ಬೆಂಗಳೂರು: ‘ಲೋವರ್ ಆಗರಂನಿಂದ ಸರ್ಜಾಪುರವರೆಗೆ ರಸ್ತೆ ವಿಸ್ತರಣೆಗೆ ರಕ್ಷಣಾ ಇಲಾಖೆಯು 12.34 ಎಕರೆ ಜಾಗವನ್ನು ಬಿಬಿಎಂಪಿಗೆ ನೀಡಿದೆ. ಇನ್ನೂ 10.77 ಎಕರೆ ನೀಡಲು ತಾತ್ವಿಕವಾಗಿ ಒಪ್ಪಿದೆ’ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಬೆಂಗಳೂರಿನ ಎಎಸ್‌ಸಿ ಸೆಂಟರ್ ಮತ್ತು ಕಾಲೇಜಿನ ಕಮಾಂಡೆಂಟ್ ಲೆಫ್ಟಿನೆಂಟ್ ಜನರಲ್ ಬಸಂತ್ ಕುಮಾರ್ ರೆಪ್ಸ್ವಾಲ್ ಜೊತೆ ಸಮಾಲೋಚಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
‘ಎಂ.ಜಿ. ರಸ್ತೆಯಿಂದ ಬೆಳ್ಳಂದೂರು ಭಾಗಕ್ಕೆ ತೆರಳಲು ಸದ್ಯ ಸುಮಾರು ಒಂದು ಗಂಟೆ ಬೇಕಿದೆ. ಈ ರಸ್ತೆ ನಿರ್ಮಾಣವಾದರೆ ಅಂದಾಜು 5 ರಿಂದ 8 ನಿಮಿಷಗಳಲ್ಲಿ ತಲುಪಬಹುದಾಗಿದೆ’ ಎಂದು ಹೇಳಿದರು.
‘ರಸ್ತೆ ವಿಸ್ತರಣೆಗೆ ರಕ್ಷಣಾ ಇಲಾಖೆಯ ಭೂಮಿಯನ್ನು ಬಿಟ್ಟುಕೊಡುವಂತೆ ಮುಖ್ಯಮಂತ್ರಿ ಮತ್ತು ನಾನು ರಕ್ಷಣಾ ಸಚಿವರಿಗೆ ಮನವಿ ಸಲ್ಲಿಸಿದ್ದೆವು. ಮನವಿಗೆ ಸ್ಪಂದಿಸಿ 22 ಎಕರೆ ಜಾಗ ಬಿಟ್ಟುಕೊಡಲು ಇಲಾಖೆಯು ತೀರ್ಮಾನಿಸಿದೆ’ ಎಂದು ವಿವರಿಸಿದರು.
‘ನಾನು ಬೆಂಗಳೂರು ಅಭಿವೃದ್ಧಿ ಖಾತೆಯನ್ನು ವಹಿಸಿಕೊಂಡ ಬಳಿಕ ಬೆಳ್ಳಂದೂರು ಮತ್ತು ಸುತ್ತಮುತ್ತಲಿನ ಐ.ಟಿ ಹಬ್ ಭಾಗದ ಜನರ ಸಮಸ್ಯೆಗಳನ್ನು ಆಲಿಸಿದ್ದೆ. ಆ ಭಾಗದಲ್ಲಿ ಸಂಚಾರ ದಟ್ಟಣೆ ಸಮಸ್ಯೆ ಕುರಿತು ದಿನನಿತ್ಯ 8-10 ಇ-ಮೇಲ್ ಬರುತ್ತಿದ್ದವು. ಹೀಗಾಗಿ ನಾನು ಮತ್ತು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೆವು. ಈ ಸಮಸ್ಯೆಗೆ ಈಗ ಪರಿಹಾರ ಸಿಕ್ಕಿದಂತಾಗಿದೆ’ ಎಂದರು.
‘ಹೆಬ್ಬಾಳದ ಬಳಿಯ ಹೋಪ್ ಡೈರಿ ಫಾರ್ಮ್ ಬಳಿ ಸುರಂಗ ರಸ್ತೆಯ ಪ್ರವೇಶಕ್ಕೆ ಜಾಗ ಅಗತ್ಯವಿದೆ. ಇದಕ್ಕೆ ಎರಡು ಎಕರೆ ಜಾಗ ಬಿಟ್ಟುಕೊಡುವಂತೆ ರಕ್ಷಣಾ ಇಲಾಖೆಗೆ ಮನವಿ ಸಲ್ಲಿಸಲಿದ್ದೇವೆ’ ಎಂದು ಹೇಳಿದರು.
‘ಭೂಮಿ ಬಿಟ್ಟುಕೊಡುವುದಕ್ಕೆ ಪರ್ಯಾಯವಾಗಿ ರಕ್ಷಣೆ ಇಲಾಖೆಯು ಏನು ಬೇಡಿಕೆ ಇಟ್ಟಿದೆ’ ಎಂಬ ಪ್ರಶ್ನೆಗೆ, ‘ಮೂಲಸೌಕರ್ಯ ಕಲ್ಪಿಸಿಕೊಡುವಂತೆ ರಕ್ಷಣಾ ಇಲಾಖೆಯು ಹೇಳಿದೆ’ ಎಂದರು.
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಬಿಎಂಆರ್‌ಡಿಎ ಕಮಿಷನರ್ ರಾಜೇಂದ್ರ ಚೋಳನ್ ಇದ್ದರು.
‘₹ 35 ಕೋಟಿ ಮೊತ್ತದ ಟೆಂಡರ್’
‘ಲೋವರ್ ಆಗರಂ– ಸರ್ಜಾಪುರ ಹೊಸ ರಸ್ತೆ ನಿರ್ಮಾಣದ ಮೊದಲ ಹಂತದ 3.50 ಕಿ.ಮೀ ಕಾಮಗಾರಿಗೆ ₹ 35 ಕೋಟಿ ಮೊತ್ತದ ಟೆಂಡರ್ ಕರೆಯಲಾಗಿದೆ. ಟ್ರಿನಿಟಿ ವೃತ್ತ ಈಜಿಪುರ ಸೇರಿದಂತೆ ಕೆಲವು ಕಡೆ ಹೊಸ ರಸ್ತೆ ನಿರ್ಮಾಣಕ್ಕೆ ಇನ್ನೂ 10.77 ಎಕರೆ ಜಾಗವನ್ನು ರಕ್ಷಣಾ ಇಲಾಖೆ ನೀಡಬೇಕಿದೆ’ ಎಂದು ಶಿವಕುಮಾರ್ ಹೇಳಿದರು. ಬಿಬಿಎಂಪಿಗೆ ಜಾಗ ಬಿಟ್ಡುಕೊಡಲು ಸಹಕರಿಸಿದ ಲೆಫ್ಟಿನೆಂಟ್ ಜನರಲ್ ಬಸಂತ್ ಕುಮಾರ್ ರೆಪ್ಸ್ವಾಲ್ ಇದೇ 30ರಂದು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.