ಬೆಂಗಳೂರು: ರಾಜ್ಯದಲ್ಲಿನ ಅನಧಿಕೃತ ಶಾಲೆಗಳನ್ನು ಆ.16ರ ಒಳಗೆ ಕಡ್ಡಾಯವಾಗಿ ಮುಚ್ಚಿಸಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಯುಕ್ತೆ ಬಿ.ಬಿ.ಕಾವೇರಿ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರಿಗೆ ಸೂಚಿಸಿದ್ದಾರೆ.
ನೋಂದಣಿ ಇಲ್ಲದೆ ಶಾಲೆಗಳನ್ನು ನಡೆಸುವುದು, ಅನುಮತಿ ಪಡೆದ ಹಂತಕ್ಕಿಂತ ಉನ್ನತ ತರಗತಿಗಳಿಗೆ ಮಕ್ಕಳನ್ನು ದಾಖಲಿಸಿಕೊಳ್ಳುವುದು. ಹೆಚ್ಚುವರಿ ತರಗತಿಗಳನ್ನು ನಡೆಸುವುದು. ಕೇಂದ್ರ ಪಠ್ಯಕ್ರಮಕ್ಕೆ ಸಂಯೋಜಿಸಿದ ನಂತರವೂ ರಾಜ್ಯ ಪಠ್ಯಕ್ರಮದಲ್ಲಿ ಬೋಧಿಸುವುದು, ರಾಜ್ಯ ಪಠ್ಯಕ್ರಮಕ್ಕೆ ಅನುಮತಿ ಪಡೆದು ಇತರೆ ಪಠ್ಯಕ್ರಮ ಅನುಸರಿಸುವ ಶಾಲೆಗಳು, ಇಲಾಖೆಯ ಪೂರ್ವಾನುಮತಿ ಪಡೆಯದೇ ಶಾಲೆಗಳನ್ನು ಸ್ಥಳಾಂತರಿಸುವುದು ನಿಯಮ ಬಾಹಿರ. ಇವು ಅನಧಿಕೃತ ಶಾಲೆಗಳಾಗಿದ್ದು, ಅವುಗಳನ್ನು ತಕ್ಷಣ ಗುರುತಿಸಿ, ಬಾಗಿಲು ಮುಚ್ಚಿಸಬೇಕು ಎಂದು ಜ್ಞಾಪನಾ ಪತ್ರದಲ್ಲಿ ವಿವರಿಸಿದ್ದಾರೆ.
ಅನಧಿಕೃತ ಶಾಲೆಗಳ ಪಟ್ಟಿ ತಯಾರಿಸಬೇಕು. ತೆಗೆದುಕೊಂಡ ಕ್ರಮಗಳ ಸಹಿತ ವರದಿಯನ್ನು ಆ.16ರ ಒಳಗೆ ಇಲಾಖೆಗೆ ಸಲ್ಲಿಸಬೇಕು. ಇಲ್ಲದಿದ್ದರೆ ಕರ್ತವ್ಯ ಲೋಪವೆಂದು ಪರಿಗಣಿಸಿ ಕ್ರಮ ಜರುಗಿಸಲಾಗುವುದು ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.