ಬೆಂಗಳೂರು: ‘ರಸ್ತೆ ಗುಂಡಿ ದುರಸ್ತಿ ಕುರಿತು ಸಾಮಾಜಿಕ ಜಾಲತಾಣದ ಮೂಲಕ ಪೋಸ್ಟ್ ಮಾಡಿದ್ದಕ್ಕೆ ಯಾರೋ, ಏನೋ ಬಣ್ಣ ಕೊಡುತ್ತಾರೆ. ಅಂತಹ ವಿಷಯಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಜನರ ಕೆಲಸ ಆಗಬೇಕು ಅಷ್ಟೆ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಪ್ರತಿಕ್ರಿಯಿಸಿದರು.
ಸುದ್ದಿಗಾರರ ಜೊತೆ ಶುಕ್ರವಾರ ಮಾತನಾಡಿದ ಅವರು, ‘ಬೆಂಗಳೂರಿನ ವೀರಣ್ಣನಪಾಳ್ಯ–ಹೆಬ್ಬಾಳದ ವರ್ತುಲ ಸರ್ವೀಸ್ ರಸ್ತೆಯ ಡಾಂಬರೀಕರಣಕ್ಕೆ ಮನವಿ ಮಾಡಿದ್ದೆ. ಅದು ಸಾರ್ವಜನಿಕರ ಅಭಿಪ್ರಾಯದ ಪೋಸ್ಟ್. ಈ ಬಗ್ಗೆ ಹಲವು ಟೀಕೆಗಳು ಬಂದಿವೆ. ಅದಕ್ಕೆಲ್ಲ ಉತ್ತರಿಸುವ ಅಗತ್ಯವಿಲ್ಲ’ ಎಂದರು.
‘ಸಾರ್ವಜನಿಕರ ಅಭಿಪ್ರಾಯವನ್ನು ಅಧಿಕಾರಿಗಳಿಗೆ ತಲುಪಿಸಲು ಹಲವು ಮಾರ್ಗಗಳಿವೆ. ದೂರವಾಣಿ ಕರೆ, ಮೆಸೇಜ್ ಮೂಲಕವೂ ತಿಳಿಸಬಹುದು. ಹೇಳುವ ರೀತಿ ಹೇಗೆಯೇ ಇರಲಿ. ಸಮಸ್ಯೆ ಅಧಿಕಾರಿಗಳ ಗಮನಕ್ಕೆ ಹೋಗಬೇಕು. ಅಧಿಕಾರಿಗಳು ಎಚ್ಚೆತ್ತು ಕೆಲಸ ಮಾಡಬೇಕು. ಪರಿಹಾರ ದೊರಕುವುದು ಮುಖ್ಯ’ ಎಂದು ಹೇಳಿದರು.