ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆರೆಸ್ಸೆಸ್‌ ಪ್ರಣೀತ ಬಿಜೆಪಿಯಿಂದ ಸಂವಿಧಾನ ನಾಶ: ರಾಜೇಶ್ ಲಿಲೋತಿಯಾ

Published : 10 ಸೆಪ್ಟೆಂಬರ್ 2024, 14:53 IST
Last Updated : 10 ಸೆಪ್ಟೆಂಬರ್ 2024, 14:53 IST
ಫಾಲೋ ಮಾಡಿ
Comments

ಬೆಂಗಳೂರು: ‘ಸಂವಿಧಾನದ ಕಾರಣಕ್ಕೆ ಶೋಷಿತ ವರ್ಗದ ಜನರು ಅಧಿಕಾರ ಸೇರಿದಂತೆ ಕೆಲವು ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಆದರೆ, ಆರೆಸ್ಸೆಸ್‌ ಪ್ರಣೀತ ಬಿಜೆಪಿ ಸಂವಿಧಾನವನ್ನು ನಾಶ ಮಾಡಲು ಹೊರಟಿದೆ’ ಎಂದು ಎಐಸಿಸಿ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ರಾಜೇಶ್ ಲಿಲೋತಿಯಾ ಆರೋಪಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಅನೇಕರು ಸಂವಿಧಾನದ ರಕ್ಷಣೆಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಎರಡು ವರ್ಷಗಳ ಹಿಂದೆಯೇ ನಾವು ‘ಸಂವಿಧಾನ ರಕ್ಷಕ್’ ಎಂಬ ಕಾರ್ಯಕ್ರಮ ಜಾರಿಗೆ ತಂದಿದ್ದೇವೆ’ ಎಂದರು.

‘ದೇಶದಾದ್ಯಂತ ಈವರೆಗೆ ಸುಮಾರು 3 ಲಕ್ಷ ಜನರು ಸಂವಿಧಾನ ರಕ್ಷಕರಾಗಿ ನೋಂದಾಯಿಸಿಕೊಂಡಿದ್ದಾರೆ. ಸಂವಿಧಾನ ಅಳವಡಿಸಿಕೊಂಡು ಇದೇ ನ. 26ಕ್ಕೆ 75 ವರ್ಷ ತುಂಬುತ್ತಿದ್ದು, ಆ ಸಂಭ್ರಮವನ್ನು ದೇಶ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಆಚರಿಸಲಾಗುವುದು’ ಎಂದರು.

ರಸಪ್ರಶ್ನೆ ಸ್ಪರ್ಧೆ: ‘ಕರ್ನಾಟಕದ ಪ್ರತಿ ಗ್ರಾಮದಿಂದ ತಲಾ ಒಬ್ಬ‌ ಪುರುಷ ಮತ್ತು ಮಹಿಳಾ ‘ಸಂವಿಧಾನ ರಕ್ಷಕ್‌’ ಸ್ವಯಂಸೇವಕರನ್ನು ಗುರುತಿಸಲಾಗುವುದು. ಶಾಲೆ, ಕಾಲೇಜುಗಳಲ್ಲಿ ಸಂವಿಧಾನ ಮತ್ತು ಬಾಬಾ ಸಾಹೇಬ್‌ ಅಂಬೇಡ್ಕರ್‌ ವಿಷಯದಲ್ಲಿ ರಸಪ್ರಶ್ನೆ ಸ್ಪರ್ಧೆ ಆಯೋಜಿಸಿ ಬಹುಮಾನ ನೀಡಲಾಗುವುದು. ನ. 26ಕ್ಕೂ ಮೊದಲೇ ವಿಜೇತರ ಪಟ್ಟಿ ತಯಾರಿಸಲಾಗುವುದು. ವಿಜೇತರನ್ನು ಮತ್ತು ಪೋಷಕರನ್ನು ದೆಹಲಿಯಲ್ಲಿ ಸನ್ಮಾನಿಸಲಾಗುವುದು’ ಎಂದರು.

‘ರಾಜ್ಯದಲ್ಲಿ ಧಾರವಾಡ, ಕಲಬುರಗಿ, ಮೈಸೂರು, ಬೆಂಗಳೂರು ವಿಭಾಗಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಶಾಲೆಗಳಲ್ಲಿ ಸಂವಿಧಾನದ ಪೀಠಿಕೆ ಓದುವ ಕಾರ್ಯಕ್ರಮ ರೂಪಿಸಲಾಗಿದೆ’ ಎಂದರು.

ಕೆಪಿಸಿಸಿ ಎಸ್‌ಸಿ ವಿಭಾಗದ ಅಧ್ಯಕ್ಷರಾದ ಆರ್. ಧರ್ಮಸೇನ, ಎಸ್‌ಸಿ ವಿಭಾಗದ ಸಂಯೋಜಕ ಎಸ್.ಎಸ್‌. ಚಿತ್ತಪ್ಪ, ಉಪಾಧ್ಯಕ್ಷ ಕಲೀರಾಂ ರಾಥೋಡ್‌‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT