ಬೆಂಗಳೂರು: ಚಿಕ್ಕೋಡಿ ತಾಲ್ಲೂಕಿನ ಹಿರೇಕೋಡಿಯ ಕಾಮಕುಮಾರ ನಂದಿ ಮಹಾರಾಜರ ಕೊಲೆ ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಈ ಕುರಿತು ಇಂದು ಟ್ವೀಟ್ ಮಾಡಿರುವ ಡಿ.ಕೆ. ಶಿವಕುಮಾರ್, ಚಿಕ್ಕೋಡಿಯ ಹಿರೇಕೊಡಿ ಗ್ರಾಮದ ನಂದಿ ಪರ್ವತ ಆಶ್ರಮದ ಜೈನ ಮುನಿ ಶ್ರೀ 108 ಕಾಮಕುಮಾರ ನಂದಿ ಮಹಾರಾಜರ ನಿಧನದ ಸುದ್ದಿ ಆಘಾತವನ್ನುಂಟು ಮಾಡಿದೆ. ಹತ್ಯೆಯ ಹಿಂದೆ ಯಾರೇ ಇದ್ದರೂ ಸರ್ಕಾರ ಸೂಕ್ತ ತನಿಖೆ ನಡೆಸಿ ಕೊಲೆಗಾರರಿಗೆ ತಕ್ಕ ಶಿಕ್ಷೆಯಾಗುವಂತೆ ನೋಡಿಕೊಳ್ಳಲಿದೆ ಎಂದು ಹೇಳಿದ್ದಾರೆ.
ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ವರೂರ ನವಗ್ರಹ ತೀರ್ಥ ಕ್ಷೇತ್ರದ 108 ಆಚಾರ್ಯ ಗುಣಧರ ನಂದಿ ಮಹಾರಾಜ ಅವರು ಆರಂಭಿಸಿರುವ ಸಲ್ಲೇಖನ ವ್ರತವನ್ನು ಕೈಬಿಡುವಂತೆ ಹಾಗೂ ಸಾರ್ವಜನಿಕರು ಶಾಂತಿ ಕಾಪಾಡಬೇಕೆಂದು ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.
ಜೈನ ಮುನಿ ಕೊಲೆ ಪ್ರಕರಣದಲ್ಲಿ ಚಿಕ್ಕೋಡಿ ತಾಲ್ಲೂಕಿನ ಹಾಲಗಾದಲ್ಲಿ ರಾಷ್ಟ್ರೀಯ ಹೆದ್ದಾರಿ-4 ತಡೆದು ಜೈನ ಸಮುದಾಯದವರು ಪ್ರತಿಭಟನೆ ನಡೆಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.