ಬೆಂಗಳೂರು: ಜಾತಿ ಪ್ರಮಾಣ ಪತ್ರಗಳ ಕುರಿತು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ (ಸಿಆರ್‌ಇ) ನೀಡಿದ ವಿಚಾರಣಾ ವರದಿಗಳನ್ನು ಆಯಾ ಜಿಲ್ಲಾಡಳಿತ ತಕ್ಷಣ ಅಂಗೀಕರಿಸಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.
ವಿಧಾನಸೌಧದಲ್ಲಿ ಶುಕ್ರವಾರ ಗೊಂಡ ಸಮುದಾಯ ಜಾತಿ ಪ್ರಮಾಣಪತ್ರ ಪಡೆಯುವಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಅವರು ಚರ್ಚಿಸಿದರು.
ಕಲಬುರಗಿ, ಬೀದರ್, ಯಾದಗಿರಿ ಜಿಲ್ಲೆಗಳಲ್ಲಿ ಗೊಂಡ ಸಮುದಾಯ, ಕೊಡಗು ಜಿಲ್ಲೆಯಲ್ಲಿ ಕುರುಬರು ಪರಿಶಿಷ್ಟ ಪಂಗಡ ಸೇರಿದ್ದಾರೆ. ಜಾತಿ ಪ್ರಮಾಣಪತ್ರ ನೀಡುವ ಕುರಿತು ಗೊಂದಲಗಳಿದ್ದರೆ ಬಗೆಹರಿಸಿಕೊಳ್ಳಬೇಕು. ಶಾಲಾ ದಾಖಲಾತಿ, ಪೋಷಕರ ಇತಿಹಾಸದ ದಾಖಲೆಗಳನ್ನು ಪರಿಶೀಲಿಸಿ ಪ್ರಮಾಣ ಪತ್ರ ನೀಡಬೇಕು. ಅನಗತ್ಯ ವಿಳಂಬ ಮಾಡಬಾರದು. ಜಾತಿ ಪ್ರಮಾಣ ಪತ್ರದ ಆಧಾರದ ಮೇಲೆ ವಿದ್ಯಾರ್ಥಿ ವೇತನ ನೀಡಬೇಕು ಎಂದು ಸೂಚಿಸಿದರು.
ಜಾತಿ ಪ್ರಮಾಣಪತ್ರಗಳ ಕುರಿತು ದೂರುಗಳಿದ್ದರೆ ವಿಚಾರಣೆ ನಡೆಸಬೇಕು. ಸ್ವಯಂ ಪ್ರೇರಿತ ದೂರುಗಳನ್ನು ದಾಖಲಿಸಿಕೊಳ್ಳಬಾರದು. ಸಿಆರ್‌ಇ ಘಟಕ ನೀಡಿದ ವರದಿಯನ್ನು ತಕ್ಷಣ ಅಂಗೀಕರಿಸಬೇಕು ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.