ಬೆಂಗಳೂರು: ‘ಚನ್ನಪಟ್ಟಣದಲ್ಲಿ ಸಿ.ಪಿ. ಯೋಗೇಶ್ವರ್ ಅವರು ಕಾಂಗ್ರೆಸ್ ಪಕ್ಷಕ್ಕೆ ಬೇಕಿಲ್ಲ. ನಾವು ಅವರನ್ನು ಪಕ್ಷಕ್ಕೆ ಕರೆದಿಲ್ಲ. ನಮ್ಮ ಪಕ್ಷದ ಅಸ್ತಿತ್ವವನ್ನು ನಾವು ಉಳಿಸಿಕೊಳ್ಳುತ್ತೇವೆ’ ಎಂದು ಕಾಂಗ್ರೆಸ್ ಮುಖಂಡ, ಮಾಜಿ ಸಂಸದ ಡಿ.ಕೆ. ಸುರೇಶ್ ಹೇಳಿದರು.
ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು, ‘ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಪಕ್ಷದಲ್ಲಿ ಸಿದ್ಧತೆ ನಡೆಯುತ್ತಿದೆ. ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ’ ಎಂದರು.
ಕುತಂತ್ರ ನಡೆಯದು: ‘ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಕಾಂಗ್ರೆಸ್ ನಾಯಕರ ವಿರುದ್ಧ ಬಿಜೆಪಿಯವರ ಷಡ್ಯಂತ್ರಗಳು ಅಥವಾ ಕುತಂತ್ರಗಳು ಯಾವುದೇ ಇರಲಿ, ಅದ್ಯಾವುದೂ ನಡೆಯುವುದಿಲ್ಲ’ ಎಂದೂ ಹೇಳಿದರು.
‘ಯಾರಾದರೂ ಮುಖ್ಯಮಂತ್ರಿ ಸ್ಥಾನ ಕೇಳಿದರೆ ತಪ್ಪಿಲ್ಲ. ಆದರೆ, ಆ ಸ್ಥಾನ ಸದ್ಯ ಖಾಲಿ ಇಲ್ಲ. ಮುಖ್ಯಮಂತ್ರಿ ಬದಲಾವಣೆ ಇಲ್ಲ. ಸುಭದ್ರ ನಾಯಕತ್ವ ರಾಜ್ಯದಲ್ಲಿದೆ’ ಎಂದರು.
ಎಚ್‌ಡಿಕೆ ರಾಜೀನಾಮೆ ನೀಡಲಿ: ‘ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಬದ್ದತೆ ಇಲ್ಲದ ನಾಯಕ. ಹೊಸ ಹೊಸ ಸುಳ್ಳುಗಳನ್ನು ಹೇಳುತ್ತಾರೆ. ಅವರು ಮೊದಲು ರಾಜೀನಾಮೆ ನೀಡಬೇಕು. ನಂತರ ಬೇರೆಯವರ ಬಗ್ಗೆ ಆರೋಪ ಮಾಡಲಿ’ ಎಂದರು.
‘ಮುಡಾ ನಿವೇಶನ ಹಂಚಿಕೆಯಲ್ಲಿ ಯಾವುದೇ ಅಕ್ರಮ ಆಗಿಲ್ಲ. ಮುಖ್ಯಮಂತ್ರಿ ಅಧಿಕಾರ ದುರುಪಯೋಗ ಮಾಡಿದ್ದಾರೆ ಎನ್ನುವುದಕ್ಕೆ ಆಧಾರ ಇಲ್ಲ. ಮೋದಿ, ಅಮಿತ್ ಶಾ, ಕುಮಾರಸ್ವಾಮಿ ಎಲ್ಲರೂ ತನಿಖೆ ಎದುರಿಸಿದವರೇ. ಅವರಿಗೆ ಇಲ್ಲದ ನೈತಿಕತೆ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿಚಾರದಲ್ಲಿ ಏಕೆ’ ಎಂದೂ ಪ್ರಶ್ನಿಸಿದರು.