ಬೆಂಗಳೂರು: ನ್ಯಾಯಾಲಯದ ಆದೇಶಕ್ಕೂ ಮೊದಲೇ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ತಮಿಳುನಾಡಿಗೆ ಕಾವೇರಿ ನೀರನ್ನು ಹರಿಸಲು ಶ್ರಮ ಪಡದೆ ಹೋಗಿದ್ದರೆ, ಡಿಎಂಕೆ ಪಕ್ಷವು ‘ಇಂಡಿಯಾ’ ಮೈತ್ರಿಕೂಟವನ್ನು ಸೇರುತ್ತಿತ್ತೇ ಎಂದು ಬಿಜೆಪಿ ಟೀಕಿಸಿದೆ.
ರಾಜ್ಯದ ಕಾಂಗ್ರೆಸ್ ಸರ್ಕಾರ ನ್ಯಾಯಾಲಯದ ಆದೇಶಕ್ಕೂ ಮೊದಲೇ ಸ್ಟಾಲಿನ್ ನಾಡಿನ ಕಡೆಗೆ ನೀರು ಹರಿಸಿದ್ದು ಯಾಕೆ ಅನ್ನುವ ಸತ್ಯ ಕನ್ನಡಿಗರೆಲ್ಲರಿಗೂ ತಿಳಿದಿದೆ. ಕಾವೇರಿ ವಿಷಯದಲ್ಲಿ ಸ್ವಾರ್ಥದ ಮೈತ್ರಿಕೂಟದ ರಚನೆ ಆರಂಭವಾದಾಗಿನಿಂದ ಇಲ್ಲಿಯವರೆಗೂ ಕಾಂಗ್ರೆಸ್ ಸರ್ಕಾರ, ಸ್ಟಾಲಿನ್ ಗುಲಾಮರಂತೆ ಕೆಲಸ ಮಾಡಿದೆಯೇ ಹೊರತು ರಾಜ್ಯದ ಹಿತವನ್ನು ಎಳ್ಳಷ್ಟೂ ಕಾಪಾಡಿಲ್ಲ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆಯುವ ಮೂಲಕ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಕೆಆರ್‌ಎಸ್ ಮಡಿಲನ್ನು ಪೂರ್ತಿ ಬರಿದು ಮಾಡಿದ್ದೆಲ್ಲಾ ಮುಗಿದ ಮೇಲೆ ಈಗ ಕೊನೆ ಕ್ಷಣದಲ್ಲಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಬೇಕೆಂಬ ತಲೆಹರಟೆ ವಾದವನ್ನು ಕಾಂಗ್ರೆಸ್ ತೆಗೆದಿದೆ. ಈ ಅಪ್ರಬುದ್ಧ ವಿತಂಡ ವಾದದಲ್ಲಿ ಜನರ ಗಮನ ಬೇರೆಡೆ ಸೆಳೆಯುವ ಉದ್ದೇಶವಿದೆಯೇ ಹೊರತು, ರಾಜ್ಯದ ಹಿತಾಸಕ್ತಿ ಕಾಪಾಡುವ ಉದ್ದೇಶವಂತೂ ಲವಲೇಶವೂ ಇಲ್ಲ ಎಂದು ಬಿಜೆಪಿ ಹೇಳಿದೆ.
ಕಾವೇರಿ ವಿವಾದ ಇಂದು ನಿನ್ನೆಯದಲ್ಲ, ದಶಕಗಳಿಂದ ಜೀವಂತವಿದೆ. ವಿವಾದ ಬಗೆಹರಿಸಿ ನ್ಯಾಯ ತೀರ್ಮಾನಕ್ಕೆ ಈಗಾಗಲೇ ಹಲವಾರು ನ್ಯಾಯಾಧೀಕರಣ ಮಂಡಳಿಗಳು ಹಾಗೂ ಪ್ರಾಧಿಕಾರಗಳು ರಚನೆಯಾಗಿವೆ. ಈ ಪ್ರಾಧಿಕಾರಗಳೆಲ್ಲವೂ ರಚನೆಯಾಗಿದ್ದು ಕೇಂದ್ರ ಅಥವಾ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇದ್ದಾಗಲೇಯೇ ಎಂದು ಬಿಜೆಪಿ ತಿಳಿಸಿದೆ.
ಕಾಂಗ್ರೆಸ್ ಮನಸ್ಸು ಮಾಡಿದರೆ ಎರಡೂ ರಾಜ್ಯಗಳು ಎದುರು ಬದುರು ಕೂತು, ತಮ್ಮ ರಾಜ್ಯಗಳ ವಾಸ್ತವ ಪರಿಸ್ಥಿತಿಯ ಅಂಕಿ–ಅಂಶಗಳನ್ನು ಮುಂದಿಟ್ಟು ಕಾವೇರಿ ಸಮಸ್ಯೆ ಬಗೆಹರಿಸಬಹುದು. ಆದರೆ, ಕಾಂಗ್ರೆಸ್ ಮತ್ತು ತಮಿಳುನಾಡಿನ ಸ್ಟಾಲಿನ್ ಸರ್ಕಾರಕ್ಕೆ ಅವಿನಾಭಾವ ಸಂಬಂಧವಿದೆ. ಕಾಂಗ್ರೆಸ್ ದಶಕಗಳ ಕಾಲದಿಂದಲೂ ಡಿಎಂಕೆಯ ಅತ್ಯಾಪ್ತ ಮಿತ್ರಪಕ್ಷವಾಗಿದೆ. ಕಾಂಗ್ರೆಸ್ ಸಹವಾಸವೇ ಬೇಡವೆಂದು ಇದುವರೆಗೆ ನೂರಾರು ಪಕ್ಷಗಳು ದೂರ ಸರಿದಾಗಲೂ ಡಿಎಂಕೆ ಮಾತ್ರ ಜೊತೆಗೆ ನಿಂತಿತ್ತು ಎಂದು ಬಿಜೆಪಿ ಟೀಕಿಸಿದೆ.
ಕರ್ನಾಟಕ ಸಿಎಂ ಸಿದ್ದರಾಮಯ್ಯ ಹಾಗೂ ತಮಿಳುನಾಡಿನ ಸಿಎಂ ಸ್ಟಾಲಿನ್ ಅವರ ನಡುವಿನ ಸಂಬಂಧವೂ ಒಂದೇ ತಾಯಿಯ ಮಕ್ಕಳು ನಾವು ಎನ್ನುವಷ್ಟರ ಮಟ್ಟಿಗೆ ಅನ್ಯೋನ್ಯವಾಗಿದೆ. ಇನ್ನೂ ಜಲಸಂಪನ್ಮೂಲ ಸಚಿವ, ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಚುನಾವಣೆಯಲ್ಲಿ ಡಿಎಂಕೆ ಪರ ತಮಿಳುನಾಡಿನಲ್ಲಿ ತನು–ಮನ–ಧನ ಅರ್ಪಿಸಿ ಅಲ್ಲಿಯೇ ಮೊಕ್ಕಾಂ ಹೂಡಿದ್ದರು. ಸ್ಟಾಲಿನ್ ಅವರು ಹೆಗಲ ಮೇಲೆ ಕೈ ಹಾಕಿ, ಅವರ ಕಿವಿಯಲ್ಲಿ ಪಿಸು ಪಿಸು ಮಾತನಾಡುವಷ್ಟು ಸಲುಗೆಯಿರುವ ಇವರಿಬ್ಬರ ಸ್ನೇಹ–ಸಂಬಂಧ ಒಂದು ರೀತಿ ನರಕದಲ್ಲಿಯೇ ನಿಶ್ಚಯವಾದ ಮದುವೆಯಂತೆ ಎಂದು ವ್ಯಂಗ್ಯವಾಡಿದೆ.
ಕಾಂಗ್ರೆಸ್‌ಗೆ ನಿಜಕ್ಕೂ ರಾಜ್ಯದ ಹಿತ ಕಾಪಾಡುವ ಮಹತ್ವಾಕಾಂಕ್ಷೆಯಿದ್ದರೆ ತಮಿಳುನಾಡು ಸರ್ಕಾರದ ಜತೆ ಮಾತನಾಡಿ ಕಾವೇರಿ ಸಮಸ್ಯೆಗೆ ಒಂದು ಪರಿಹಾರ ಕಂಡುಕೊಳ್ಳಬಹುದು. ಆದರೆ, ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಕರ್ನಾಟಕದ ಹಿತಾಸಕ್ತಿಗಿಂತಲೂ ಹೆಚ್ಚಾಗಿ ತಮ್ಮ ಸ್ವಾರ್ಥದ ‘ಇಂಡಿಯಾ’ ಮೈತ್ರಿಕೂಟದ ಹಿತಾಸಕ್ತಿ ಮುಖ್ಯವಾಗಿದೆ. ಹೀಗಾಗಿ ರಾಜ್ಯದ ಜನತೆ ಕಣ್ಣೀರು ಹಾಕಿದರೂ ಸರಿಯೇ, ಸ್ಟಾಲಿನ್ ಅವರು ಮಾತ್ರ ಸದಾ ಸಂತಸದಲ್ಲಿರಬೇಕು ಎಂಬ ಕಾರಣಕ್ಕೆ ಕಾವೇರಿ ನೀರನ್ನು ಮನಸ್ಸಿಗೆ ಬಂದಂತೆ ಸ್ಟಾಲಿನ್ ನಾಡಿಗೆ ಹರಿಬಿಡಲಾಗುತ್ತಿದೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.