ಅವಿರತ ಹೋರಾಟದಲ್ಲಿ ಪಳಗಿ, ರಾಜಕಾರಣದಲ್ಲಿ ಮಾಗಿದ ಬಳಿಕ ಅಪಾರ ಸಹನೆ, ಅರಿವುಗೆಡದ ತಾಳ್ಮೆ, ಬಿಡದ ಛಲವನ್ನು ಮೈಗೂಡಿಸಿಕೊಂಡಿರುವ ದೊಡ್ಡ ಆಲಹಳ್ಳಿ ಕೆಂಪೇಗೌಡ (ಡಿ.ಕೆ.) ಶಿವಕುಮಾರ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಚುಕ್ಕಾಣಿ ಹಿಡಿಯಲಿದ್ದಾರೆ.

ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರು ನಗರದಲ್ಲಿ, ತಮ್ಮದೇ ಜಿಲ್ಲೆಯವರಾದ ಅಂದಿನ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರು ಅಡಿಗಲ್ಲು ಹಾಕಿದ ವಿಧಾನಸೌಧದಲ್ಲಿ ದೊಡ್ಡ ಆಲಹಳ್ಳಿಯ ಕೆಂಪೇಗೌಡರ ಮಗನಾದ ಶಿವಕುಮಾರ್ ನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸುವ ಕಾಲ ಕೊನೆಗೂ ಸನ್ನಿಹಿತವಾಗಿದೆ. ‘ಪ್ರಯತ್ನಕ್ಕೆ ಫಲ ಸಿಗದೇ ಇದ್ದರೂ ಪ್ರಾರ್ಥನೆಗೆ ಫಲ ಸಿಗಲಿದೆ’ ಎಂದು ಅವರು ಹೇಳಿಕೊಳ್ಳುತ್ತಿದ್ದರು. ಪ್ರಾರ್ಥನೆಯ ಜತೆಗೆ ಶತಪ್ರಯತ್ನವೂ ಅವರಿಗೆ ಈ ಮಹೋನ್ನತ ಸ್ಥಾನವನ್ನು ದಕ್ಕಿಸಿಕೊಟ್ಟಿದೆ.

ದೇಶದ ಮುಖ್ಯಮಂತ್ರಿಗಳಲ್ಲೇ ಅತೀ ಶ್ರೀಮಂತ ಎಂಬ ದಾಖಲೆ ಹೊಂದಲಿರುವ ಶಿವಕುಮಾರ್ ನಡೆದು ಬಂದ ಹಾದಿಯಲ್ಲೇನೂ ರತ್ನಗಂಬಳಿ ಹಾಸಿರಲಿಲ್ಲ. ಕನಕಪುರದ ಕೃಷಿ ಕುಟುಂಬವೊಂದರಲ್ಲಿ ಹುಟ್ಟಿದ ಅವರು, ಜೀವನವನ್ನು ಹೋರಾಟದಲ್ಲೇ ಸವೆಸಿ, ಬಂಡೆಯೊಂದು ಶಿಲ್ಪವಾಗುವ ರೀತಿಯೊಳಗೆ ತಮ್ಮನ್ನು ತಾವೇ ಕಟೆದುಕೊಂಡಿದ್ದಾರೆ.

ಪೂರ್ವಾಶ್ರಮದ ಚಹರೆಗಳನ್ನು ಕಳೆದುಕೊಳ್ಳುವುದು ಅಷ್ಟು ಸಲೀಸಲ್ಲ. 2014–2018ರ ಕಾಂಗ್ರೆಸ್ ಸರ್ಕಾರದಲ್ಲಿ ಅವರು ಮಂತ್ರಿಯಾಗಿರುವಾಗಲೂ ಗಡುಸಾದ ಮಾತು, ದಿಟ್ಟಿಸುವ ವೈಖರಿಯಿಂದಾಗಿ ಎದುರಿಗಿರುವವರು ಭಯ ಪಡುವಂತಹ ನಡತೆ ಹೊಂದಿದ್ದರು. ಬೆಳೆದು ಬಂದ ಪರಿಸರ, ತಿಂದುಂಡ ಏಟುಗಳು, ಎದುರಾಳಿಗಳ ಹೊಡೆತಗಳು ಅಂತಹ ಧಾಡಸಿನತವನ್ನು ಅವರಿಗೆ ತಂದುಕೊಟ್ಟಿದ್ದಿರಬಹುದು. ಇನ್ನೇನು ಕೈಗೆ ಅಧಿಕಾರ ಸಿಕ್ಕಿತು ಎಂದುಕೊಳ್ಳುವಷ್ಟರಲ್ಲಿ, ಅದನ್ನು ತಪ್ಪಿಸುವ ಕೈಗಳು ಅವರನ್ನು ದಿಕ್ಕೆಡಿಸಿದ್ದಿರಬಹುದು. ಬರಬರುತ್ತಾ ಅವರು ಮಾಗುತ್ತಲೇ ಹೋದರು, ತಮ್ಮ ಒರಟುತನವನ್ನು ಕರಗಿಸಿ ಮೆದು ಭಾಷಿಕರಾದರು. ಅದಕ್ಕೆ ತಕ್ಕಂತೆ ಮೈಮಾಟವನ್ನು, ನಡಾವಳಿಯನ್ನು ಸಾಣೆ ಹಿಡಿದು ಪರಿವರ್ತನೆಯೂ ಸಾಧ್ಯವೆಂದು ತೋರಿಸಿಕೊಟ್ಟರು. 2018ರಲ್ಲಿ ಜೆಡಿಎಸ್–ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಪ್ರಭಾವಿ ಸಚಿವ, 2020ರಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಅವರು 2023ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ, 10 ವರ್ಷಗಳ ಹಿಂದೆ ಇದ್ದ ಶಿವಕುಮಾರ್ ಇವರೇನಾ ಎಂದು ಹುಬ್ಬೇರಿಸುವಷ್ಟು ಬದಲಾಗಿದ್ದು, ಅವರ ವ್ಯಕ್ತಿತ್ವ ಪುಟಗೊಂಡಿದ್ದಕ್ಕೆ ಸಾಕ್ಷಿ.

ಕರ್ನಾಟಕದಲ್ಲಿ 1999ರಲ್ಲಿ ಹಾಗೂ 2023ರಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಶಿವಕುಮಾರ್ ಪಾತ್ರವನ್ನು ರಾಹುಲ್ಗಾಂಧಿ ಮೊನ್ನೆಯವರೆಗೂ ಗುರುತಿಸಲಿಲ್ಲ. ಆದರೆ, ಅವರ ಅಪ್ಪ ರಾಜೀವ್ ಗಾಂಧಿ ಅವರು 1989ರಲ್ಲೇ ಅಳೆದು ತೂಗಿದ್ದರು. ಪ್ರಧಾನಿಯಾದ ಬಳಿಕ ರಾಜೀವ್ ಬೆಂಗಳೂರಿಗೆ ಬಂದಿದ್ದಾಗ, ಕಾಂಗ್ರೆಸ್ನ ಬೃಹತ್ ಸಮಾವೇಶ ನಡೆದಿತ್ತು. ಆಗ ಗ್ರಾಮಾಂತರ ಜಿಲ್ಲೆ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಶಿವಕುಮಾರ್, ಸಾವಿರಾರು ಜನರನ್ನು ಕರೆತಂದಿದ್ದರು. ದೆಹಲಿಗೆ ಹೊರಟಿದ್ದ ರಾಜೀವ್, ವಿಮಾನ ನಿಲ್ದಾಣದಲ್ಲಿ ಶಿವಕುಮಾರ್ ಅವರನ್ನು ಗುರುತಿಸಿದ್ದರು. ಅದಾದ ಬಳಿಕ, ಪೊಲೀಸ್ ಕಮಿಷನರ್ ಕಚೇರಿಯಿಂದ ಅವರಿಗೆ ಕರೆ ಬಂದಿತ್ತು. ಪ್ರಧಾನಿ ಕಚೇರಿಯಿಂದ ಸೂಚನೆ ಬಂದಿದೆ. ನಿಮ್ಮ ಪಾಸ್ಪೋರ್ಟ್ ಮಾಡಿಸಲು ಬೇಕಾದ ದಾಖಲೆಗಳೆಲ್ಲ ಬೇಕು ಎಂದು ಸೂಚಿಸಿದ್ದರು. ಅದಕ್ಕಾಗಿ ಆಗ ₹3 ಸಾವಿರ ಶುಲ್ಕ ಕಟ್ಟಬೇಕಿತ್ತಂತೆ. ಕೊರಳಲ್ಲಿದ್ದ ಚಿನ್ನದ ಸರ ಅಡವಿಟ್ಟು ಹಣ ಪಾವತಿಸಿದ್ದರು.

ವಿದೇಶದಲ್ಲಿ ನಡೆಯಲಿದ್ದ ಯೂತ್ ಫೆಸ್ಟಿವಲ್ಗೆ ತಮ್ಮನ್ನು ಆಯ್ಕೆ ಮಾಡಿದ್ದು ಶಿವಕುಮಾರ್ಗೆ ಆಮೇಲೆ ಗೊತ್ತಾಗಿತ್ತು. ಅದೇ ಹೊತ್ತಿನಲ್ಲಿ ರಾಜೀವ್ ಭೇಟಿಯಾಗಿದ್ದ ಐವರು ಸಂಸದರು, ‘ಚಾಕು–ಚೂರಿ ರೌಡಿ ಹಿನ್ನೆಲೆಯವರನ್ನು ಬೆಳೆಸಿದರೆ ಸರಿಯಾಗದು’ ಎಂದು ತಕರಾರು ತೆಗೆದಿದ್ದರು. ಯಾರೋ ಮಾಡಿದ ತಪ್ಪುಗಳಿಗೆ ಆತನನ್ನು ಹೊಣೆ ಮಾಡುವುದು ಬೇಡ’ ಎಂದು ಸಂಸದರ ಮಾತನ್ನು ತಳ್ಳಿಹಾಕಿದ್ದ ರಾಜೀವ್, ತಮ್ಮನ್ನು ಅಂದೇ ಗುರುತಿಸಿದ್ದರು ಎಂದು ಶಿವಕುಮಾರ್ ಸಂದರ್ಶನವೊಂದರಲ್ಲಿ ತಾವೇ ಹೇಳಿಕೊಂಡಿದ್ದಾರೆ.

ಅದರ ಫಲ ನಂತರದ ದಿನಗಳಲ್ಲಿ ಕಾಣಿಸಿತು. 1985ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಅಂದಿನ ಜನತಾಪಕ್ಷದ ಪ್ರಭಾವಿ ಮುಖಂಡ ಎಚ್.ಡಿ. ದೇವೇಗೌಡರ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಶಿವಕುಮಾರ್ ಅವರನ್ನೇ ರಾಜೀವ್ ಕಣಕ್ಕೆ ಇಳಿಸಿದ್ದರು. ತಮ್ಮ ಚಿಕ್ಕವಯಸ್ಸಿನಲ್ಲೇ ಗೌಡರ ವಿರುದ್ಧ ತೊಡೆ ತಟ್ಟಿದ್ದ ಶಿವಕುಮಾರ್, ಅದನ್ನೇ ತಮ್ಮ ಶಕ್ತಿಯನ್ನಾಗಿ ಮಾಡಿಕೊಂಡರು. ಅದೇ ಅನೇಕ ಬಾರಿ ಅವರಿಗೆ ಮುಳು ಆಗಿದ್ದೂ ಉಂಟು.

ಅಲ್ಲಿಂದ ಶುರುವಾದ ರಾಜಕೀಯ ಪಯಣ ಮತ್ತೆ ನಿಲ್ಲಲಿಲ್ಲ. 1989ರಲ್ಲಿ ಮೊದಲ ಬಾರಿಗೆ ಸಾತನೂರು ಕ್ಷೇತ್ರದಿಂದ ಗೆದ್ದು ವಿಧಾನಸಭೆ ಪ್ರವೇಶಿಸಿದರು.

ಜೈಲುಮಂತ್ರಿ: ರಾಜೀವ್ಗಾಂಧಿ ಗುರುತಿಸಿದಷ್ಟಕ್ಕೇ ಅವರ ರಾಜಕೀಯ ಭವಿಷ್ಯ ಬೆಳೆಯಲಿಲ್ಲ. ಶಿವಕುಮಾರ್ ಅವರಲ್ಲಿ ಮತ್ತೊಬ್ಬ ನಾಯಕನನ್ನು ಕಂಡವರು, ನಾಡಿನ ಜನನಾಯಕರಾದ ಎಸ್. ಬಂಗಾರಪ್ಪ. ಸದಾಶಿವನಗರದಲ್ಲಿದ್ದ ಬಂಗಾರಪ್ಪನವರ ಮನೆಯ ಮುಂದಿನ ಕಟ್ಟೆಯ ಮೇಲೆ ಎಷ್ಟೋ ರಾತ್ರಿ ಕಳೆದಿರುವೆ ಎಂದು ಶಿವಕುಮಾರ್ ಹೇಳಿಕೊಳ್ಳುವುದುಂಟು. ಅದೇ ಬಂಗಾರಪ್ಪನವರು ಮುಖ್ಯಮಂತ್ರಿಯಾದಾಗ, ಸಚಿವ ಸಂಪುಟಕ್ಕೆ ಯಾರನ್ನು ಸೇರಿಸಿಕೊಳ್ಳಬೇಕು ಎಂಬ ಚರ್ಚೆ ನಡೆಯುತ್ತಿತ್ತು. ಆಗ, ಏಯ್ ಡಿ.ಕೆ, ನಿನಗೆ ಯಾವ ಖಾತೆ ಬೇಕೋ ಎಂದು ಕೇಳಿದರಂತೆ ಬಂಗಾರಪ್ಪ. ನೀವು ಹೇಳಿದಂತೆ ಆಗಲಿ ಎಂದು ಶಿವಕುಮಾರ್ ಹೇಳಿದರು. ಆಗ, ‘ದೇವರಾಜ ಅರಸು ಮೊದಲು ಜೈಲು ಮಂತ್ರಿಯಾಗಿ, ಬಳಿಕ ಮುಖ್ಯಮಂತ್ರಿಯಾದರು. ನಾನೂ ಮೊದಲು ಜೈಲು ಮಂತ್ರಿಯಾಗಿ ಮುಖ್ಯಮಂತ್ರಿಯಾದೆ. ನೀನೂ ಜೈಲು ಮಂತ್ರಿಯಾಗು’ ಎಂದಿದ್ದರಂತೆ. ಬಂಗಾರಪ್ಪನವರ ಮಾತನ್ನು ನವಿಲುಗರಿಯಂತೆ ಕಾಪಿಟ್ಟುಕೊಂಡಿದ್ದ ಶಿವಕುಮಾರ್ ಅವರಿಗೆ ಈಗ ಕನಸು ನನಸಾಗುವ ಕಾಲ ಬಂದಿದೆ.

1994ರಲ್ಲಿ ಜನತಾದಳ ಸರ್ಕಾರ ಬಂದ ಬಳಿಕ ಎಸ್.ಎಂ. ಕೃಷ್ಣ ರಾಜ್ಯಸಭೆಗೆ ಹೋದರು. 1999ರ ವಿಘಟನೆಯ ರಾಜಕಾರಣದಿಂದಾಗಿ ದಳ ಸೊರಗತೊಡಗಿತ್ತು. ಆಗ, ಕೆಪಿಸಿಸಿ ಸಾರಥಿಯಾಗಿ ಕರ್ನಾಟಕಕ್ಕೆ ಮರಳಿದ ಎಸ್.ಎಂ. ಕೃಷ್ಣ, ರಾಜ್ಯದಲ್ಲಿ ‘ಪಾಂಚಜನ್ಯ ಯಾತ್ರೆ’ ನಡೆಸಿದರು. ಅದರ ಹಿಂದೆ–ಮುಂದೆ ಓಡಾಡಿ ಅದರ ಯಶಸ್ಸಿಗೆ ಕಾರಣರಾದವರಲ್ಲಿ ಶಿವಕುಮಾರ್ ಪ್ರಮುಖರು. ಆ ಬಳಿಕ, ಕೃಷ್ಣ ಅವರ ನೀಲಿಗಣ್ಣಿನ ಹುಡುಗ ಎಂದೇ ಗುರುತಿಸಿಕೊಂಡ ಶಿವಕುಮಾರ್, ಕಾಂಗ್ರೆಸ್ನ ‘ಆಪತ್ಬಾಂಧವ’ ನಾಗಿ ಹೊರಹೊಮ್ಮತೊಡಗಿದರು.

ಮಹಾರಾಷ್ಟ್ರದ ವಿಲಾಸ್ರಾವ್ ದೇಶಮುಖ್ ಸರ್ಕಾರ ಇಕ್ಕಟ್ಟಿಗೆ ಸಿಲುಕಿದಾಗ, ಅಲ್ಲಿನ ಕಾಂಗ್ರೆಸ್ ಶಾಸಕರನ್ನು ಬೆಂಗಳೂರಿಗೆ ಕರೆತಂದು ರಕ್ಷಣೆ ಕೊಟ್ಟರು. ಸರ್ಕಾರ ಅಪಾಯದಿಂದ ಪಾರಾದ ಬಳಿಕ ಶಾಸಕರನ್ನು ಸುರಕ್ಷಿತವಾಗಿ ಮಹಾರಾಷ್ಟ್ರಕ್ಕೆ ಬಿಟ್ಟುಬಂದರು. ಇದು ಹೈಕಮಾಂಡ್ನಲ್ಲಿ ಶಿವಕುಮಾರ್ ಅವರ ಶಕ್ತಿಯನ್ನು ಗುರುತಿಸಲು ಸಹಕಾರ ನೀಡಿತು.

2004ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಅಷ್ಟರಲ್ಲಾಗಲೇ ಒಕ್ಕಲಿಗರ ಏಕಮಾನ್ಯ ಅಗ್ರಗಣ್ಯ ನಾಯಕರಾಗಿದ್ದ ಎಚ್.ಡಿ. ದೇವೇಗೌಡರು ಕನಕಪುರ ಲೋಕಸಭಾ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದರು. ಅವರೆದರು, ಯಾರಿಗೂ ಅಷ್ಟಾಗಿ ಪರಿಚಯವಿಲ್ಲದ ತೇಜಸ್ವಿನಿ ಗೌಡರನ್ನು ಕಣಕ್ಕೆ ಇಳಿಸಿ ಗೆಲ್ಲಿಸಿದರು. ಅದು ಶಿವಕುಮಾರ್ ಅವರ ಸಂಘಟನಾ ಶಕ್ತಿಗೆ ಮತ್ತಷ್ಟು ಮೆರಗುಕೊಟ್ಟಿತು.

2017ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇತ್ತು. ಗುಜರಾತ್ ವಿಧಾನಸಭೆಯಿಂದ ರಾಜ್ಯಸಭೆಗೆ ಚುನಾವಣೆ ನಡೆದಿತ್ತು. ಸೋನಿಯಾಗಾಂಧಿ ಅವರ ರಾಜಕೀಯ ಕಾರ್ಯದರ್ಶಿಯಾಗಿದ್ದ ಅಹಮದ್ ಪಟೇಲ್ ಅವರು ಗುಜರಾತ್ನಿಂದ ಕಣಕ್ಕೆ ಇಳಿದಿದ್ದರು. ಅವರನ್ನು ಹೇಗಾದರೂ ಸೋಲಿಸಬೇಕೆಂದು ಈಗಿನ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಟಕ್ಕೆ ಬಿದ್ದಿದ್ದರು. ಅಡ್ಡ ಮತದಾನ ತಡೆಯಲು ಗುಜರಾತ್ ಶಾಸಕರನ್ನು ಬೆಂಗಳೂರಿಗೆ ಹೈಕಮಾಂಡ್ ಕಳುಹಿಸಿದಾಗ, ಅವರ ಪೋಷಣೆಯ ಜವಾಬ್ದಾರಿ ಶಿವಕುಮಾರ್ ಹೆಗಲಿಗೆ ಬಿತ್ತು. ಶಾಸಕರಿದ್ದ ಹೋಟೆಲ್ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿದರು. ದೆಹಲಿಯಲ್ಲೂ ದಾಳಿ ನಡೆಯಿತು. ಈ ಪ್ರಕರಣದಲ್ಲಿ ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂದು ಆಪಾದಿಸಿದ ಜಾರಿ ನಿರ್ದೇಶನಾಲಯವು ಶಿವಕುಮಾರ್ ಅವರನ್ನು ಬಂಧಿಸಿ, ಬಳಿಕ ತಿಹಾರ್ ಜೈಲಿಗೆ ಕಳುಹಿಸಿತು. ಸುಮಾರು 50 ದಿನ ಜೈಲುವಾಸವನ್ನೂ ಅವರ ಕಂಡರು.

ಕುಮಾರ ಸರ್ಕಾರ: 2018ರಲ್ಲಿ ಬಹುಮತ ಸಿಗದೇ ಇದ್ದಾಗ ಜೆಡಿಎಸ್ನ ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡುವುದಾಗಿ ಕಾಂಗ್ರೆಸ್ ಘೋಷಿಸಿತು. ಮತ್ತೆ ಮೈತ್ರಿ ಸರ್ಕಾರದ ಯುಗ ಆರಂಭವಾಯಿತು. ಯಾವ ಶಿವಕುಮಾರ್ ಅವರನ್ನು ಅಂದು ದೇವೇಗೌಡರು ತಡೆದಿದ್ದರೊ, ಅದೇ ಶಿವಕುಮಾರ್ ಆಗ ಸರ್ಕಾರದ ಭಾಗವಾದರು.

2019ರ ಲೋಕಸಭೆ ಚುನಾವಣೆ ಬಳಿಕ ಆಪರೇಷನ್ ಕಮಲ ಬಿರುಸು ಪಡೆಯಿತು. ಇದು ಗೊತ್ತಿದ್ದರೂ ಕುಮಾರಸ್ವಾಮಿ ಅವರು ಕಾರ್ಯಕ್ರಮವೊಂದಕ್ಕೆ ಅಮೆರಿಕಕ್ಕೆ ತೆರಳಿದರು. ಏಕಾಏಕಿ ಕಾಂಗ್ರೆಸ್–ಜೆಡಿಎಸ್ ಒಟ್ಟು 19 ಶಾಸಕರು ರಾಜೀನಾಮೆ ಕೊಟ್ಟರು. ಅವರನ್ನೆಲ್ಲ ವಿಶೇಷ ವಿಮಾನದಲ್ಲಿ ಮುಂಬೈಗೆ ಕರೆದೊಯ್ಯಲಾಯಿತು. ಅಲ್ಲಿದ್ದ ದೇವೇಂದ್ರ ಫಡಣವೀಸ್ ಸರ್ಕಾರ ಈ ಶಾಸಕರಿಗೆ ಬೇಕಾದ ರಕ್ಷಣೆಯನ್ನೂ ನೀಡಿತ್ತು. ಸರ್ಕಾರ ಉಳಿಸುವ ಸಲುವಾಗಿ ತಮ್ಮ ಪಕ್ಷದ ಶಾಸಕರ ಮನವೊಲಿಸಲು ಮುಂಬೈಗೆ ಹೋದ ಶಿವಕುಮಾರ್, ಶಾಸಕರಿದ್ದ ಹೋಟೆಲ್ ಒಳಗೆ ಪ್ರವೇಶಿಸಲು ಅವಕಾಶ ಕೋರಿದರು. ಆದರೆ, ಪೊಲೀಸರು ಅವಕಾಶ ಕೊಡಲಿಲ್ಲ. ಸುರಿಯುವ ಮಳೆಯಲ್ಲಿಯೇ ಹೋಟೆಲ್ ಮುಂದೆ ಬಹುಹೊತ್ತು ಕಾದರೂ ಪ್ರಯೋಜನವಾಗಲಿಲ್ಲ. ಕೊನೆಗೆ ಸರ್ಕಾರ ಪತನವಾಯಿತು. ಯಾವ ಕುಮಾರಸ್ವಾಮಿ ವಿರುದ್ಧ ದಶಕಗಳ ಕಾಲ ಬಡಿದಾಡಿದ್ದರೋ ಅವರದೇ ಸರ್ಕಾರ ಉಳಿಸಲು ಶಿವಕುಮಾರ್ ಹೆಣಗಿದ್ದು ಇತಿಹಾಸವಾಗಿ ಉಳಿಯಿತು.

2023ರಲ್ಲಿ ಕಾಂಗ್ರೆಸ್ ಸರ್ಕಾರ ಬಂದರೂ ಮುಖ್ಯಮಂತ್ರಿಯಾಗುವ ಅವಕಾಶ ಸ್ವಲ್ಪದರಲ್ಲೇ ಕೈತಪ್ಪಿತು. ಸಿದ್ದರಾಮಯ್ಯನವರ ವಿರುದ್ಧ ಮುಡಾ ನಿವೇಶನದಲ್ಲಿ ಅಕ್ರಮ ನಡೆಸಲಾಗಿದೆ ಎಂದು ಆರೋಪಿಸಿದ ಬಿಜೆಪಿ, ಜೆಡಿಎಸ್ ನಾಯಕರು ಮುಖ್ಯಮಂತ್ರಿ ರಾಜೀನಾಮೆಗೆ ಆಗ್ರಹಿಸಿ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಹೊರಟರು. ಸಿದ್ದರಾಮಯ್ಯನವರ ವಿರುದ್ಧ ತಮ್ಮದೇ ಭಿನ್ನಭಾವ ಇದ್ದರೂ ಅದನ್ನು ಲೆಕ್ಕಿಸದ ಶಿವಕುಮಾರ್, ಕೆಪಿಸಿಸಿಯಿಂದ ಪರ್ಯಾಯ ಹೋರಾಟ ರೂಪಿಸಿದರು. ಬಿಜೆಪಿ, ಜೆಡಿಎಸ್ ಪಾದಯಾತ್ರೆ ಹೋದ ಕಡೆಗಳೆಲ್ಲಲ್ಲ, ತಮ್ಮ ಪಕ್ಷದಿಂದಲೂ ಸಿದ್ದರಾಮಯ್ಯನವರ ಪರವಾದ ಪಾದಯಾತ್ರೆ ನಡೆಸಿ, ಜಾಗೃತಿ ಮೂಡಿಸುವ ಕೆಲಸ ಮಾಡಿದರು. ಇದು, ಶಿವಕುಮಾರ್ ಅವರ ನಿಷ್ಕಾಮಕರ್ಮಕ್ಕೆ ಸಾಕ್ಷಿ.

ಎರಡೂವರೆ ವರ್ಷದ ಬಳಿಕ ಅಧಿಕಾರ ಹಂಚಿಕೆಯ ಒಪ್ಪಂದವಾಗಿದೆ ಎಂಬ ಮಾತುಗಳು ಕಾಂಗ್ರೆಸ್ ಪಡಸಾಲೆಯಲ್ಲಿ ಇದ್ದವು. ಒಂದೆರಡು ಬಾರಿ ಬಿಟ್ಟರೆ, ಈ ಬಗ್ಗೆ ಗಟ್ಟಿಧ್ವನಿಯಲ್ಲಿ ಶಿವಕುಮಾರ್ ತಮ್ಮ ಹಕ್ಕೊತ್ತಾಯ ಮಂಡಿಸಲಿಲ್ಲ, ಆಕ್ರಮಣಕಾರಿಯಾಗಿ ನಡೆದುಕೊಳ್ಳಲಿಲ್ಲ. ಇನ್ನಿಲ್ಲದ ಸಂಯಮ, ವಿವೇಕದಿಂದಲೇ ನಡೆದುಕೊಂಡರು. ಹೈಕಮಾಂಡ್ ಮನವೊಲಿಸಿ ತಮಗೆ ಬೇಕಾದುದನ್ನು ಸಾಧಿಸಿಬಿಟ್ಟರು.

ಅವಕಾಶ ತಪ್ಪಿಸಿದರೂ ಧೃತಿಗೆಡದ ನಾಯಕ

ಎಸ್.ಬಂಗಾರಪ್ಪನವರೇ ಗುರುತಿಸಿ ಸಚಿವರನ್ನಾಗಿ ಮಾಡಿದರೂ 1994ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ಅನ್ನು ಕೆಲವರು ತಪ್ಪಿಸಿದರು. ಶಿವಕುಮಾರ್ ಬಂಡಾಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದರು.

2004ರಲ್ಲಿ ನಡೆದ ವಿಧಾನಸಭೆ ಚುನಾವಣೆ ಬಳಿಕ ಕಾಂಗ್ರೆಸ್ ನಾಯಕರು ಜೆಡಿಎಸ್ ಮೈತ್ರಿಗೆ ಮುಂದಾದರು. ಎನ್. ಧರ್ಮಸಿಂಗ್ ನೇತೃತ್ವ ಸರ್ಕಾರ ಬಂದಿತು. ಶಿವಕುಮಾರ್ಗೆ ಮಂತ್ರಿ ಸ್ಥಾನ ಕೊಡಬಾರದು ಎಂದು ದೇವೇಗೌಡರು ಷರತ್ತು ಹಾಕಿದರು. ಇದರಿಂದಾಗಿ, ಆಗ ಸಚಿವ ಸ್ಥಾನ ಸಿಗಲಿಲ್ಲ.

2013ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೇರಿತು. ಪ್ರಭಾವಿಯಾಗಿದ್ದರೂ ಶಿವಕುಮಾರ್ಗೆ ಅವಕಾಶ ಸಿಗಲಿಲ್ಲ. ಸಿದ್ದರಾಮಯ್ಯನವರಿಗೂ ಮನಸ್ಸಿರಲಿಲ್ಲ.

ಆಗ ವಿಧಾನಸಭೆಗೆ ಆಯ್ಕೆಯಾಗಿದ್ದ ಎಚ್.ಡಿ. ಕುಮಾರಸ್ವಾಮಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಸ್ಥಾನಕ್ಕೆ, ಆಗ ಜೆಡಿಎಸ್ನಲ್ಲಿದ್ದ ಎನ್. ಚೆಲುವರಾಯಸ್ವಾಮಿ ಮಂಡ್ಯ ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇವರೆಡಕ್ಕೂ ಉಪಚುನಾವಣೆ ನಡೆಯಬೇಕಿತ್ತು. ಇದೇ, ವೇಳೆ ಒಮ್ಮೆ ದೆಹಲಿಯಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಶಿವಕುಮಾರ್, ತಮ್ಮನ್ನು ಸಂಪುಟಕ್ಕೆ ಸೇರಿಸಿಕೊಳ್ಳಿ ಎಂದು ಮನವಿ ಮಾಡಿದ್ದರು. ‘ಗ್ರಾಮಾಂತರ, ಮಂಡ್ಯ ಎರಡನ್ನೂ ಗೆಲ್ಲಿಸಿಕೊಂಡು ಬಾ, ಆಮೇಲೆ ನೋಡೋಣ’ ಎಂದಿದ್ದ ಸಿದ್ದರಾಮಯ್ಯ, ಅವರನ್ನು ಸಾಗಹಾಕಿದ್ದರು. ಗ್ರಾಮಾಂತರದಲ್ಲಿ ತನ್ನ ತಮ್ಮ ಡಿ.ಕೆ. ಸುರೇಶ್, ಮಂಡ್ಯದಲ್ಲಿ ರಮ್ಯಾ ಅವರನ್ನು ಶಿವಕುಮಾರ್ ಗೆಲ್ಲಿಸಿಕೊಂಡು ಬಂದ ಬಳಿಕವೇ ಸಂಪುಟ ಸೇರಿದ್ದರು.

ಕಠಿಣ ಪರಿಸ್ಥಿತಿಯಲ್ಲಿ ಕೆಪಿಸಿಸಿ ಸಾರಥ್ಯ

2018ರ ಚುನಾವಣೆಯಲ್ಲಿ ಕಾಂಗ್ರೆಸ್ ಸೋತಿದ್ದರೂ ಕುಮಾರಸ್ವಾಮಿ ಅವರಿಗೆ ಬೆಂಬಲ ಕೊಟ್ಟು ಮೈತ್ರಿ ಸರ್ಕಾರ ರಚಿಸಿತ್ತು. 2019ರ ಲೋಕಸಭೆ ಚುನಾವಣೆ ಬಳಿಕ ಬಿ.ಎಸ್. ಯಡಿಯೂರಪ್ಪ ನಡೆಸಿದ ಆಪರೇಷನ್ ಕಮಲದ ಕಾರಣದಿಂದಾಗಿ, ಕಾಂಗ್ರೆಸ್ನ 16 ಶಾಸಕರು ರಾಜೀನಾಮೆ ಕೊಟ್ಟಿದ್ದರು. ಇದರಿಂದಾಗಿ ಬಿಜೆಪಿ ಸರ್ಕಾರ ಬಂದಿತ್ತು.

ಕೆಲವರು ಕಾಂಗ್ರೆಸ್ ತೊರೆದಿದ್ದು, ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾದ ಹೊತ್ತಿನೊಳಗೆ ಪಕ್ಷಕ್ಕೆ ಮರು ಜೀವ ಕೊಡುವ ಹೊಣೆ ಹೊರಲು ಯಾರೂ ಸಿದ್ದರಿರಲಿಲ್ಲ. ಆ ಕಠಿಣ ಪರಿಸ್ಥಿತಿಯಲ್ಲಿ ಹೆಗಲು ಕೊಟ್ಟವರು ಶಿವಕುಮಾರ್. ಅದಾದ ಕೆಲವೇ ತಿಂಗಳುಗಳಲ್ಲಿ ಕೋವಿಡ್ ಆವರಿಸಿತು. ಅಂತಹ ಸಂಕಷ್ಟದ ಸಮಯದಲ್ಲಿ ಜನರ ಜತೆಗೆ ನಿಂತ ಶಿವಕುಮಾರ್, ಪಕ್ಷದ ಪರ ಒಲವುಗಳಿಸಲು ಯಶಸ್ವಿಯಾದರು. ಸಿದ್ದರಾಮಯ್ಯ ಅವರ ಹೆಗಲಿಗೆ ಹೆಗಲು ಕೊಟ್ಟು, ಬಿಜೆಪಿ ಸರ್ಕಾರದ ವಿರುದ್ಧ ಹಲವು ಹೋರಾಟಗಳನ್ನು ನಡೆಸಿದರು. ಪರಿಣಾಮ 2023ರಲ್ಲಿ ಕಾಂಗ್ರೆಸ್ಗೆ ಅಧಿಕಾರ ದಕ್ಕಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.