ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮಯ್ಯಗೆ ಮತ್ತೆ ಮುಖ್ಯಮಂತ್ರಿ ಸ್ಥಾನ ಕೊಟ್ಟ ‘ವರುಣ’

‘ಅದೃಷ್ಟದ ಕ್ಷೇತ್ರ‘ದಿಂದ ಎರಡನೇ ಬಾರಿ ಸಿಎಂ ಹುದ್ದೆಗೆ ಏರಲಿರುವ ವರ್ಣರಂಜಿತ ನಾಯಕ
Published 18 ಮೇ 2023, 7:34 IST
Last Updated 18 ಮೇ 2023, 7:34 IST
ಅಕ್ಷರ ಗಾತ್ರ

ಮೈಸೂರು: ಜಿಲ್ಲೆಯ ವರುಣ ಕ್ಷೇತ್ರವು ಸಿದ್ದರಾಮಯ್ಯ ಅವರಿಗೆ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗುವ ಅವಕಾಶವನ್ನು ತಂದುಕೊಟ್ಟಿದೆ.

2008ರಲ್ಲಿ ಚಾಮುಂಡೇಶ್ವರಿ ಕ್ಷೇತ್ರ ಪುನರ್‌ವಿಂಗಡಣೆಯಾಗಿ ವರುಣ ಅಸ್ತಿತ್ವಕ್ಕೆ ಬಂದ ನಂತರ ನಡೆದ ಮೊದಲ ಚುನಾವಣೆಯಲ್ಲಿ ಗೆದ್ದಾಗ ಸಿದ್ದರಾಮಯ್ಯ ಅವರಿಗೆ ವಿಧಾನಸಭೆ ವಿರೋಧ ಪಕ್ಷದ ನಾಯಕನ ಸ್ಥಾನ ದೊರಕಿತ್ತು. 2013ರ ಚುನಾವಣೆಯಲ್ಲಿ ವರುಣದಿಂದಲೇ ಗೆದ್ದ ಅವರು ಮುಖ್ಯಮಂತ್ರಿಯಾಗಿ ಕಾಂಗ್ರೆಸ್‌ ಸರ್ಕಾರ ರಚಿಸಿ, ಐದು ವರ್ಷಗಳ ಕಾಲ ಅಧಿಕಾರ ನಡೆಸಿದ್ದರು.

ಇದೀಗ, ಒಂದು ದಶಕದ ಬಳಿಕ, ವರುಣ ಕ್ಷೇತ್ರದ ಮೂಲಕವೇ ಅವರು ಎರಡನೇ ಬಾರಿ ಮುಖ್ಯಮಂತ್ರಿಯಾಗುವ ಅವಕಾಶವನ್ನೂ ಪಡೆದಿದ್ದಾರೆ. ಈ ಕ್ಷೇತ್ರದಲ್ಲೇ ಇರುವ, ಅವರ ಹುಟ್ಟೂರಾದ ಸಿದ್ದರಾಮನಹುಂಡಿಯಲ್ಲಿ ಸಂಭ್ರಮ ಮೇರೆ ಮೀರಿದೆ. ಅಲ್ಲಿನ ಜನ ಹೇಳುವಂತೆ ‘ಸಿದ್ದರಾಮಯ್ಯನವರ ಅದೃಷ್ಟದ ಕ್ಷೇತ್ರ ವರುಣ’.

1983ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದ ನಾಲ್ಕು ದಶಕದ ಬಳಿಕ ಅವರು ಎರಡನೇ ಬಾರಿಗೆ ರಾಜ್ಯದ ಚುಕ್ಕಾಣಿ ಹಿಡಿಯಲಿದ್ದಾರೆ. ಈ ಕ್ಷೇತ್ರದಲ್ಲಿ ನಡೆದ ಏಳು ಚುನಾವಣೆಯಲ್ಲಿ ಸ್ಪರ್ಧಿಸಿ ನಾಲ್ಕರಲ್ಲಿ ಗೆದ್ದಿದ್ದರು. ‘ರಾಜಕೀಯ ಪುನರ್ಜನ್ಮ’ ಎಂದು ಅವರೇ ಕರೆದುಕೊಳ್ಳುವ 2006ರ ಉಪಚುನಾವಣೆಯಲ್ಲೂ ಗೆದ್ದಿದ್ದರು. ವರುಣದಲ್ಲಿ ಮೂರು ಚುನಾವಣೆಗಳಲ್ಲಿ ಗೆದ್ದಿದ್ದಾರೆ.

ತಾಲ್ಲೂಕು ಬೋರ್ಡ್‌ನಿಂದ ಶುರು: 1978ರಲ್ಲಿ ಮೈಸೂರು ತಾಲ್ಲೂಕು ಅಭಿವೃದ್ಧಿ ಮಂಡಳಿಯ ಸದಸ್ಯರಾಗಿ ರಾಜಕೀಯ ಜೀವನವನ್ನು ಆರಂಭಿಸಿದ ಸಿದ್ದರಾಮಯ್ಯ, ರೈತಸಂಘ, ಸಮಾಜವಾದಿ ಹೋರಾಟದೊಂದಿಗೆ ಗುರುತಿಸಿಕೊಂಡಿದ್ದರು. 1983ರಲ್ಲಿ ಮೊದಲ ಬಾರಿಗೆ ವಿಧಾನಸಭೆಗೆ ಆಯ್ಕೆಯಾದಾಗ ಅವರಿಗೆ ಕನ್ನಡ ಕಾವಲು ಸಮಿತಿಯ ಅಧ್ಯಕ್ಷ ಸ್ಥಾನ ದೊರಕಿತ್ತು. ನಂತರ ರೇಷ್ಮೆ ಖಾತೆ ಸಚಿವರಾಗಿದ್ದರು. 1985ರ ಮಧ್ಯಂತರ ಚುನಾವಣೆಯಲ್ಲಿ ಗೆದ್ದ ಬಳಿಕ ಪಶುಸಂಗೋಪನಾ ಸಚಿವರಾಗಿದ್ದರು. ಎಸ್‌.ಆರ್‌.ಬೊಮ್ಮಾಯಿ ಸರ್ಕಾರದಲ್ಲಿ ಸಾರಿಗೆ ಸಚಿವರೂ ಆಗಿದ್ದರು.

1994ರಲ್ಲಿ ಜನತಾದಳ ಅಭ್ಯರ್ಥಿಯಾಗಿ ಗೆದ್ದ ಅವರು, ಎಚ್‌.ಡಿ.ದೇವೇಗೌಡರ ಸಂಪುಟದಲ್ಲಿ ಹಣಕಾಸು ಸಚಿವರಾದರು. 1996ರಲ್ಲಿ ಎಚ್‌.ಡಿ.ದೇವೇಗೌಡರು ಪ್ರಧಾನಿಯಾಗಿ ಆಯ್ಕೆಯಾದಾಗ ಹಾಗೂ 2004ರಲ್ಲಿ ಎನ್‌.ಧರ್ಮಸಿಂಗ್‌ ನೇತೃತ್ವದ ಕಾಂಗ್ರೆಸ್‌–ಜೆಡಿಎಸ್‌ ಸಮ್ಮಿಶ್ರ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದರು.

ಲೋಕಸಭೆಯ ಕನಸು: ಲೋಕಸಭೆ ಸದಸ್ಯರಾಗಬೇಕೆಂಬ ಆಕಾಂಕ್ಷೆಯಿಂದ ಸಿದ್ದರಾಮಯ್ಯ 1980ರಲ್ಲಿ ಮೈಸೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. ಒಂದು ದಶಕದ ಬಳಿಕ, 1991ರಲ್ಲಿ ದೂರದ ಕೊಪ್ಪಳ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋತಿದ್ದರು. ನಂತರ ಅವರು ಲೋಕಸಭೆಗೆ ತೆರಳುವ ಆಸೆಯನ್ನು ಬಿಟ್ಟರು.

ಅಂದು ಅರಸು, ಇಂದು ಸಿದ್ದರಾಮಯ್ಯ

ಮೈಸೂರು ಜಿಲ್ಲೆಯಿಂದ ಎರಡು ಬಾರಿ ಮುಖ್ಯಮಂತ್ರಿ ಹುದ್ದೆ ಪಡೆದ ಎರಡನೇ ನಾಯಕ ಸಿದ್ದರಾಮಯ್ಯ ಎಂಬುದು ವಿಶೇಷ.

1972ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾದ ಹುಣಸೂರಿನ ಡಿ.ದೇವರಾಜ ಅರಸು ಅವಧಿ ಪೂರ್ಣಗೊಳಿಸಿದ್ದರು. 1978ರಲ್ಲಿ ಎರಡನೇ ಬಾರಿಗೆ ಆಯ್ಕೆಯಾದಾಗ ಅವಧಿ ಪೂರ್ಣಗೊಳಿಸಲು ಆಗಿರಲಿಲ್ಲ.

2013ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ದಶಕದ ಬಳಿಕ ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದಾರೆ. ಅವರೂ ಅವಧಿ ಪೂರ್ಣಗೊಳಿಸುತ್ತಾರೆಯೇ ಎಂಬ ಪ್ರಶ್ನೆಯ ನಡುವೇ ಅಧಿಕಾರ ಸ್ವೀಕರಿಸಲು ಸಿದ್ಧತೆ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT