ಬೆಂಗಳೂರು: ಕಾಂಗ್ರೆಸ್ ಸಚಿವರು ಹಾಗೂ ಅವರ ಹಿಂಬಾಲಕರು ಗುತ್ತಿಗೆದಾರರಿಂದ ಕಮಿಷನ್ ಕೇಳಲು ಶುರು ಮಾಡಿದ್ದಾರೆ. ಅಲ್ಲದೇ, ₹ 250 ಕೋಟಿ ಸಂಗ್ರಹಿಸಲು ಬಿಡಿಎಗೆ ಗುರಿ ನಿಗದಿ ಮಾಡಲಾಗಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.
ವಿದೇಶ ಪ್ರವಾಸ ಮುಗಿಸಿ ಬೆಂಗಳೂರಿಗೆ ಮರಳಿದ ಅವರು ಸುದ್ದಿಗಾರರ ಜತೆ ಮಾತನಾಡಿ ಸರ್ಕಾರದ ವಿರುದ್ಧ ಹರಿಹಾಯ್ದರು.
‘ಗೃಹ ಇಲಾಖೆಯಲ್ಲಿ, ಪೊಲೀಸ್ ವರ್ಗಾವಣೆಯಲ್ಲಿ ‘ವೈಎಸ್‌ಟಿ’ ದಂಧೆಕೋರರು ಸಕ್ರಿಯರಾಗಿದ್ದಾರೆ. ಗರುಡ ಮಾಲ್ ಹತ್ತಿರದ ಪೊಲೀಸ್ ಮೆಸ್‌ನಲ್ಲಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿ, ಗೃಹ ಸಚಿವರು, ಇಲಾಖೆಯ ಉನ್ನತ ಅಧಿಕಾರಿಗಳ ಜತೆಗೆ ಈ ‘ವೈಎಸ್‌ಟಿ’ ಸಂಗ್ರಹಿಸುವ ಮಧ್ಯವರ್ತಿಗಳನ್ನು ಕೂರಿಸಿಕೊಂಡು ಚರ್ಚೆ ಮಾಡಿದ್ದೇಕೆ’ ಎಂದು ಪ್ರಶ್ನಿಸಿದರು.
‘ರಾಜ್ಯದಲ್ಲಿ ಶೇಕಡವಾರು ಹಣ ಸಂಗ್ರಹ ಅವ್ಯಾಹತವಾಗಿ ನಡೆಯುತ್ತಿದೆ. ಸಚಿವರೊಬ್ಬರು ಗುತ್ತಿಗೆದಾರರಿಂದ ನೇರವಾಗಿ ಕಮೀಷನ್‌ಗೆ ಬೇಡಿಕೆ ಇಟ್ಟಿದ್ದಾರೆ. ಹಣ ತಂದಿದ್ದರೆ ಒಳಕ್ಕೆ ಬನ್ನಿ. ಇಲ್ಲವಾದರೆ ಹೊರಗೆ ಇರಿ ಎಂದು ಆ ಸಚಿವರ ಹಿಂಬಾಲಕರು ಸಚಿವರನ್ನು ಭೇಟಿಯಾಗಲು ಹೋಗಿದ್ದ ಗುತ್ತಿಗೆದಾರರಿಗೆ ತಾಕೀತು ಮಾಡಿದ್ದಾರೆ. ಇಂಥವರು ಭ್ರಷ್ಟಾಚಾರ ಕಡಿಮೆ ಮಾಡುತ್ತೇವೆ ಎಂದು ರಾಹುಲ್ ಗಾಂಧಿ ಅವರಿಗೆ ಹೇಳುತ್ತಾರೆ’ ಎಂದು ಟೀಕಿಸಿದರು.
‘ಸಂಗ್ರಹಿಸಿದ ಹಣ ದೆಹಲಿಗೆ ಕಳುಹಿಸಬೇಕು ಎನ್ನುತ್ತಾರೆ. ಪಟ್ಟಿ ಕೊಡುತ್ತಾರೆ. ಕರ್ನಾಟಕವನ್ನು ಈಸ್ಟ್ ಇಂಡಿಯಾ ಕಂಪನಿಯಂತೆ ಲೂಟಿ ಮಾಡುತ್ತಿದ್ದಾರೆ. ಜನರಿಗೆ ಗ್ಯಾರಂಟಿ ತುಪ್ಪ ಸವರಿ ವರ್ಗಾವಣೆ ದಂಧೆಯಲ್ಲಿ ಕೊಳ್ಳೆ ಹೊಡೆಯುತ್ತಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ವಸೂಲಿ ಮಾಡುವುದೇ ಕಾಂಗ್ರೆಸ್ ಕೆಲಸ’ ಎಂದು ಆರೋಪಿಸಿದರು.
34 ಸಚಿವರನ್ನು ದೆಹಲಿಗೆ ಕರೆದುಕೊಂಡು ಹೋಗಿದ್ದರು. ಅವರ ಹೈಕಮಾಂಡ್‌ಗೆ ಕಾರ್ಯಕ್ಷಮತೆಯ ವರದಿ ನೀಡಲು ಹೋಗಿಲ್ಲ. ಭ್ರಷ್ಟಾಚಾರದ ಲೆಕ್ಕಕೊಡಲು ಹೋಗಿದ್ದಾರೆ. ಲೂಟಿ ಮಾಡಲು ಖಜಾನೆ ಖಾಲಿ ಎಂದು ತೋರಿಸುವ ಹುನ್ನಾರ ನಡೆಸಿದ್ದಾರೆ. ಗ್ಯಾರಂಟಿ ಗೊಂದಲ ಮಾಡಿಕೊಂಡು, ವಿಧಾನಸಭೆ ಕ್ಷೇತ್ರಗಳ ಅಭಿವೃದ್ಧಿಗೆ ಹಣ ಇಲ್ಲ ಎಂದು ಸಬೂಬು ಹೇಳುತ್ತಿದ್ದಾರೆ. ವಾಸ್ತವದಲ್ಲಿ ಖಜಾನೆ ಸಮೃದ್ಧವಾಗಿದೆ ಎಂದರು.
‘ಗ್ಯಾರಂಟಿಗಳಿಗೆ ಗರಿಷ್ಠ ₹ 25 ಸಾವಿರ ಕೋಟಿ ಸಾಕು. ಕಳೆದ ವರ್ಷ ₹ 40 ಸಾವಿರ ಕೋಟಿ ಹೆಚ್ಚುವರಿ ತೆರಿಗೆ ಆದಾಯ ಬಂದಿದೆ. ತೆರಿಗೆಯ ಎಲ್ಲಾ ಬಾಬ್ತುಗಳಲ್ಲಿ ನಿರೀಕ್ಷೆಗೂ ಮೀರಿ ಸಂಗ್ರಹವಾಗಿದೆ. ಕೇಂದ್ರ ಸರಕಾರದಿಂದಲೂ ಬಾಕಿ ಇಲ್ಲ. ಹಾಗಾದರೆ 14 ಬಜೆಟ್ ಮಂಡಿಸಿದ ಮಹಾನುಭಾವ ಕೊರತೆ ಬಜೆಟ್ ಮಂಡಿಸಿದ್ದು ಯಾಕೆ? ಧೈರ್ಯವಿದ್ದರೆ ಶ್ವೇತಪತ್ರ ಹೊರಡಿಸಲಿ’ ಎಂದು ಒತ್ತಾಯಿಸಿದರು.
‘ಕುಟುಂಬ ಸಮೇತ ಯೂರೋಪ್ ಪ್ರವಾಸಕ್ಕೆ ಹೋಗಿದ್ದೆವು. ಆದರೆ, ಸರ್ಕಾರ ಕೆಡವಲು ಷಡ್ಯಂತ್ರ ಮಾಡಲು ಹೋಗಿದ್ದಾರೆ ಎಂದು ವದಂತಿ ಹಬ್ಬಿಸಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜ್ಯೋತಿಷದ ಮೂಲಕ ಚುನಾವಣೆಗೆ ಕೃತಕವಾದ ಶಕ್ತಿ ತುಂಬಿಕೊಂಡಿದ್ದಾರೆ. ಆ ಶಕ್ತಿ ಬಹಳ ದಿನ ಇರುವುದಿಲ್ಲ ಎನ್ನುವುದು ಅವರ ತಲೆ ಒಳಗೆ ಇರಬಹುದು. ಇದು ನಮ್ಮ ರಾಜ್ಯದ ಬೇಹುಗಾರಿಕೆ ಇಲಾಖೆ ಕೆಲಸ ಮಾಡುತ್ತಿರುವುದಕ್ಕೆ ಸಾಕ್ಷಿ. 19 ಕ್ಷೇತ್ರ ಗೆದ್ದಿರುವ ಕುಮಾರಸ್ವಾಮಿ ಬಗ್ಗೆ 136 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿರುವ ಕಾಂಗ್ರೆಸ್‌ಗೆ ಭಯವಿದೆ. ಬಹುಮತವಿದ್ದರೂ ಸುಸ್ಥಿರ ಸರಕಾರ ನೀಡಲು ಸಾಧ್ಯವಾಗುತ್ತಿಲ್ಲ. ಅಭದ್ರತೆಯ ಭಾವದಿಂದ ಬಳಲುತ್ತಿದ್ದಾರೆ’ ಎಂದು ದೂರಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.