ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದಿಂದ(ಕೆಪಿಎಸ್‌ಸಿ) ಆಗಸ್ಟ್ 27ರಂದು ನಿಗದಿ ಆಗಿರುವ ಪೂರ್ವಭಾವಿ ಪರೀಕ್ಷೆಯನ್ನು ಮುಂದೂಡುವಂತೆ ಆಗ್ರಹಿಸಿ, ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಸಂಘದ ನೇತೃತ್ವದಲ್ಲಿ ಉದ್ಯೋಗ ಆಕಾಂಕ್ಷಿಗಳು ಪ್ರತಿಭಟನೆ ನಡೆಸಿದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಕೆಪಿಎಸ್‌ಸಿ ಹುದ್ದೆಗಳ ಆಕಾಂಕ್ಷಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಸರ್ಕಾರ ಹಾಗೂ ಕೆಪಿಎಸ್‌ಸಿ ವಿರುದ್ಧ ಆಕ್ರೋಶ ಹೊರಹಾಕಿ ಘೋಷಣೆ ಕೂಗಿದರು. ಹಲವು ವರ್ಷದಿಂದ ಕಷ್ಟಪಟ್ಟು ಅಭ್ಯಾಸ ನಡೆಸಿದ್ದವರನ್ನು ಸರ್ಕಾರವೇ ನಿರುದ್ಯೋಗಿಗಳನ್ನಾಗಿ ಮಾಡಲು ಮುಂದಾಗಿದೆ ಎಂದು ಆಕ್ರೋಶ ಹೊರಹಾಕಿದರು. ಶೂ ಪಾಲಿಶ್ ಮಾಡುವ ವಿನೂತನವಾಗಿ ಪ್ರತಿಭಟನೆ ನಡೆಸಿದರು.
‘ಸಾಮಾನ್ಯವಾಗಿ ಭಾನುವಾರ ಪರೀಕ್ಷೆ ನಡೆಸಬೇಕು. ಆದರೆ, ವಾರದ ಮಧ್ಯದಲ್ಲಿ ಪರೀಕ್ಷೆ ನಡೆಸಿ ಅವಕಾಶ ವಂಚಿತರನ್ನಾಗಿ ಮಾಡಲಾಗುತ್ತಿದೆ’ ಎಂದು ಪ್ರತಿಭಟನಕಾರರು ನೋವು ತೋಡಿಕೊಂಡರು.
ಆಗಸ್ಟ್ 27ರಂದು ಯುಜಿಸಿಯ ನೆಟ್ ಪರೀಕ್ಷೆಯೂ ನಡೆಯುತ್ತಿದೆ. ಅಂದೇ ಕೆಪಿಎಸ್‌ಸಿ ಪೂರ್ವಭಾವಿ ಪರೀಕ್ಷೆ ನಿಗದಿಯಾಗಿದೆ. ಎರಡೂ ಪರೀಕ್ಷೆ ತೆಗೆದುಕೊಂಡವರು ಯಾವುದಾದರೂ ಒಂದು ಪರೀಕ್ಷೆಯಿಂದ ವಂಚಿತರಾಗಬೇಕಿದೆ. ಆದ್ದರಿಂದ, ಕೆಪಿಎಸ್‌ಸಿ ಪರೀಕ್ಷೆಯನ್ನು ಮುಂದೂಡುವಂತೆ ಕೋರಿದರು.
‘ಮಂಗಳವಾರ ಕೇಂದ್ರ ಸರ್ಕಾರದ ನೌಕರರಿಗೆ ಹಾಗೂ ಖಾಸಗಿ ಸಂಸ್ಥೆಗಳ ನೌಕರರಿಗೆ ರಜೆ ಸಿಗುವುದಿಲ್ಲ. ಅಲ್ಲದೇ ಪರೀಕ್ಷಾ ಕೇಂದ್ರಗಳೂ 400 ಕಿ.ಮೀ ದೂರದಲ್ಲಿವೆ. ಆ ಸ್ಥಳಕ್ಕೆ ತಲುಪುವುದೂ ಕಷ್ಟವಾಗಿದೆ’ ಎಂದು ಹೇಳಿದರು.
‘2017–18ನೇ ಬ್ಯಾಚ್‌ನ ಅಭ್ಯರ್ಥಿಗಳಿಗೂ ಅವಕಾಶ ನೀಡಲಾಗಿದೆ. ಆದರೆ, ಅಭ್ಯಾಸಕ್ಕೆ ಸಮಯ ಇಲ್ಲ. ಪ್ರಶ್ನೆ ಪತ್ರಿಕೆಗಳನ್ನು ಒಂದು ತಿಂಗಳ ಮೊದಲೇ ಮುದ್ರಿಸಿ ಇಟ್ಟುಕೊಂಡಿರುವ ಮಾಹಿತಿಯಿದೆ. ಪ್ರಶ್ನೆ ಪತ್ರಿಕೆ ತಲುಪಿಸುವ ಮಾರ್ಗದ ಮಾಹಿತಿ ಸಹ ಸೋರಿಕೆಯಾಗಿದ್ದು, ಈ ಪರೀಕ್ಷೆಯಲ್ಲೂ ಭ್ರಷ್ಟಾಚಾರ ಮತ್ತು ಅಕ್ರಮ ನಡೆಯುವ ಸಾಧ್ಯತೆ ಇದೆ’ ಎಂದು ಆಕಾಂಕ್ಷಿಗಳು ಹೇಳಿದರು.
ಕೆಪಿಎಸ್‌ಸಿ ಪೂರ್ವಭಾವಿ ಪರೀಕ್ಷೆಯ ದಿನಾಂಕವನ್ನು ಮುಂದೂಡಲು ಸಾಧ್ಯವಿಲ್ಲ. ಕೃಷ್ಣ ಜನ್ಮಾಷ್ಟಮಿಯಂದು ಇರುವ ಪರೀಕ್ಷೆಯ ದಿನಾಂಕವನ್ನು ಬದಲಾಯಿಸಲಾಗಿದೆಸಿದ್ದರಾಮಯ್ಯ, ಮುಖ್ಯಮಂತ್ರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.