ಬೆಂಗಳೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಬದಲಾವಣೆ ಪ್ರಶ್ನೆಯೇ ಇಲ್ಲ’ ಎಂದು ಕಾಂಗ್ರೆಸ್ ಹೈಕಮಾಂಡ್ ನಾಯಕರು ಪುನರುಚ್ಚರಿಸುತ್ತಲೇ ಇದ್ದರೂ, ತಾವೂ ಮುಖ್ಯಮಂತ್ರಿ ಆಕಾಂಕ್ಷೆ ಎಂದು ಹೇಳುವವರ ಪಟ್ಟಿ ಕಾಂಗ್ರೆಸ್‌ನಲ್ಲಿ ಬೆಳೆಯುತ್ತಲೇ ಇದೆ.
ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಗೃಹ ಸಚಿವ ಜಿ. ಪರಮೇಶ್ವರ, ‘ಮುಖ್ಯಮಂತ್ರಿ ಹುದ್ದೆ ಸದ್ಯಕ್ಕೆ ಖಾಲಿ ಇಲ್ಲ. ಹೀಗಾಗಿ, ಮುಂದಿನ ಮುಖ್ಯಮಂತ್ರಿ ಕುರಿತು ಚರ್ಚೆ ಮಾಡುವ ಅಗತ್ಯವೂ ಇಲ್ಲ’ ಎಂದರು.
‘ಮುಡಾ ನಿವೇಶನ ಹಂಚಿಕೆ ವಿಚಾರ ಸದ್ಯ ನ್ಯಾಯಾಲಯದಲ್ಲಿದ್ದು, ಅಲ್ಲಿ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ. ಎಲ್ಲದಕ್ಕೂ ಮೊದಲೇ ಮುಂದಿನ ಮುಖ್ಯಮಂತ್ರಿ ಕುರಿತು ಚರ್ಚೆ ಮಾಡುವ ಅಗತ್ಯ ಸದ್ಯಕ್ಕಂತೂ ನನಗೆ ಕಾಣಿಸುತ್ತಿಲ್ಲ’ ಎಂದರು.
ಯಾರೂ ಅಪೇಕ್ಷೆ ಪಡುತ್ತಿಲ್ಲ: ‘ಮುಖ್ಯಮಂತ್ರಿ ಸ್ಥಾನಕ್ಕೆ ಕಾಂಗ್ರೆಸ್‌ನಲ್ಲಿ ಯಾರೂ ಅಪೇಕ್ಷೆ ಪಡುತ್ತಿಲ್ಲ. ಅಷ್ಟಕ್ಕೂ, ಸಿದ್ದರಾಮಯ್ಯ ಬೆಂಬಲಕ್ಕೆ ಹೈಕಮಾಂಡ್ ನಿಂತಿದೆ. ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಕೂಡಾ ಅವರ ಪರ ನಿಂತಿದ್ದಾರೆ. ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಯಾವುದೇ ತೀರ್ಮಾನ ಬಂದರೂ ಸಿದ್ದರಾಮಯ್ಯ ಅವರೇ ಮುಂದುವರಿಯುತ್ತಾರೆ’ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು ಹೇಳಿದರು.
ಕೆಲವು ಸಚಿವರ ದೆಹಲಿ ಪ್ರಯಾಣದ ಕುರಿತು ಪ್ರತಿಕ್ರಿಯಿಸಿದ ಬೋಸರಾಜು, ‘ಪಕ್ಷದ ಹೈಕಮಾಂಡ್ ನಾಯಕರ ಜೊತೆ ಸಮಯ ನಿಗದಿ ಮಾಡಿಕೊಂಡು ಭೇಟಿಗೆ ಸಚಿವರು ಹೋಗುತ್ತಿದ್ದಾರೆ. ಸತೀಶ ಜಾರಕಿಹೊಳಿ ಹೋಗಿದ್ದರು. ಮುಂದಿನ ವಾರ ನಾನೂ ಹೋಗುತ್ತಿದ್ದೇನೆ. ಇಲಾಖೆಗೆ ಸಂಬಂಧಪಟ್ಟಂತೆ ಮಾತನಾಡಲು ಹೋಗುತ್ತೇವೆ’ ಎಂದರು.
ಮುಖ್ಯಮಂತ್ರಿ ಬದಲಾವಣೆಯ ಯಾವುದೇ ಪ್ರಸಂಗ ಇಲ್ಲ. ಸಿದ್ದರಾಮಯ್ಯ ನಾಯಕತ್ವ ಅಲ್ಲಾಡಿಸಲು ಯಾರಿಗೂ ಸಾಧ್ಯವಿಲ್ಲ.–ಎನ್.ಎಸ್. ಬೋಸರಾಜು, ಸಣ್ಣ ನೀರಾವರಿ ಸಚಿವ
‘ಸಿಎಂ ಕುರ್ಚಿ ಆಸೆ: ಕಡಿವಾಣ ಹಾಕಿ’
‘ಪಕ್ಷದ ನಿಯಮ ಉಲ್ಲಂಘಿಸಿ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಆಕಾಂಕ್ಷೆ ವ್ಯಕ್ತಪಡಿಸುತ್ತಿರುವ ಸಚಿವರ ಬಹಿರಂಗ ಹೇಳಿಕೆಗೆ ಹಾಗೂ ಚರ್ಚೆಗಳಿಗೆ ಕಡಿವಾಣ ಹಾಕಬೇಕು’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯರಾದ ದಿನೇಶ್ ಗೂಳಿಗೌಡ ಮತ್ತು ಮಂಜುನಾಥ ಭಂಡಾರಿ ಪತ್ರ ಬರೆದಿದ್ದಾರೆ.
‘ಮುಖ್ಯಮಂತ್ರಿ ಮತ್ತಿತರ ಮಹತ್ವದ ಸ್ಥಾನಗಳು ಹೈಕಮಾಂಡ್ ಹಂತದಲ್ಲಿ ನಿರ್ಧಾರವಾಗುತ್ತವೆ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಅದು ಗೊತ್ತಿದ್ದೂ ಕೆಲವು ಸಚಿವರು ಮತ್ತು ಪಕ್ಷದ ಹಿರಿಯ ನಾಯಕರು ಚರ್ಚೆ ಮಾಡುತ್ತಿದ್ದಾರೆ. ಸಚಿವರ ಲಗಾಮಿಲ್ಲದ ಹೇಳಿಕೆಗಳಿಂದ ಪಕ್ಷದ ವರ್ಚಸಿಗೆ ಧಕ್ಕೆಯಾಗುವ ಹಾಗೂ ಸರ್ಕಾರದ ಅಭದ್ರತೆ ಕುರಿತ ಚರ್ಚೆಗಳಿಗೆ ಎಡೆ ಮಾಡಿ ಕೊಟ್ಟಂತೆ ಆಗಲಿದೆ. ಹೀಗಾಗಿ ಇಂಥ ಚರ್ಚೆಗಳಿಗೆ ತಕ್ಷಣ ತಡೆ ಹಾಕುವ ಅವಶ್ಯ ಇದೆ’ ಎಂದು ಮನವಿ ಮಾಡಿದ್ದಾರೆ.
ಸಿದ್ದರಾಮಯ್ಯ ಅವರ ಸ್ಥಾನಕ್ಕೆ ಚ್ಯುತಿ ಬರುವುದಿಲ್ಲ. ಹೈಕಮಾಂಡ್ ಅವರ ಬೆನ್ನಿಗೆ ಗಟ್ಟಿಯಾಗಿ ನಿಂತಿದೆ. ಅವರೇ 5 ವರ್ಷ ಮುಖ್ಯಮಂತ್ರಿ ಆಗಿರುತ್ತಾರೆ. ಬದಲಾವಣೆ ಚರ್ಚೆ ವ್ಯರ್ಥ ಪ್ರಯತ್ನ.–ಡಿ.ಕೆ. ಸುರೇಶ್, ಮಾಜಿ ಸಂಸದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.