ಬೆಂಗಳೂರು: ಚಂದ್ರನಲ್ಲಿ ಕತ್ತಲು ಆವರಿಸಿದ ನಂತರ ಎಂಜಿನ್ ಉರಿಸುವ ಮೂಲಕ ‘ವಿಕ್ರಮ್’ ಲ್ಯಾಂಡರ್ ಅನ್ನು ನೆಲದಿಂದ ಮೇಲಕ್ಕೇರಿಸಿ ಕೊಂಚ ಪಕ್ಕಕ್ಕೆ ತೇಲಿಸಿ ಪುನಃ ಚಂದ್ರನಂಗಳದ ಮೇಲೆ ಸುರಕ್ಷಿತವಾಗಿ ಇಳಿಸಲಾಗಿದೆ.
ಸೋಮವಾರ ಬೆಳಿಗ್ಗೆ 8 ಗಂಟೆ ಸುಮಾರಿಗೆ ಈ ಸಣ್ಣ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿ ಬಳಿಕ ಚಂದ್ರಯಾನ–3 ರ ವಿಕ್ರಮ್‌ನಲ್ಲಿರುವ ಎಲ್ಲ ಉಪಕರಣಗಳನ್ನು ‘ಸ್ಲೀಪ್‌ಮೋಡ್’ಗೆ ಹಾಕಲಾಗಿದೆ ಎಂದು ಇಸ್ರೊ ‘ಎಕ್ಸ್’ನಲ್ಲಿ ಮಾಹಿತಿ ನೀಡಿದೆ.
ಈ ಕುರಿತು ‘ಪ್ರಜಾವಾಣಿ’ ಜತೆ ಮಾತನಾಡಿದ ಇಸ್ರೊ ವಿಜ್ಞಾನಿಯೊಬ್ಬರು, ‘ಇದೊಂದು ಸಣ್ಣ ಪರೀಕ್ಷೆಯಾಗಿದ್ದರೂ ಮಹತ್ವದ ಪರೀಕ್ಷೆಯಾಗಿದೆ. 40 ಸೆಂ.ಮೀ ನಷ್ಟು ಮೇಲಕ್ಕೆ ಎಬ್ಬಿಸಿ 30 ರಿಂದ 40 ಸೆಂ.ಮೀ ನಷ್ಟು ಪಕ್ಕಕ್ಕೇ ತೇಲಿಸಿ ಮತ್ತೊಂದು ಸ್ಥಳದಲ್ಲಿ ಇಳಿಸಲಾಗಿದೆ. ಇದಕ್ಕೆ ಹಾಪ್ ಟೆಸ್ಟ್ ಎನ್ನಲಾಗುತ್ತದೆ’ ಎಂದು ವಿವರಿಸಿದರು.
‘ಇದು ಸಣ್ಣ ಪರೀಕ್ಷೆ ಆಗಿದ್ದರೂ ಭವಿಷ್ಯದಲ್ಲಿ ಉಪಯೋಗಕ್ಕೆ ಬರುತ್ತದೆ. ಚಂದ್ರ ಅಥವಾ ಇತರ ಗ್ರಹಗಳಿಗೆ ಬಾಹ್ಯಾಕಾಶ ನೌಕೆ ಕಳಿಸಿ ಅದನ್ನು ಮತ್ತೆ ವಾಪಾಸ್ ಭೂಮಿಗೆ ತರುವ ಉದ್ದೇಶಕ್ಕೆ ನೆರವಾಗುತ್ತದೆ. ಗಗನಯಾನ ನಡೆಸುವ ಮಾನವರನ್ನು ಮತ್ತೆ ಭೂಮಿಗೆ ತರುವುದಕ್ಕೂ ಈ ಪರೀಕ್ಷೆ ಮುಖ್ಯವಾಗಿದೆ. ಈ ಪ್ರಯತ್ನ ಇಸ್ರೊ ವಿಜ್ಞಾನಿಗಳಲ್ಲಿ ವಿಶ್ವಾಸ ಮೂಡಿಸಿದೆ’ ಎಂದು ಹೇಳಿದರು.
‘ಲ್ಯಾಂಡರ್‌ನ ಉಪಕರಣಗಳನ್ನು ಸ್ವಿಚ್ ಆಫ್ ಮಾಡಿದ್ದರೂ ರಿಸೀವರ್ ಕಾರ್ಯನಿರ್ವಹಿಸುವ ಸ್ಥಿತಿಯಲ್ಲಿ ಇರಿಸಲಾಗಿದೆ. ಹಾಪ್ ಪರೀಕ್ಷೆಗೆ ಮೊದಲು ರ್‍ಯಾಂಪ್ ಅನ್ನು ಮಡಿಸಿಡಲಾಗಿದೆ. ಇದೇ 22 ರಂದು ಪುನಃ ಲ್ಯಾಂಡರ್ ಮತ್ತು ರೋವರ್‌ಗಳನ್ನು ನಿದ್ದೆಯಿಂದ ‘ಎಬ್ಬಿಸುವ’ ಕೆಲಸವೂ ನಡೆಯಲಿದೆ‘ ಎಂದು ಅವರು ವಿವರಿಸಿದರು. ಈ ಕುರಿತ ಚಿತ್ರಗಳು ಮತ್ತು ವಿಡಿಯೊವನ್ನೂ ‘ಎಕ್ಸ್’ನಲ್ಲಿ ಹಂಚಿಕೊಂಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.