ನವದೆಹಲಿ: ಕಾವೇರಿ ಜಲವಿವಾದ ನ್ಯಾಯಮಂಡಳಿಯ ಅಂತಿಮ ಆದೇಶದ ಷರತ್ತು 10 ಅನ್ನು ಉಲ್ಲಂಘಿಸಿ ತಮಿಳುನಾಡು ಸರ್ಕಾರವು 69.77 ಟಿಎಂಸಿ ಅಡಿ ನೀರನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ಕರ್ನಾಟಕ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ತಮಿಳುನಾಡಿಗೆ ಪ್ರತಿನಿತ್ಯ 24 ಸಾವಿರ ಕ್ಯುಸೆಕ್ ಕಾವೇರಿ ನೀರನ್ನು ಬಿಡಲು ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ತಮಿಳುನಾಡು ಸರ್ಕಾರವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಈ ಪ್ರಕರಣದ ವಿಚಾರಣೆಗೆ ತ್ರಿಸದಸ್ಯ ಪೀಠ ರಚಿಸಲಾಗಿದೆ. ಪ್ರಕರಣದ ವಿಚಾರಣೆ ಶುಕ್ರವಾರ ನಡೆಯಲಿದೆ. ಕರ್ನಾಟಕ ಸರ್ಕಾರದ ಜಲಸಂಪನ್ಮೂಲ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಅವರು ಸುಪ್ರೀಂ ಕೋರ್ಟ್‌ಗೆ ಬುಧವಾರ ಪ್ರಮಾಣಪತ್ರ ಸಲ್ಲಿಸಿದ್ದು, ತಮಿಳುನಾಡಿನ ಅರ್ಜಿಯನ್ನು ವಜಾ ಮಾಡುವಂತೆ ಮನವಿ ಮಾಡಿದ್ದಾರೆ. ತಮಿಳುನಾಡು ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸುವ ತುರ್ತು ಸನ್ನಿವೇಶವೂ ನಿರ್ಮಾಣವಾಗಿರಲಿಲ್ಲ ಎಂದೂ ಗಮನ ಸೆಳೆದಿದ್ದಾರೆ.
ಮಳೆಯ ಪ್ರಮಾಣದಲ್ಲಿ ಶೇ 25ರಷ್ಟು ಇಳಿಕೆಯಾಗಿದ್ದರೂ ಈ ವರ್ಷದ ನೀರಿನ ಪರಿಸ್ಥಿತಿ ಸಹಜವಾಗಿದೆ ಎಂಬ ಊಹೆಯ ಮೇಲೆ ತಮಿಳುನಾಡಿನ ವಾದ ಆಧರಿಸಿದೆ ಎಂದು ಕರ್ನಾಟಕ ಹೇಳಿದೆ. ಈ ವರ್ಷ ಸಂಕಷ್ಟದ ವರ್ಷವಾಗಿರುವುದರಿಂದ ಕಾವೇರಿ ನೀರು ಹರಿಸುವಂತೆ ತಮಿಳುನಾಡು ಸರ್ಕಾರ ಒತ್ತಡ ಹೇರುವುದು ಸರಿಯಲ್ಲ ಎಂದೂ ತಿಳಿಸಿದೆ.
ಈ ಜಲ ವರ್ಷದಲ್ಲಿ ನೈರುತ್ಯ ಮುಂಗಾರು ಇಲ್ಲಿಯವರೆಗೆ ಬಹುತೇಕ ವಿಫಲವಾಗಿದ್ದು, ಇದರಿಂದಾಗಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಸಂಕಷ್ಟದ ಸ್ಥಿತಿ ಉಂಟಾಗಿದೆ. ಹಾಗಾಗಿ, ಸಾಮಾನ್ಯ ವರ್ಷಕ್ಕೆ ನಿಗದಿಪಡಿಸಿದ ಮಾನದಂಡದ ಪ್ರಕಾರ ನೀರು ಹರಿಸುವುದು ಕಷ್ಟ ಸಾಧ್ಯ ಎಂದು ಅಸಹಾಯಕತೆ ವ್ಯಕ್ತಪಡಿಸಿದೆ.
ಸೆಪ್ಟೆಂಬರ್ ತಿಂಗಳಲ್ಲಿ 36.76 ಟಿಎಂಸಿ ಅಡಿ ನೀರು ಬಿಡಬೇಕು ಎಂಬ ಬೇಡಿಕೆಗೆ ಕಾನೂನಿನ ಆಧಾರ ಇಲ್ಲ. ಏಕೆಂದರೆ, ಈ ಪ್ರಮಾಣವನ್ನು ಸಾಮಾನ್ಯ ನೀರಿನ ವರ್ಷದಲ್ಲಿ ನಿಗದಿಪಡಿಸಲಾಗಿದೆ. ಇದು ಸಂಕಷ್ಟದ ವರ್ಷ. ಹಾಗಾಗಿ, ಈ ವರ್ಷಕ್ಕೆ ಇದು ಅನ್ವಯವಾಗುವುದಿಲ್ಲ ಎಂದೂ ಹೇಳಿದೆ.
ಈ ನೀರಿನ ವರ್ಷದ ಆರಂಭದಲ್ಲಿ ತಮಿಳುನಾಡು 69.77 ಟಿಎಂಸಿ ಅಡಿ (ಜೂನ್ 1ಕ್ಕೆ) ಸಂಗ್ರಹ ಹೊಂದಿತ್ತು. ಕರ್ನಾಟಕವು ಆಗಸ್ಟ್ 22ರ ವರೆಗೆ 26.7 ಟಿಎಂಸಿ ಅಡಿ ನೀರನ್ನು ತಮಿಳುನಾಡಿಗೆ ಹರಿಸಿದೆ. ಆ ಪ್ರಕಾರ, ತಮಿಳುನಾಡಿನ ಜಲಾಶಯಗಳಲ್ಲಿ 96.5 ಟಿಎಂಸಿ ಅಡಿ ನೀರು ಇರಬೇಕಿತ್ತು. ಆದರೆ, ತಮಿಳುನಾಡಿನ ಜಲಾಶಯಗಳಲ್ಲಿ ಪ್ರಸ್ತುತ 21.6 ಟಿಎಂಸಿ ಅಡಿ ಮಾತ್ರ ನೀರಿದೆ. ಕುರುವೈ ಭತ್ತದ ಬೆಳೆಗೆ ಬೇಕಿರುವುದು 32.27 ಟಿಎಂಸಿ ಅಡಿ ನೀರು. ಇದಕ್ಕಾಗಿ ಇಲ್ಲಿಯ ವರೆಗೆ 22.44 ಟಿಎಂಸಿ ಅಡಿ ನೀರು ಬಳಸಬೇಕಿತ್ತು. ಉಳಿದ 9.83 ಟಿಎಂಸಿ ಅಡಿ ನೀರನ್ನು ಸೆಪ್ಟೆಂಬರ್‌ನಲ್ಲಿ ಬಳಸಬೇಕಿತ್ತು. ಆದರೆ, ಬೆಳೆ ಬೆಳೆಯಲು ಹೆಚ್ಚುವರಿಯಾಗಿ 69.77 ಟಿಎಂಸಿ ಅಡಿ ನೀರನ್ನು ಬಳಸಿದೆ. ತಮಿಳುನಾಡಿನಲ್ಲಿ 1.85 ಲಕ್ಷ ಎಕರೆಯಲ್ಲಿ ಕುರುವೈ ಬೆಳೆಗೆ ಒಟ್ಟು 32.27 ಟಿಎಂಸಿ ಅಡಿ ನೀರು ಅಗತ್ಯ ಎಂದು ಕಾವೇರಿ ಜಲವಿವಾದ ನ್ಯಾಯಮಂಡಳಿಯು ಹಂಚಿಕೆ ಮಾಡಿತ್ತು. ಆದರೆ, ತಮಿಳುನಾಡು ಸರ್ಕಾರ ಕುರುವೈ ಬೆಳೆಗೆ ಹಂಚಿಕೆ ಮಾಡಿದ್ದಕ್ಕಿಂತ 2 ಪಟ್ಟು ಹೆಚ್ಚು ನೀರು ಬಳಕೆ ಮಾಡಿದೆ ಎಂದು ಕರ್ನಾಟಕ ದೂರಿದೆ.
2023–24ನೇ ವರ್ಷದಲ್ಲಿ ನಾಲ್ಕು ಜಲಾಶಯಗಳಿಂದ ರಾಜ್ಯಕ್ಕೆ 200 ಟಿಎಂಸಿ ಅಡಿ ನೀರು ಅಗತ್ಯ ಇದೆ. ರಾಜ್ಯ ಸರ್ಕಾರವು ಈ ತನಕ 7.2 ಟಿಎಂಸಿ ಅಡಿ ನೀರನ್ನಷ್ಟೇ ಬಳಸಿಕೊಂಡಿದೆ. ರಾಜ್ಯದ ಕೃಷಿ ಭೂಮಿಗಳಿಗೆ ನೀರು ಹರಿಸಬೇಕಿದೆ. ಬೆಂಗಳೂರು ಮಹಾನಗರ ಹಾಗೂ ಹಲವು ಪಟ್ಟಣಗಳಿಗೆ ಕುಡಿಯುವ ನೀರು ಪೂರೈಸಬೇಕಿದೆ. ಮುಂಗಾರು ಕೊರತೆಯಿಂದಾಗಿ ಜಲಾಶಯಗಳು ತುಂಬಿಲ್ಲ. ಹೀಗಾಗಿ, ರಾಜ್ಯದ ಸ್ಥಿತಿ ಸಂಕಷ್ಟದಿಂದ ಕೂಡಿದೆ ಎಂದೂ ರಾಜ್ಯ ಹೇಳಿಕೊಂಡಿದೆ.
ದುರ್ಬಲ ಮುಂಗಾರಿನ ಕಾರಣ ಕರ್ನಾಟಕದಲ್ಲಿ ಕಾವೇರಿ ಜಲಾನಯನ ಪ್ರದೇಶದ ಅಣೆಕಟ್ಟುಗಳಿಗೆ ನೀರಿನ ಒಳಹರಿವು ಶೇ 42.54ರಷ್ಟು ತಗ್ಗಿದೆ. 2012–13 ಹಾಗೂ 2016–17ರ ಸಂಕಷ್ಟದ ನೀರಿನ ವರ್ಷಗಳಲ್ಲಿ, ಮೆಟ್ಟೂರು ಜಲಾಶಯದಿಂದ ನೀರನ್ನು ಬಿಡುಗಡೆ ಮಾಡುವ ಪ್ರಮಾಣಿತ ಅಭ್ಯಾಸವು 1 ಟಿಎಂಸಿ ಅಡಿ ಆಗಿತ್ತು. 2023–24 ಸಹ ಸಂಕಷ್ಟದ ವರ್ಷ. ಪ್ರಸ್ತುತ ಮೆಟ್ಟೂರು ಜಲಾಶಯದಲ್ಲಿ 21.65 ಟಿಎಂಸಿ ಅಡಿ ನೀರಿದೆ. ಕರ್ನಾಟಕ ಪ್ರತಿನಿತ್ಯ 10 ಸಾವಿರ ಕ್ಯುಸೆಕ್ ನೀರು ಬಿಡುತ್ತಿದೆ. ಜತೆಗೆ, ತಮಿಳುನಾಡಿನಲ್ಲಿ ಸಾಕಷ್ಟು ನೀರಿದೆ. ಹಾಗಾಗಿ, ತುರ್ತು ಸನ್ನಿವೇಶ ನಿರ್ಮಾಣವಾಗಿಲ್ಲ ಎಂದೂ ಕರ್ನಾಟಕ ಸರ್ಕಾರ ಸ್ಪಷ್ಟಪಡಿಸಿದೆ.
ತಮಿಳುನಾಡಿಗೆ ಆಗಸ್ಟ್ 12ರಿಂದ ಪ್ರತಿನಿತ್ಯ 10 ಸಾವಿರ ಕ್ಯುಸೆಕ್ ನೀರನ್ನು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನಿರ್ದೇಶನ ನೀಡಿತ್ತು. ಜಲಾಶಯಗಳಿಂದ ಹರಿಸಿದ ನೀರು ಬಿಳಿಗುಂಡ್ಲು ಮಾಪನ ಕೇಂದ್ರಕ್ಕೆ ತಲುಪಲು 2–3 ದಿನಗಳು ಬೇಕಾಗುತ್ತವೆ. ಮಾಪನ ಕೇಂದ್ರದ ಲೆಕ್ಕಾಚಾರದ ಪ್ರಕಾರ, ಆಗಸ್ಟ್ 15ರಿಂದ 22ರ ಅವಧಿಯಲ್ಲಿ 1.01 ಲಕ್ಷ ಕ್ಯುಸೆಕ್ ನೀರು ಬಿಡಲಾಗಿದೆ. ತಮಿಳುನಾಡಿಗೆ ನೀರು ಬಿಡುವಂತೆ ಪ್ರಾಧಿಕಾರವು ಈ ವರ್ಷ ಈ ಹಿಂದೆಯೂ ನಿರ್ದೇಶನಗಳನ್ನು ನೀಡಿತ್ತು. ಆ ನಿರ್ದೇಶನಗಳನ್ನು ಕರ್ನಾಟಕ ಪಾಲನೆ ಮಾಡಿದೆ ಎಂದೂ ಅರ್ಜಿಯಲ್ಲಿ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.