ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಭೂಗತ ವಾಹನ ಸುರಂಗಕ್ಕೆ ₹12,690 ಕೋಟಿ

190 ಕಿ.ಮೀ. ಉದ್ದದ 11 ಕಾರಿಡಾರ್‌ ಅಭಿವೃದ್ಧಿ
Published : 22 ಆಗಸ್ಟ್ 2024, 23:23 IST
Last Updated : 22 ಆಗಸ್ಟ್ 2024, 23:23 IST
ಫಾಲೋ ಮಾಡಿ
Comments

ಬೆಂಗಳೂರು: ನಗರದ ಹೆಬ್ಬಾಳ ಮೇಲ್ಸೇತುವೆ (ಎಸ್ಟೀಮ್‌ ಮಾಲ್) ಪ್ರದೇಶದಿಂದ ಹೊಸೂರು ರಸ್ತೆಯ ಸಿಲ್ಕ್‌ ಬೋರ್ಡ್‌ ಜಂಕ್ಷನ್‌ನ ಮೇಲ್ಸೇತುವೆಯವರೆಗೆ ಭೂಗತ ವಾಹನ ಸುರಂಗ(ಅಂಡರ್‌ಗ್ರೌಂಡ್‌ ವೆಹಿಕ್ಯುಲರ್‌ ಟನೆಲ್ ಇನ್‌ ಟ್ವಿನ್‌ ಟ್ಯೂಬ್‌ ಮೋಡ್) ಮಾರ್ಗವನ್ನು ನಿರ್ಮಿಸುವ ಯೋಜನೆಗೆ ಗುರುವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕನಸಿನ ಈ ಯೋಜನೆಯ ಅಂದಾಜು ವೆಚ್ಚ ₹12,690 ಕೋಟಿ.

ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದ ಕಾನೂನು ಸಚಿವ ಎಚ್‌.ಕೆ.‍ಪಾಟೀಲ, ‘ಬೆಂಗಳೂರು ನಗರದ ವಾಹನ ದಟ್ಟಣೆ ನಿವಾರಿಸುವಲ್ಲಿ ಇದೊಂದು ಉತ್ತಮ ಯೋಜನೆ’ ಎಂದು ಹೇಳಿದರು.

‘ಬೆಂಗಳೂರು ನಗರದ ಒಟ್ಟು ಸುಮಾರು 190 ಕಿ.ಮೀ ಉದ್ದದ ವಾಹನ ದಟ್ಟಣೆಯ 11 ಕಾರಿಡಾರ್‌ಗಳನ್ನು ಆಯ್ಕೆ ಮಾಡಿ, ಭೂಗತ ವಾಹನ ಸುರಂಗ ಮಾರ್ಗ ನಿರ್ಮಾಣ ಮಾಡಲು ಸೂಕ್ತವೆಂದು ಅಭಿಪ್ರಾಯಪಡಲಾಗಿದೆ. ಅಲ್ಲದೇ, ಬೆಂಗಳೂರು ಹೃದಯ ಭಾಗದಲ್ಲಿ ಒಟ್ಟು ಸುಮಾರು 99.50 ಕಿ.ಮೀ ಉದ್ದದ 17 ಮೇಲ್ಸೇತುವೆ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಇದಕ್ಕೆ ಸಮಗ್ರ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಬೇಕಿದೆ’ ಎಂದು ತಿಳಿಸಿದರು.

52 ಹೊಸ ಇಂದಿರಾ ಕ್ಯಾಂಟೀನ್:

ಬಿಬಿಎಂಪಿ ವ್ಯಾಪ್ತಿಯಲ್ಲಿ ಹೊಸದಾಗಿ 52 ಇಂದಿರಾ ಕ್ಯಾಂಟೀನ್‌ಗಳನ್ನು ಆರಂಭಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಪ್ರತಿ ಕ್ಯಾಂಟೀನ್‌ಗೆ ತಲಾ ₹40 ಲಕ್ಷದಂತೆ ಒಟ್ಟು ₹20 ಕೋಟಿ ವೆಚ್ಚದಲ್ಲಿ ಆರಂಭಿಸಲಾಗುವುದು. ಬಿಬಿಎಂಪಿ ವಾರ್ಡ್‌ಗಳ ಸಂಖ್ಯೆ 198 ರಿಂದ 243 ಕ್ಕೆ ಹೆಚ್ಚಿರುವುದರಿಂದ 52 ಹೆಚ್ಚುವರಿ ಕ್ಯಾಂಟೀನ್‌ ಆರಂಭಿಸಲಾಗುವುದು ಎಂದರು.

ಎಲ್‌ಇಡಿ ದೀಪ ಅಳವಡಿಸಲು ₹ 684 ಕೋಟಿ:

‘ಇಂಧನ ಉಳಿತಾಯ–ಇಎಂಐ/ವಾರ್ಷಿಕ ಪಾವತಿ ಮಾದರಿ’ ಕೇಂದ್ರೀಕೃತ ನಿಯಂತ್ರಣ ಮತ್ತು ಮೇಲ್ವಿಚಾರಣಾ ವ್ಯವಸ್ಥೆ ಯೋಜನೆಯಡಿ ಎಲ್‌ಇಡಿ ಬೀದಿ ದೀಪಗಳನ್ನು ಅಳವಡಿಸುವ ಹಾಗೂ ಏಳು ವರ್ಷಗಳ ನಿರ್ವಹಣಾ ವೆಚ್ಚಕ್ಕೆ ₹ 684.34 ಕೋಟಿ ಒದಗಿಸುವ ಪ್ರಸ್ತಾವಕ್ಕೆ ಸಂಪುಟ ಅನುಮೋದನೆ ನೀಡಿದೆ.

ವಾರ್ಷಿಕವಾಗಿ ₹ 300 ಕೋಟಿ ಇಂಧನ ವೆಚ್ಚ ಉಳಿತಾಯ ಮಾಡಲು ಏಳು ವಲಯಗಳಲ್ಲಿ ನಾಲ್ಕು ಪ್ಯಾಕೇಜ್‌ಗಳಾಗಿ ಕ್ರಿಯಾ ಯೋಜನೆ ತಯಾರಿಸಲಾಗಿತ್ತು.

ಸ್ಕೈ ಡೆಕ್‌ಗೆ ₹ 500 ಕೋಟಿ

ಬ್ರ್ಯಾಂಡ್‌ ಬೆಂಗಳೂರು ಪರಿಕಲ್ಪನೆಯಡಿ ನಗರವನ್ನು ಆಕರ್ಷಣೆಯ ಕೇಂದ್ರವನ್ನಾಗಿಸಲು ಪ್ರವಾಸೋದ್ಯಮವನ್ನು ಉತ್ತೇಜಿಸಲು ಬೆಂಗಳೂರು ಸಂಸ್ಕೃತಿ–ಪರಂಪರೆಯನ್ನು ಅನಾವರಣಗೊಳಿಸುವ  250 ಅಡಿ ಎತ್ತರ ಸ್ಕೈ ಡೆಕ್‌ (ವೀಕ್ಷಣಾ ಗೋಪುರ) ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಹೆಮ್ಮಿಗೆಪುರದಲ್ಲಿ (ನೈಸ್ ರಸ್ತೆ ಕ್ಲೋವರ್‌ ಲೀಫ್‌) ₹ 500 ಕೋಟಿ ಅಂದಾಜು ವೆಚ್ಚದಲ್ಲಿ ಸ್ಕೈ ಡೆಕ್‌ ನಿರ್ಮಾಣಗೊಳ್ಳಲಿದೆ ಎಂದು ಸಚಿವ ಎಚ್‌.ಕೆ.ಪಾಟೀಲ ಹೇಳಿದರು.

ಭೂಪರಿಹಾರಕ್ಕೆ ಮಾರ್ಗಸೂಚಿ

ಬಿಬಿಎಂಪಿ ವ್ಯಾಪ್ತಿಯಲ್ಲಿ ಮೂಲಭೂತ ಸೌರ್ಕಯ ಕಲ್ಪಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಹಕ್ಕುಗಳ ವರ್ಗಾವಣೆ (ಟಿಡಿಆರ್‌) ಮಾದರಿಯಲ್ಲಿ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಮಾರ್ಗಸೂಚಿ ದರದ ಆಧಾರದಲ್ಲಿ ಸಾರ್ವಜನಿಕರಿಗೆ ಟಿಡಿಆರ್‌ ರೂಪದಲ್ಲಿ ಪರಿಹಾರ ನೀಡಲು ಮಾರ್ಗಸೂಚಿ ಹೊರಡಿಸಲು ಸಂಪುಟ ಒಪ್ಪಿಗೆ ನೀಡಿದೆ. ಜಮೀನನ್ನು ಬಿಟ್ಟುಕೊಡುವ ಭೂಮಾಲೀಕರಿಗೆ ಭೂಮಿಯ ಮೌಲ್ಯ ನಿಗದಿಪಡಿಸುವಲ್ಲಿ ತಾರತಮ್ಯ ಆಗದಂತೆ ಸಾಧ್ಯವಾದಷ್ಟು ಮಟ್ಟಿಗೆ ಏಕರೂಪತೆ ಕಾಯ್ದುಕೊಂಡು ಭೂಮಿಯ ಮೌಲ್ಯವನ್ನು ನಿಗದಿಪಡಿಸಲಾಗುವುದು ಎಂದು ಸಚಿವ ಎಚ್‌.ಕೆ.ಪಾಟೀಲ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT