ಬೆಂಗಳೂರು: ‘ಜೈಲುಗಳಲ್ಲಿ ಅಸಹಜವಾಗಿ ಸಾವನ್ನಪ್ಪಿದ ಕೈದಿಗಳ ಸಂಬಂಧಿ ಅಥವಾ ವಾರಸುದಾರರಿಗೆ ಪರಿಹಾರ ಪಾವತಿಸಲು ಸೂಕ್ತ ನೀತಿಯೊಂದನ್ನು ರೂಪಿಸಲಾಗಿದೆ’ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.
ಈ ಸಂಬಂಧ ಹೈಕೋರ್ಟ್ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಸರ್ಕಾರದ ಉತ್ತರಕ್ಕೆ ತೃಪ್ತಿ ವ್ಯಕ್ತಪಡಿಸಿದ ನ್ಯಾಯಪೀಠ, ‘ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಉದ್ದೇಶವು ಸರ್ಕಾರದ ಆದೇಶದೊಂದಿಗೆ ಈಡೇರಿದ್ದು ಈ ಪಿಐಎಲ್ ಅನ್ನು ಇತ್ಯರ್ಥಪಡಿಸಲಾಗಿದೆ’ ಎಂದು ತಿಳಿಸಿತು.
ಆದೇಶದಲ್ಲಿ ಏನಿದೆ?: ‘ಅಸಹಜವಾಗಿ ಸಾವನ್ನಪ್ಪಿದ ಕೈದಿಯ ಕುಟುಂಬದವರಿಗೆ ಆರ್ಥಿಕ ಸಹಾಯ ಮಾಡುವುದು ಮತ್ತು ಕೈದಿಗಳ ಮಧ್ಯೆ ಹೊಡೆದಾಟ ಸಂಭವಿಸಿ ಅದರಲ್ಲಿ ಕೈದಿ ಸಾವನ್ನಪ್ಪಿದರೆ ಆತನ ಕುಟುಂಬದವರು ಅಥವಾ ಅವಲಂಬಿತರಿಗೆ ₹7.50 ಲಕ್ಷ ಪಾವತಿಸಲಾಗುತ್ತದೆ. ಆತ್ಮಹತ್ಯೆ ಸೇರಿದಂತೆ ಅಸಹಜ ಸಾವು ಸಂಭವಿಸಿದರೆ ಅಂತಹ ಕೈದಿಯ ಕುಟುಂಬಸ್ಥರಿಗೆ ₹5 ಲಕ್ಷ ಪರಿಹಾರ ನೀಡಲಾಗುವುದು‘ ಎಂದು ಆದೇಶದಲ್ಲಿ ವಿವರಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.