ಶನಿವಾರ, 30 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Chandrayaan-3 | ‘ತ್ರಿ’ವಿಕ್ರಮ ನೆಲೆಯೀಗ ‘ಶಿವಶಕ್ತಿ ಪಾಯಿಂಟ್‌’

ನಾಮಕರಣ ಘೋಷಿಸಿದ ಪ್ರಧಾನಿ ನರೇಂದ್ರ ಮೋದಿ
Published 26 ಆಗಸ್ಟ್ 2023, 15:21 IST
Last Updated 26 ಆಗಸ್ಟ್ 2023, 15:21 IST
ಅಕ್ಷರ ಗಾತ್ರ

ಬೆಂಗಳೂರು: ‘ಚಂದ್ರಯಾನ–3ರ ಲ್ಯಾಂಡರ್‌ ವಿಕ್ರಮ್‌, ಚಂದ್ರನ ಮೇಲಿಳಿದ ಸ್ಥಳವನ್ನು ‘ಶಿವಶಕ್ತಿ ಪಾಯಿಂಟ್‌’ ಎಂಬುದಾಗಿ ನಾಮಕರಣ ಮಾಡಲಾಗುವುದು’ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದರು.

ಇಲ್ಲಿನ ಪೀಣ್ಯದಲ್ಲಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಟೆಲಿಮೆಟ್ರಿ ಟ್ರ್ಯಾಕಿಂಗ್‌ ಆ್ಯಂಡ್‌ ಕಮಾಂಡ್‌ ಸೆಂಟರ್‌ನಲ್ಲಿ ಶನಿವಾರ ಬೆಳಿಗ್ಗೆ ವಿಜ್ಞಾನಿಗಳನ್ನು ಅಭಿನಂದಿಸಿ ಮಾತನಾಡಿದ ಅವರು, ‘ಇಂತಹ ಅಧ್ಯಯನ ನೌಕೆಗಳು ಇಳಿದ ಸ್ಥಳಕ್ಕೆ ನಾಮಕರಣ ಮಾಡುವ ಪರಂಪರೆ ವೈಜ್ಞಾನಿಕ ಕ್ಷೇತ್ರದಲ್ಲಿದೆ. ಈ ಅವಕಾಶದಂತೆ ಚಂದ್ರಯಾನ–3 ಇಳಿದ ಸ್ಥಳವನ್ನು ಶಿವಶಕ್ತಿ ಪಾಯಿಂಟ್‌ ಎಂದು ನಾಮಕರಣ ಮಾಡಲು ನಿರ್ಧರಿಸಲಾಗಿದೆ’ ಎಂದರು.

‘ಶಿವ ಎಂದರೆ ಮನುಕುಲದ ಕಲ್ಯಾಣಕ್ಕಾಗಿ ನಿರ್ಣಯ ಕೈಗೊಳ್ಳುವುದು. ಶಕ್ತಿ ಎಂದರೆ ಆ ನಿರ್ಣಯಗಳನ್ನು ಅನುಷ್ಠಾನಕ್ಕೆ ತರಲು ಬೇಕಾದ ಬಲ ಎಂದರ್ಥ. ಶಿವಶಕ್ತಿ ಪಾಯಿಂಟ್‌ ಹಿಮಾಲಯದಿಂದ ಕನ್ಯಾಕುಮಾರಿವರೆಗಿನ ಪ್ರದೇಶಗಳನ್ನು ಜೋಡಿಸಲಿದೆ’ ಎಂದು ಹೇಳಿದರು.

ತಿರಂಗಾ ಪಾಯಿಂಟ್‌:

‘ಚಂದ್ರಯಾನ–2 ಪತನವಾದ ಸ್ಥಳಕ್ಕೂ ನಾಮಕರಣ ಮಾಡಲು ಅವಕಾಶವಿತ್ತು. ಆದರೆ ವೈಫಲ್ಯದ ಬೇಸರದಲ್ಲಿ ಆ ಕೆಲಸ ಮಾಡಲಿಲ್ಲ. ಈಗ ಚಂದ್ರಯಾನ–2 ಪತನವಾಗಿದ್ದ ಸ್ಥಳವನ್ನು ‘ತಿರಂಗಾ’ ಎಂದು ನಾಮಕರಣ ಮಾಡುತ್ತೇವೆ. ಯಾವ ವೈಫಲ್ಯವೂ ಅಂತಿಮವಲ್ಲ, ಅಂತಃಶಕ್ತಿ ಇದ್ದರೆ ಗೆಲುವು ಸಾಧ್ಯ ಎಂಬುದನ್ನು ತಿರಂಗಾ ಪಾಯಿಂಟ್‌ ಸೂಚಿಸುತ್ತದೆ’ ಎಂದರು.

ರಸಪ್ರಶ್ನೆ ಸ್ಪರ್ಧೆ:

ಚಂದ್ರಯಾನ ಯೋಜನೆ ಕುರಿತು MyGov ವೇದಿಕೆ ಮೂಲಕ ರಾಷ್ಟ್ರಮಟ್ಟದ ರಸಪ್ರಶ್ನೆ ಸ್ಪರ್ಧೆ ಆಯೋಜಿಸಲಾಗಿದೆ. ಸೆಪ್ಟೆಂಬರ್‌ 1ರಿಂದ ಆರಂಭವಾಗುವ ಈ ಸ್ಪರ್ಧೆಯಲ್ಲಿ ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಮತ್ತು ಸಂಶೋಧಕರು ಹೆಚ್ಚಿನ ಸಂಖ್ಯೆಯಲ್ಲಿ ಭಾವಗಹಿಸಬೇಕು ಎಂದು ಪ್ರಧಾನಿ ಮನವಿ ಮಾಡಿದರು.

ಆ.23 ರಾಷ್ಟ್ರೀಯ ಬಾಹ್ಯಾಕಾಶ ದಿನ ‘ಚಂದ್ರಯಾನ–3 ಚಂದ್ರನ ಮೇಲಿಳಿದ ನೆನಪಿಗಾಗಿ ಆಗಸ್ಟ್‌ 23 ಅನ್ನು ಇನ್ನು ಮುಂದೆ ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನಾಗಿ ಆಚರಿಸಲಾಗುವುದು’ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸಿದರು. ವಿಜ್ಞಾನ ತಂತ್ರಜ್ಞಾನ ಮತ್ತು ಬಾಹ್ಯಾಕಾಶ ವಿಜ್ಞಾನಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ಪ್ರೋತ್ಸಾಹಿಸುವುದಕ್ಕಾಗಿ ಈ ದಿನವನ್ನು ಮೀಸಲಿಡಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT