ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿದ್ದಾರ್ಥ ವಿಹಾರ ಟ್ರಸ್ಟ್​​ಗೆ ಸಿಎ ನಿವೇಶನ: ವಿವರಣೆ ಕೇಳಿದ ರಾಜ್ಯಪಾಲ

Published : 2 ಸೆಪ್ಟೆಂಬರ್ 2024, 7:21 IST
Last Updated : 2 ಸೆಪ್ಟೆಂಬರ್ 2024, 7:21 IST
ಫಾಲೋ ಮಾಡಿ
Comments

ಬೆಂಗಳೂರು: ತಮ್ಮ ಸಹೋದರ ರಾಹುಲ್‌ ಖರ್ಗೆಯವರ ಸಿದ್ದಾರ್ಥ ವಿಹಾರ ಟ್ರಸ್ಟ್​​ಗೆ ತಮ್ಮ ಪ್ರಭಾವ ಬಳಸಿ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಕೆಐಎಡಿಬಿಯಿಂದ ಸಿಎ ನಿವೇಶನ ಮಂಜೂರು ಮಾಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ವಿವರಣೆ ನೀಡುವಂತೆ ರಾಜ್ಯಪಾಲ ಥಾವರಚಂದ್‌​​​ ಗೆಹಲೋತ್‌ ಅವರು ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

‘ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬದವರು ಟ್ರಸ್ಟಿಗಳಾಗಿರುವ ಸಿದ್ಧಾರ್ಥ ವಿಹಾರ ಟ್ರಸ್ಟ್​​ಗೆ ನಿಯಮ ಉಲ್ಲಂಘನೆಯ ಜೊತೆಗೆ ತರಾತುರಿಯಲ್ಲಿ ಕೆಐಎಡಿಬಿಯಿಂದ ಐದು ಎಕರೆ ಸಿ.ಎ ನಿವೇಶನ ಮಂಜೂರು ಮಾಡಲಾಗಿದೆ. ಪ್ರಿಯಾಂಕ್​ ಖರ್ಗೆ ಸಚಿವರಾಗಿದ್ದುಕೊಂಡು ಹೀಗೆ ಸರ್ಕಾರಿ ಸೌಲಭ್ಯ ಪಡೆದಿದ್ದು ಸರಿಯೇ?’ ಎಂದು ವಿಧಾನ ಪರಿಷತ್​ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ರಾಜ್ಯಪಾಲರಿಗೆ ದೂರು ನೀಡಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಿಯಾಂಕ್‌ ಖರ್ಗೆ, ‘ನಮ್ಮ ಪ್ರಕರಣದಲ್ಲೂ ರಾಜ್ಯಪಾಲರು ವಿವರಣೆ ಕೇಳಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ’ ಎಂದರು.

‘ರಾಜ್ಯಪಾಲರಿಗೆ ಎರಡು ಸಂವಿಧಾನ ಇದೆ. ಬಿಜೆಪಿ, ಜೆಡಿಎಸ್​ನದು ಒಂದು ಸಂವಿಧಾನ. ಕಾಂಗ್ರೆಸ್​​ಗೊಂದು ಸಂವಿಧಾನ’ ಎಂದು ವಾಗ್ದಾಳಿ ನಡೆಸಿದರು.

‘ನಮ್ಮ ವಿಚಾರದಲ್ಲಿ ಬಿಜೆಪಿಯವರು ಮೊದಲು 10 ಆರೋಪ ಮಾಡುತ್ತಿದ್ದರು. ಎರಡನೇ ದಿನ ಐದು ಆರೋಪಗಳನ್ನು ಮಾಡಿದ್ದರು. ಈಗ ಸುಮ್ಮನಿದ್ದಾರೆ. ಛಲವಾದಿ ನಾರಾಯಣಸ್ವಾಮಿ ಬಿಟ್ಟು ಬೇರೆ ಯಾರೂ ಏಕೆ ಸಿಎ ನಿವೇಶನ ವಿಚಾರ ಮಾತನಾಡುತ್ತಿಲ್ಲ’ ಎಂದು ಪ್ರಿಯಾಂಕ್​ ಪ್ರಶ್ನಿಸಿದರು.

‘ಬಿ.ವೈ. ವಿಜಯೇಂದ್ರ, ಆರ್​. ಅಶೋಕ ಅವರು ನನ್ನ ವಿಚಾರದಲ್ಲಿ ಯಾಕೆ ಮಾತನಾಡುತ್ತಿಲ್ಲ. ನಾನು ಕೆಳಮನೆ ಸದಸ್ಯ ಅಲ್ಲವೇ? ದಲಿತರ ನಡುವೆ ಬಡಿದಾಡಿಸುವುದು ಕೋಮುವಾದ ಸೃಷ್ಟಿಸುವುದು, ಇದೆಲ್ಲ ಆರೆಸ್ಸೆಸ್, ಬಿಜೆಪಿ ಸಂಚು’ ಎಂದೂ ಕಿಡಿಕಾರಿದರು.

‘ಬಿಜೆಪಿ, ಜೆಡಿಎಸ್‌ನವರ ದಾಖಲೆಗಳು ರಾಜ್ಯಪಾಲರ ಟೇಬಲ್‌ನಲ್ಲಿ ಕೊಳೆಯುತ್ತಿವೆ. ಅದಕ್ಕೇನು ವಿವರಣೆ ಕೇಳಿಲ್ಲ. ಬಿಜೆಪಿ ನಾಯಕರ ಪ್ರಕರಣದಲ್ಲಿ ನನ್ನ ಬಳಿ ಕಡತ ಇಲ್ಲ ಎಂದು ರಾಜ್ಯಪಾಲರು ತಪ್ಪು ಮಾಹಿತಿ ಕೊಡುತ್ತಿದ್ದಾರೆ’ ಎಂದೂ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT