ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಿಂಕೆ ಬೇಟೆ ವಿಚಾರಣೆ ವಿಳಂಬ: ಹೈಕೋರ್ಟ್‌ ತರಾಟೆ

Published 5 ಸೆಪ್ಟೆಂಬರ್ 2024, 15:34 IST
Last Updated 5 ಸೆಪ್ಟೆಂಬರ್ 2024, 15:34 IST
ಅಕ್ಷರ ಗಾತ್ರ

ಬೆಂಗಳೂರು: ‘ಬಂಡೀಪುರ ಅರಣ್ಯ ಪ್ರದೇಶದಲ್ಲಿ ಜಿಂಕೆಯನ್ನು ಬೇಟೆಯಾಡಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣವೊಂದರ ವಿಚಾರಣೆ 16 ವರ್ಷವಾದರೂ ಕುಂಟುತ್ತಾ ಸಾಗುತ್ತಿದೆ’ ಎಂಬ ಹಿನ್ನೆಲೆಯಲ್ಲಿ ಹೈಕೋರ್ಟ್ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

‘ನಮ್ಮ ವಿರುದ್ಧ ದಾಖಲಾಗಿರುವ ಕ್ರಿಮಿನಲ್‌ ಪ್ರಕರಣ ರದ್ದುಪಡಿಸಬೇಕು’ ಎಂದು ಕೋರಿ ಕೇರಳದ ಕೊಯಿಕ್ಕೋಡ್‌ನ ತಾಮರಶೆರಿಯ ಅಬ್ದುಲ್ ರೆಹಿಮಾನ್ (52), ಅಬ್ದುಲ್ ಮಜೀದ್ (60) ಮತ್ತು ಸುಲ್ತಾನ್‌ ಬತೇರಿಯ ಮೊಹಮ್ಮದ್ ಕುಟ್ಟಿ (76) ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ‘ಅರ್ಜಿದಾರರನ್ನು ಘೋಷಿತ ಅಪರಾಧಿಗಳು ಎಂದು ಸಾರಲಾಗಿದೆ. ವಿಚಾರಣೆಗೆ ಹಾಜರಾಗಲು ನ್ಯಾಯಾಲಯ ರಕ್ಷಣೆ ಒದಗಿಸಬೇಕು’ ಎಂದು ಕೋರಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರಾಜ್ಯ ಪ್ರಾಸಿಕ್ಯೂಟರ್‌ ಬಿ.ಎನ್‌.ಜಗದೀಶ್‌, ‘ಆರೋಪಿಗಳು 2008ರಲ್ಲಿ ಬಂಡೀಪುರ ಅರಣ್ಯದಲ್ಲಿ ಜಿಂಕೆಯನ್ನು ಬೇಟೆಯಾಡಿ ಅದರ ಕಾಲು, ಕೈಗಳನ್ನು ಸ್ಥಳದಲ್ಲೇ ಬಿಟ್ಟು ಮಾಂಸವನ್ನು ಕೊಂಡೊಯ್ದಿದ್ದಾರೆ. ಇವರೆಲ್ಲಾ ಕೇರಳದ ಸುಲ್ತಾನ್ ಬತೇರಿಯಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ಮಾಹಿತಿ ಆಧರಿಸಿ ಆರೋಪಿಗಳನ್ನು ಘಟನಾ ಸ್ಥಳಕ್ಕೆ ಕರೆದೊಯ್ದಾಗ ಜಿಂಕೆಯ ಕಾಲುಗಳು ಸಿಕ್ಕಿದ್ದವು. ಎಲ್ಲರ ವಿರುದ್ಧ ದೋಷಾರೋಪ ನಿಗದಿಗೊಳಿಸಲಾಗಿದೆ. ಈಗಾಗಲೇ ಸಾಕ್ಷಿಗಳ ದಾಖಲು ಪ್ರಕ್ರಿಯೆ ನಡೆಯುತ್ತಿದೆ. ಆದರೆ, ಆರೋಪಿಗಳು ನ್ಯಾಯಾಲಯಕ್ಕೆ ಸರಿಯಾಗಿ ಹಾಜರಾಗುತ್ತಿಲ್ಲ’ ಎಂದರು.

ಈ ವಿವರಣೆಗೆ ಅತೃಪ್ತಿ ವ್ಯಕ್ತಪಡಿಸಿದ ನ್ಯಾಯಪೀಠ, ‘ಒಂದು ಗಂಭೀರ ಅರಣ್ಯ ಅಪರಾಧವನ್ನು ಇತ್ಯರ್ಥಗೊಳಿಸಲು 16 ವರ್ಷ ಏಕೆ ತೆಗೆದುಕೊಂಡಿರಿ? ಹೀಗಾದರೆ ಆರೋಪಿಗಳು ಎದೆಯುಬ್ಬಿಸಿ ಓಡಾಡುತ್ತಾರಲ್ಲವೇ? ಯಾರನ್ನಾದರೂ ಶಿಕ್ಷೆಗೆ ಗುರಿಯಾಗುವಂತೆ ಮಾಡಬೇಕಾದರೆ, ಬೇಗ ಮಾಡಿ. ಒಂದು ಪ್ರಕರಣವನ್ನು 16 ವರ್ಷಗಳವರೆಗೆ ತಳ್ಳುತ್ತಾ ಕೂತರೆ ಹೇಗೆ? 2008ರಲ್ಲಿ ಜಿಂಕೆ ಕೊಂದಿರುವುದಕ್ಕೆ ಅರಣ್ಯ ಕಾಯ್ದೆ ಅಡಿ ಪ್ರಕರಣ ದಾಖಲಿಸಿ, 2024ರಲ್ಲಿ ಅದರ ವಿಚಾರಣೆ ನಡೆಸಲಾಗುತ್ತಿದೆ ಎಂದರೆ ಹೇಗೆ? ಅರ್ಜಿದಾರರು ನ್ಯಾಯಾಲಯದ ಮುಂದೆ ಬಂದಿಲ್ಲ ಎಂದು ಎಷ್ಟು ವರ್ಷ ಕಾಯುತ್ತಾ ಕೂರುತ್ತೀರಿ’ಎಂದು ಚಾಟಿ ಬೀಸಿತು.

‘ನಾವೀಗ 2024ರಲ್ಲಿದ್ದೇವೆ. ವಿಳಂಬ ಸಲ್ಲದು’ ಎಂದ ನ್ಯಾಯಪೀಠ, ‘ಗುಂಡ್ಲುಪೇಟೆಯ ಪ್ರಧಾನ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿನ ವಿಚಾರಣಾ ಪ್ರಕ್ರಿಯೆ ರದ್ದುಪಡಿಸಬೇಕು’ ಎಂಬ ಅರ್ಜಿದಾರರ ಕೋರಿಕೆಯನ್ನು ವಜಾಗೊಳಿಸಿ ಆದೇಶಿಸಿತು.

ಎಂ.ನಾಗಪ್ರಸನ್ನ
ನ್ಯಾಯಮೂರ್ತಿ
ಎಂ.ನಾಗಪ್ರಸನ್ನ ನ್ಯಾಯಮೂರ್ತಿ

* 16 ವರ್ಷಗಳ ಸುದೀರ್ಘ ವಿಳಂಬ * ಪ್ರಕರಣ ರದ್ದುಪಡಿಸಲು ನಕಾರ

ಅರ್ಜಿದಾರರು ವಿಚಾರಣೆಯಿಂದ ನುಣಿಚಿಕೊಳ್ಳುತ್ತಿರುವುದರಿಂದ ಅವರಿಗೆ ಯಾವುದೇ ರಕ್ಷಣೆ ನೀಡಲಾಗದು. ಅವರೆಲ್ಲಾ ವಿಚಾರಣೆಗೆ ಸಹಕರಿಸಬೇಕು. ವಿಚಾರಣಾ ನ್ಯಾಯಾಲಯ ಪ್ರಕರಣವನ್ನು ಮೂರು ತಿಂಗಳಲ್ಲಿ ವಿಲೇವಾರಿ ಮಾಡಬೇಕು.
ಎಂ.ನಾಗಪ್ರಸನ್ನ ನ್ಯಾಯಮೂರ್ತಿ

35 ಕೆ.ಜಿ. ಜಿಂಕೆ ಮಾಂಸ ವಶ

‘ಅಬ್ದುಲ್ ರೆಹಿಮಾನ್ ಅಬ್ದುಲ್ ಮಜೀದ್ ಮತ್ತು ಮೊಹಮ್ಮದ್ ಕುಟ್ಟಿ 2008ರ ನವೆಂಬರ್ 30ರಂದು ಬಂಡೀಪುರ ಅರಣ್ಯದಲ್ಲಿ ಜಿಂಕೆಯನ್ನು ಕೊಂದು ಅದರ ಕಾಲು ಕತ್ತರಿಸಿ ಬಿಸಾಡಿದ್ದರು. ನಂತರ ಅದರ ದೇಹವನ್ನು ಸುಲ್ತಾನ್ ಬತೇರಿಗೆ ತೆಗೆದುಕೊಂಡು ಹೋಗಿದ್ದರು’ ಎಂಬ ಆರೋಪದಡಿ ಇವರೆಲ್ಲರ ವಿರುದ್ಧ ವನ್ಯಜೀವಿ ರಕ್ಷಣಾ ಕಾಯ್ದೆ-1972ರ ಕಲಂ 2 (36) 9 31 34 35 (6 8) 48 (ಎ) ಜೊತೆಗೆ 51ರ ಅಡಿಯಲ್ಲಿ ಗುಂಡ್ಲುಪೇಟೆಯ ಮದ್ದೂರು ವಿಭಾಗದ ವಲಯ ಅರಣ್ಯಾಧಿಕಾರಿ ಕ್ರಿಮಿನಲ್‌ ಪ್ರಕರಣ ದಾಖಲಿಸಿದ್ದರು. ಆರೋಪಿಗಳಿಂದ ಕೇರಳದ ಸುಲ್ತಾನ್ ಬತೇರಿಯಲ್ಲಿ 35 ಕೆ.ಜಿ.ಜಿಂಕೆ ಮಾಂಸ ಮತ್ತು ಅದರ ಚರ್ಮವನ್ನು ಹಾಗೂ ನಂತರದಲ್ಲಿ ಪರವಾನಗಿ ಇಲ್ಲದ ಗನ್ ಕಾಟ್ರಿಜ್ ಅನ್ನು ವಶಪಡಿಸಿಕೊಳ್ಳಲಾಗಿತ್ತು. ವನ್ಯಜೀವಿ ರಕ್ಷಣಾ ಕಾಯ್ದೆ ಅಡಿಯಲ್ಲಿ ಗುಂಡ್ಲುಪೇಟೆ ಠಾಣೆಯಲ್ಲಿ ಹಾಗೂ ಸುಲ್ತಾನ್ ಬತೇರಿಯಲ್ಲಿ ಶಸ್ತ್ರಾಸ್ತ್ರ ಕಾಯ್ದೆ ಅಡಿ ಪ್ರತ್ಯೇಕ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT