ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಒಳಮೀಸಲಾತಿ ಬಗ್ಗೆ 15 ದಿನಗಳ ಒಳಗೆ ನಿರ್ಧರಿಸಿ: CMಗೆ ಮುನಿಯಪ್ಪ, ತಿಮ್ಮಾಪೂರ ಮನವಿ

Published : 2 ಆಗಸ್ಟ್ 2024, 15:43 IST
Last Updated : 2 ಆಗಸ್ಟ್ 2024, 15:43 IST
ಫಾಲೋ ಮಾಡಿ
Comments

ಬೆಂಗಳೂರು: ಪರಿಶಿಷ್ಟ ಜಾತಿಯೊಳಗೆ ಒಳಮೀಸಲಾತಿ ನೀಡುವ ಕುರಿತಂತೆ ನ್ಯಾ.ಸದಾಶಿವ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸುವ ಕುರಿತು ರಾಜ್ಯ ಸರ್ಕಾರ 15 ದಿನಗಳ ಒಳಗೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೋರಲಾಗಿದೆ ಎಂದು ಆಹಾರ ಸಚಿವ  ಕೆ.ಎಚ್‌. ಮುನಿಯಪ್ಪ, ಅಬಕಾರಿ ಸಚಿವ ಆರ್‌.ಬಿ. ತಿಮ್ಮಾಪೂರ ಹೇಳಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರಿಬ್ಬರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ಒಳಮೀಸಲಾತಿ ನೀಡುವ ಅಧಿಕಾರ ರಾಜ್ಯಗಳಿಗೆ ಇದೆ ಎಂದು ಸುಪ್ರೀಂಕೋರ್ಟ್‌ನ ಸಂವಿಧಾನ ಪೀಠ ಐತಿಹಾಸಿಕ ತೀರ್ಪು ನೀಡಿದೆ. ಹಾಗಾಗಿ, ಒಳ ಮೀಸಲಾತಿ ಜಾರಿಗೆ ಇದ್ದ ಎಲ್ಲ ತೊಡಕುಗಳೂ ನಿವಾರಣೆಯಾಗಿವೆ. ತೀರ್ಪುಹೊರಬಿದ್ದ ತಕ್ಷಣ ತೆಲಂಗಾಣದ ಕಾಂಗ್ರೆಸ್ ನೇತೃತ್ವದ ಸರ್ಕಾರ ಒಳ ಮೀಸಲಾತಿ ಜಾರಿಗೊಳಿಸುವುದಾಗಿ ಘೋಷಿಸಿದೆ. ಸುಗ್ರೀವಾಜ್ಞೆ ಹೊರಡಿಸುವ ಭರವಸೆಯನ್ನೂ ನೀಡಿದೆ. ಸಿದ್ದರಾಮಯ್ಯ ಇದೇ ಮಾದರಿಯ ತೀರ್ಮಾನ ಕೈಗೊಳ್ಳಬೇಕು ಎಂದು ಕೋರಿದರು.

ಪರಿಶಿಷ್ಟ ಜಾತಿಗಳು ಏಕರೂಪಿ ಸಮುದಾಯವಲ್ಲ. ಹೀಗಾಗಿ ರಾಜ್ಯಗಳು ಸಂವಿಧಾನದ 15(4), 16(4)ನೆಯ ವಿಧಿಯಡಿಯಲ್ಲಿನ ಅಧಿಕಾರವನ್ನು ಬಳಸಿ, ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಕಲ್ಪಿಸಬಹುದು ಎಂಬ ತೀರ್ಪು ತಳಸಮುದಾಯಗಳ ಹಲವು ವರ್ಷಗಳ ಹೋರಾಟಕ್ಕೆ ದೊರೆತ ಫಲ. ಒಳ ಮೀಸಲಾತಿ ವಿರುದ್ಧ ಕೋರ್ಟ್‌ ಮೊರೆ ಹೋಗಿದ್ದ ಇ.ವಿ. ಚಿನ್ನಯ್ಯ ಅವರ ನಡೆಯಿಂದಾದ ಸಮಸ್ಯೆಗಳೂ ನಿವಾರಣೆಯಾಗಿವೆ ಎಂದರು.

ಮಾಜಿ ಸಚಿವ ಎಚ್‌. ಆಂಜನೇಯ ಮಾತನಾಡಿ, ಪರಿಶಿಷ್ಟರಲ್ಲಿ ಕೆಲವೇ ಸಮುದಾಯಗಳು ಮೀಸಲಾತಿಯ ಲಾಭ ಪಡೆಯುತ್ತಿವೆ. ಮಾದಿಗರು ಸೇರಿದಂತೆ ಕೆಲವರಿಗೆ ಸಿಕ್ಕ ಮೀಸಲಾತಿ ಶೇ 1ರಷ್ಟು ಇಲ್ಲ. ಈಗ ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿಗೊಳಿಸುವ ಮೂಲಕ ಶೋಷಿತ ಮಾದಿಗ ಸಮುದಾಯಕ್ಕೆ ನ್ಯಾಯ ಒದಗಿಸಬೇಕು ಎಂದು ಕೋರಿದರು.

ರಾಜ್ಯಸಭೆ ಮಾಜಿ ಸದಸ್ಯ ಎಲ್‌. ಹನುಮಂತಯ್ಯ ಮಾತನಾಡಿ, ಶೋಷಿತ ಸಮುದಾಯಗಳ ದಶಕಗಳ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ಪರಿಶಿಷ್ಟರ ಜನಸಂಖ್ಯೆ ಆಧಾರದಲ್ಲಿ ನ್ಯಾ. ಸದಾಶಿವ ಆಯೋಗ ಒಳಮೀಸಲಾತಿ ವರ್ಗೀಕರಣ ಮಾಡಿತ್ತು. ವಿಧಾನಸಭೆ ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಸದಾಶಿವ ಆಯೋಗದ ವರದಿಯನ್ನು ಜಾರಿಗೆ ತರಲು ಭರವಸೆ ನೀಡಿತ್ತು. ಆಯೋಗ ಶಿಫಾರಸುಗಳನ್ನು ಜಾರಿಗೆ ತರಲು ಕ್ರಮ ಕೈಗೊಳ್ಳಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಸಂಸದ ಚಂದ್ರಪ್ಪ, ಶಾಸಕ ಬಸವಂತಪ್ಪ, ಆದಿ ಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT