ಬೆಂಗಳೂರು: ‘ಕಲುಷಿತ ನೀರು ಸೇವನೆಯಿಂದ ಮರಣ ಪ್ರಕರಣಗಳು ಮರುಕಳಿಸಿದರೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳನ್ನು (ಸಿಇಒ) ಹೊಣೆಗಾರರನ್ನಾಗಿಸಿ ಅಮಾನತು ಮಾಡಲಾಗುವುದು. ನಗರಸಭೆಗಳ ಆಯುಕ್ತರ ಮೇಲೆಯೂ ಕ್ರಮ ಕೈಗೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.
ಕುಡಿಯುವ ನೀರಿನ ಸಮಸ್ಯೆಗಳ ಕುರಿತು ಮುಖ್ಯಮಂತ್ರಿ ಮಂಗಳವಾರ ಸಭೆ ನಡೆಸಿದರು.
15 ದಿನಗಳಲ್ಲಿ ವರದಿ: ‘ಎಲ್ಲ ಜಿಲ್ಲೆಗಳ ಕೊಳೆಗೇರಿಗಳಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಹಾಗೂ ಚರಂಡಿ ನೀರಿನ ಪೈಪ್‌ಗಳು ಪ್ರತ್ಯೇಕವಾಗಿರುವುದನ್ನು ಖಾತ್ರಿ ಪಡಿಸಬೇಕು. ಪ್ರತ್ಯೇಕ ಇಲ್ಲದಿರುವ ಸ್ಥಳಗಳನ್ನು ಗುರುತಿಸಿ ನೈರ್ಮಲ್ಯ ಅಭಿಯಾನ ಕೈಗೊಂಡು 15 ದಿನಗಳಲ್ಲಿ ವರದಿ ಸಲ್ಲಿಸಬೇಕು’ ಎಂದು ಅವರು ಸೂಚಿಸಿದರು.
‘ಕುಡಿಯುವ ನೀರಿಗೆ ಎಲ್ಲಿಯೂ ಸಮಸ್ಯೆ ಆಗಬಾರದು. ನೀರಿನ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು’ ಎಂದೂ ಸಲಹೆ ನೀಡಿದರು.
ಕಲುಷಿತ ನೀರಿನ ಸೇವನೆಯಿಂದಾಗಿ 13-14 ಜನ ಸಾವಿಗೀಡಾಗಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಂಥ ಪ್ರಕರಣಗಳು ಸಂಭವಿಸುತ್ತಿವೆ. ಗ್ರಾಮೀಣಾಭಿವೃದ್ಧಿ, ಆರೋಗ್ಯ, ಪೌರಾಡಳಿತ ಹಾಗೂ ನಗರಾಭಿವೃದ್ಧಿ - ಈ ನಾಲ್ಕು ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.