ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಾನನಷ್ಟ ಮೊಕದ್ದಮೆ: ಶಾಸಕ ಬಸನಗೌಡ ಪಾಟೀಲ ಯತ್ನಾಳಗೆ ಸಮನ್ಸ್‌

Published : 30 ಆಗಸ್ಟ್ 2024, 15:08 IST
Last Updated : 30 ಆಗಸ್ಟ್ 2024, 15:08 IST
ಫಾಲೋ ಮಾಡಿ
Comments

ಬೆಂಗಳೂರು: ಲೋಕಸಭಾ ಚುನಾವಣೆ ವೇಳೆ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು, ‘ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಮನೇಲಿ ಅರ್ಧ ಪಾಕಿಸ್ತಾನವಿದೆ. ದೇಶವಿರೋಧಿ ಹೇಳಿಕೆ ನೀಡುವುದು ಚಟವಾಗಿದೆ’ ಎಂದು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಅನುಮತಿಸಿದೆ.

ಈ ಸಂಬಂಧ ಸಚಿವ ದಿನೇಶ್ ಗುಂಡೂರಾವ್‌ ಅವರ ಪತ್ನಿ ತಬಸ್ಸುಮ್‌ ದಿನೇಶ್‌ ರಾವ್‌ ದಾಖಲಿಸಿರುವ ಖಾಸಗಿ ದೂರನ್ನು ಗಂಭೀರ ಅಪರಾಧದಡಿ ಪರಿಗಣಿಸಿರುವ, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಕೆ.ಎಂ.ಶಿವಕುಮಾರ್, ಆರೋಪಿ ಯತ್ನಾಳ ಅವರಿಗೆ ಸಮನ್ಸ್‌ ಜಾರಿಗೊಳಿಸಲು ಆದೇಶಿಸಿದ್ದಾರೆ.

‘ನನ್ನನ್ನು ದೇಶವಿರೋಧಿ ಎಂದು ಹೇಳಿರುವ ಯತ್ನಾಳ್ ಅವರ ಹೇಳಿಕೆಯಿಂದ ನನಗೆ ನೋವಾಗಿದೆ’ ಎಂದು ಆರೋಪಿಸಿ ತಬಸ್ಸುಮ್‌ ಅವರು, ಯತ್ನಾಳ ವಿರುದ್ಧ ಭಾರತೀಯ ದಂಡ ಸಂಹಿತೆ–1860ರ ಕಲಂ 499 ಮತ್ತು 500ರ ಅಡಿಯಲ್ಲಿ 2024ರ ಏಪ್ರಿಲ್‌ 15ರಂದು ಖಾಸಗಿ ದೂರು ದಾಖಲಿಸಲು ನಿರ್ದೇಶನ ಕೋರಿದ್ದರು. ಈ ದೂರನ್ನು ಪರಿಗಣಿಸಿರುವ ನ್ಯಾಯಾಲಯ ಆರೋಪಿ ವಿರುದ್ಧ ದೂರು ದಾಖಲಿಸಲು ಸಂಬಂಧಿಸಿ ಠಾಣಾ ಪೊಲೀಸರಿಗೆ ನಿರ್ದೇಶಿಸಿದೆ. 

ವಿಚಾರಣೆಯನ್ನು ಸೆಪ್ಟೆಂಬರ್ 20ಕ್ಕೆ ಮುಂದೂಡಲಾಗಿದೆ. ತಬಸ್ಸುಮ್‌ ಪರ ಹೈಕೋರ್ಟ್‌ ವಕೀಲ ಸೂರ್ಯ ಮುಕುಂದರಾಜ್‌ ಮತ್ತು ಬಿ.ಸಂಜಯ ಯಾದವ್‌ ವಕಾಲತ್ತು ವಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT