ಬೆಂಗಳೂರು: ಕೇಂದ್ರ ಕೈಗಾರಿಕಾ ನ್ಯಾಯಮಂಡಳಿಯ (ಕಾರ್ಮಿಕ ನ್ಯಾಯಾಲಯ) ಬೆಂಗಳೂರು ಪೀಠಾಸೀನಾ ಅಧಿಕಾರಿಯ ನೇಮಕಾತಿಗೆ ವಿಳಂಬಕ್ಕೆ ಬೇಸರ ವ್ಯಕ್ತಪಡಿಸಿರುವ ಹೈಕೋರ್ಟ್, ‘ಈ ಸಂಬಂಧ ಮುಂದಿನ ಮೂರು ವಾರಗಳಲ್ಲಿ ಸಕಾರಾತ್ಮಕ ಕ್ರಮ ಕೈಗೊಳ್ಳದೇ ಹೋದರೆ ₹ 10 ಲಕ್ಷ ದಂಡ ತೆರಬೇಕಾಗುತ್ತದೆ’ ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.
‘ಕೈಗಾರಿಕಾ ಕಾನೂನು ಅಭ್ಯಾಸಕಾರರ ವೇದಿಕೆ’ ಕಾರ್ಯದರ್ಶಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪಿ. ಬಿ. ವರಾಳೆ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಕೇಂದ್ರ ಸರ್ಕಾರದ ವಕೀಲರು, ‘ಕೈಗಾರಿಕಾ ನ್ಯಾಯಮಂಡಳಿಗೆ ಪೀಠಾಸೀನ ಅಧಿಕಾರಿಯಾಗಿ 2022ರ ಆಗಸ್ಟ್ 18 ರಂದು ಒಬ್ಬರನ್ನು ನೇಮಕ ಮಾಡಲಾಗಿತ್ತು. ಆದರೆ, ಅವರು ಅಧಿಕಾರ ವಹಿಸಿಕೊಂಡಿಲ್ಲ. ಹೀಗಾಗಿ, ಹೊಸ ಪ್ರಕ್ರಿಯೆ ಪ್ರಾರಂಭಿಸಲಾಗಿದೆ. ಇದು ಕೇಂದ್ರ ಸಂಪುಟದ ನೇಮಕಾತಿ ಸಮಿತಿಯ ಹಂತದಲ್ಲಿದೆ. ಎರಡು ವಾರಗಳ ಕಾಲಾವಕಾಶ ನೀಡಿದರೆ ವಸ್ತುಸ್ಥಿತಿಯನ್ನು ನ್ಯಾಯಪೀಠಕ್ಕೆ ವಿವರಿಸಲಾಗುವುದು’ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಅರ್ಜಿದಾರರು ಹೇಳುವಂತೆ ಕಳೆದ ಮೂರು ವರ್ಷಗಳಿಂದ ಹುದ್ದೆ ಖಾಲಿ ಇದೆ. ಈ ರೀತಿ ನ್ಯಾಯಿಕ ಮತ್ತು ಅರೆನ್ಯಾಯಿಕ ಸಂಸ್ಥೆಯ ಹುದ್ದೆಗಳನ್ನು ದೀರ್ಘಕಾಲದವರೆಗೆ ಭರ್ತಿ ಮಾಡದೆ ಹೋದರೆ ಕಕ್ಷಿದಾರರು ನ್ಯಾಯವಂಚಿರಾಗುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರ ಮೌನ ಪ್ರೇಕ್ಷಕನಾಗಿ ಇರಬಾರದು’ ಎಂದು ಹೇಳಿತು.
‘ಕೇಂದ್ರ ಸರ್ಕಾರದ ಪರ ವಕೀಲರು ಎರಡು ವಾರಗಳಲ್ಲಿ ವಸ್ತುಸ್ಥಿತಿ ವರದಿ ಸಲ್ಲಿಸುವುದಾಗಿ ಹೇಳುತ್ತಿದ್ದಾರೆ. ಆದರೆ, ಇದು ಕಣ್ಣೊರೆಸುವ ತಂತ್ರ ಆಗಬಾರದು‘ ಎಂದು ದಂಡ ತೆರಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡಿ ಮೂರು ವಾರಗಳ ಕಾಲಾವಕಾಶ ನೀಡಿತು. ವಿಚಾರಣೆಯನ್ನು ನವೆಂಬರ್ 7 ಕ್ಕೆ ಮುಂದೂಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.