು ಪರಿವಾರವನ್ನು ಖುಷಿಪಡಿಸಲು ಯಾವುದೇ ಮಟ್ಟಕ್ಕೂ ಇಳಿಯುತ್ತಾರೆ. ಹೀಗಾಗಿಯೇ ಮೋದಿಯವರನ್ನು ಬೈಯ್ದು ಒಂದು ಕುಟುಂಬವನ್ನು ತೃಪ್ತಿ ಪಡಿಸುತ್ತಾರೆ. ಮೋದಿಯನ್ನು ಹೀನಾಯವಾಗಿ ಕಾಣುವುದೂ ಇದೇ ಕಾರಣಕ್ಕೆ. ಇದರಿಂದಾಗಿ ದೇಶ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್‌ ನಾಮಾವಶೇಷವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT